ನೇಕಾರರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ವಿತರಿಸುವ ಬಗ್ಗೆ ಚರ್ಚೆ: ಶಿವಾನಂದ ಪಾಟೀಲ

1 year ago

ಬೆಂಗಳೂರು: ಸಾಲ ಬಾಧೆ, ವ್ಯಾಪಾರದಲ್ಲಿ ನಷ್ಟ ಕಾರಣಕ್ಕೆ ಕೈಮಗ್ಗ ನೇಕಾರರ ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಯಾವುದೇ ಯೋಜನೆ ಸರ್ಕಾರದಲ್ಲಿ ಇಲ್ಲ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ಸಿನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನೇಕಾರರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ವಿತರಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೈಮುಗ್ಗ ನೇಕಾರರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ಅವರ ಕುಟುಂಬ ಸದಸ್ಯರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಭಿಮಾ ಯೋಜನೆಯಲ್ಲಿ 2 ಲಕ್ಷ ರೂ. ಪರಿಹಾರ ವಿತರಣೆ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯ ವಿಮಾ ಕಂತನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಈ 2 ಲಕ್ಷ ರೂ.ಗಳೊಂದಿಗೆ ಸಿಎಂ ಪರಿಹಾರ ನಿಧಿಯಿಂದಲೂ 3 ಲಕ್ಷ ರೂ. ಪರಿಹಾರ ವಿತರಣೆ ಮಾಡುವ ಬಗ್ಗೆ ಸಿಎಂ ಜತೆ ಚರ್ಚಿಸುತ್ತೇನೆ ಎಂದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿತರಣೆ ಮಾಡುವ ಯೋಜನೆ ಜಾರಿಯಲ್ಲಿ ಇರಲಿಲ್ಲ. ಆದರೆ ಕೋವಿಡ್ ಅವಧಿಯಲ್ಲಿ 25 ಮೃತ ನೇಕಾರರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳಂತೆ 1.25 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಈ ಪರಿಹಾರ ವಿತರಣೆ ಯೋಜನೆ ಮುಂದುವರಿಕೆಗೆ ಆರ್ಥಿಕ ಇಲಾಖೆ ಅನುಮೋದನೆಗೆ ಪ್ರಯತ್ನಿಸಲಾಗುವುದು ಎಂದರು.

ಆತ್ಮಹತ್ಯೆ ಮಾಡಿಕೊಂಡ ನೇಕಾರನ ಪತ್ನಿಗೆ ಪಿಂಚಣಿ ಅಥವಾ ಮೃತರ ಮಕ್ಕಳಿಗೆ ಉಚಿತಿ ಶಿಕ್ಷಣ ನೀಡುವ ಯೋಜನೆ ಇಲ್ಲ. ಆದರೆ 2,500 ರೂ.ಗಳಿಂದ 11 ಸಾವಿರ ರೂ.ಗಳವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 2022-23ನೇ ಸಾಲಿನಲ್ಲಿ 3,664 ವಿದ್ಯಾರ್ಥಿಗಳಿಗೆ 1.63 ಕೋಟಿ ರೂ. ಹಾಗೂ 2023-24ನೇ ಸಾಲಿನಲ್ಲಿ 3,689 ವಿದ್ಯಾರ್ಥಿಗಳಿಗೆ 1.99 ಕೋಟಿ ರೂ. ವಿದ್ಯಾರ್ಥಿ ವೇತನವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದರು.

ಕಾಂಗ್ರೆಸಿನ ದಿನೇಶ್ ಗೂಳಿ ಗೌಡ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಶಿವಾನಂದ ಪಾಟೀಲ್, ರಾಜ್ಯದ 65 ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 3101.91 ಕೋಟಿ ರೂಪಾಯಿ ಬಾಕಿ ಇದ್ದು, ಶೀಘ್ರದಲ್ಲೇ ಹಣ ಪಾವತಿಸುವಂತೆ 33 ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ 99 ಸರ್ಕಾರಿ ಕಾರ್ಖಾನೆಗಳಿವೆ. ಅದರಲ್ಲಿ 79 ಕಾರ್ಖಾನೆಗಳು ಕಾರ್ಯನಿರತವಾಗಿವೆ. 2024- 25 ನೇ ಹಂಗಾಮಿನಲ್ಲಿ 2025ರ ಫೆಬ್ರವರಿ 28ರ ಅಂತ್ಯಕ್ಕೆ ಕಬ್ಬು ಪೂರೈಕೆ ಮಾಡಿದ ರೈತರಿಗೆ 17,596.92 ಕೋಟಿ ರೂ. ಬಿಲ್ ಪಾವತಿಸಬೇಕಿತ್ತು, ಅದರಲ್ಲಿ 14,655.91 ಕೋಟಿ ರೂಪಾಯಿ ಬಿಲ್ ಪಾವತಿ ಮಾಡಲಾಗಿದೆ. ವಿಳಂಬ ಮಾಡಿರುವ ಕಾರ್ಖಾನೆಗಳು ವಿಳಂಬದ ದಿನಗಳನ್ನು ಲೆಕ್ಕ ಹಾಕಿ ಶೇ. 15 ರಷ್ಟು ಬಡ್ಡಿಯನ್ನು ರೈತರಿಗೆ ಪಾವತಿಸಬೇಕಾಗುತ್ತದೆ ಎಂದರು.

Leave a Reply