ಕೋಲಾರದಲ್ಲಿ ಜೆಡಿಎಸ್ ಶಾಸಕರ ಅಸಮಾಧಾನ: ಕಾಂಗ್ರೆಸ್ ಸೇರುವ ಸಾಧ್ಯತೆ

2 years ago

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲಬೇಕು ಎಂದು ಬಿಜೆಪಿ ಜಾತ್ಯಾತೀತ ಜನತಾದಳದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕ್ರಮದ ವಿರುದ್ಧ ಜೆಡಿಎಸ್ ನಲ್ಲಿ ಅಸಮಾಧಾನ ತೀವ್ರಗೊಂಡಿದೆ.

ಹೈಕಮಾಂಡ್ ಮಟ್ಟದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ವಿರೋಧಿಸಿ ಕೋಲಾರ ಜಿಲ್ಲೆಯಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಇಬ್ಬರು ಶಾಸಕರು ಇದೀಗ ಜೆಡಿಎಸ್ ಗೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ.

ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ ಸಮಯದಲ್ಲಿ ಶ್ರೀನಿವಾಸಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಜೆಡಿಎಸ್ ಶಾಸಕ ವೆಂಕಟಶಿವಾ ರೆಡ್ಡಿ, ಮುಳಬಾಗಿಲು ಕ್ಷೇತ್ರದ ಶಾಸಕ ಸಮೃದ್ಧಿ ಮಂಜುನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಅವರು ಈ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಈ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ಶಾಸಕ ಕೊತ್ತೂರು ಮಂಜುನಾಥ, ಜೆಡಿಎಸ್ ನ ಕಾರ್ಯವೈಖರಿಯಿಂದ ಬೇಸರಗೊಂಡಿರುವ ಈ ಇಬ್ಬರು ಸದ್ಯದಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರವನ್ನು ಕಾಂಗ್ರೆಸ್ ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸುತ್ತಿದೆ. ಹೀಗಾಗಿ ಇವರ ಸೇರ್ಪಡೆ ಪಕ್ಷಕ್ಕೆ ಹೆಚ್ಚಿನ ಬಲತಂದು ಕೊಡಲಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

ಈ ವಿಷಯವಾಗಿ ಸಿಎಂ ಸಿದ್ದರಾಮಯ್ಯ ಅವರು ಸ್ಥಳೀಯ ಮಟ್ಟದಲ್ಲಿ ಮಾತುಕತೆ ನಡೆಸುವಂತೆ ತಮಗೆ ಸಲಹೆ ಮಾಡಿದ್ದು, ಅದರಂತೆ ತಾವು ಮಾಜಿ ಮಂತ್ರಿ ರಮೇಶ್ ಕುಮಾರ್ ಸೇರಿದಂತೆ ಸಮಾಲೋಚನೆ ನಡೆಸುತ್ತಿರುವುದಾಗಿ ಹೇಳಿದರು.

Leave a Reply