ಕಟ್ಟುವವರು ಬಹಳ ಬೇಗ ಒಡೆದುಹೋಗುತ್ತಾರೆ: ದಿನೇಶ್ ಅಮಿನ್ ಮಟ್ಟು

4 years ago

ಭಾರತೀಯ ಜನತಾ ಪಕ್ಷವೂ ಸೇರಿದಂತೆ ಸಂಘಪರಿವಾರದ್ದು ಕೈಗೆಟುಕದ ದ್ರಾಕ್ಷಿ ಹುಳಿ ಎಂದ ನರಿಯ ಕತೆ. ಬುದ್ದಿಜೀವಿಗಳು,ಸಾಹಿತಿಗಳು, ಚಿಂತಕರು ಎಂದರೆ ಅವರು ಗಾಂಧಿವಾದಿಗಳು, ಅಂಬೇಡ್ಕರ್ ವಾದಿಗಳು, ಮಾರ್ಕ್ಸ್ ವಾದಿಗಳು, ಲೋಹಿಯಾವಾದಿಗಳು ಎಂದರ್ಥ ಎನ್ನುವ ಅಲಿಖಿತ ನಿಯಮ ಈಗಲೂ ಇದೆ. ಯಾವ ಬುದ್ದಿಜೀವಿಗಳು, ಸಾಹಿತಿಗಳು, ಚಿಂತಕರೂ ಅವರು ಗುಪ್ತಸಂಘಿಗಳು ಆಗಿದ್ದರೂ ಕೂಡಾ ಬಹಿರಂಗವಾಗಿ ತಾನು ಹೆಗಡೆವಾರ್ ವಾದಿ, ಸಾವರ್ಕರ್ ವಾದಿ, ಗೋಡ್ಸೆ ವಾದಿ ಎಂದು ಹೇಳಿಕೊಳ್ಳುವುದಿಲ್ಲ. ಇದು ಸಂಘಪರಿವಾರದ ಹಳೆಯ ಕೊರಗು.

ಅಧಿಕಾರದ ಬಲದಿಂದ ಈ “ಬುದ್ದಿಜೀವಿ ನಿರ್ವಾತ”ವನ್ನು ತುಂಬಲು ಅವರು ಸತತ ಪ್ರಯತ್ನ ಪಡುತ್ತಲೇ ಇದ್ದಾರೆ. ಭೈರಪ್ಪ, ದೊಡ್ಡರಂಗೇಗೌಡ ಮೊದಲಾದ ಬೆರಳೆಣಿಕೆಯ ಸಾಹಿತಿಗಳನ್ನು ಹೊರತುಪಡಿಸಿದರೆ ಕೊನೆಗೂ ಅವರಿಗೆ ಸಿಕ್ಕಿದ್ದು ವಕ್ರತೀರ್ಥ,ಹೆಂಗ್ ಪುಂಗ್ಲಿಯಂತಹ ಸುಳ್ಳುಬುರುಕ ಮಾನಗೇಡಿಗಳು ಮಾತ್ರ. ಈ ಕೊರತೆಯನ್ನು ಮರೆಮಾಚಲು ಅವರು ಮಾಡುತ್ತಾ ಬಂದ ಪ್ರಯತ್ನವೇ ಬುದ್ದಿಜೀವಿಗಳೆಂದರೆ ಲದ್ದಿಜೀವಿಗಳು, ಚಿಂತಕರು ಎಂದರೆ ಹಂತಕರು, ಗಂಜಿ ಗಿರಾಕಿಗಳು, ಅಧಿಕಾರದ ಕುರ್ಚಿಗಳಿಗೆ ಟವೆಲ್ ಹಾಕುವವರು ಎಂಬ ಕುತ್ಸಿತ ಬುದ್ದಿಯ ಕುಹಕದ ಅಪಪ್ರಚಾರ. ಈ ಅಭಿಯಾನವನ್ನು ಅವರೂ ಮಾಡುತ್ತಾರೆ, ಒಮ್ಮೊಮ್ಮೆ ಈ ಕೆಲಸವನ್ನು ಔಟ್ ಸೋರ್ಸ್ ಮಾಡಿ ಬೇರೆಯವರಿಗೆ ಸುಫಾರಿಯನ್ನೂ ಕೊಡುತ್ತಾರೆ.

ಈ ಕುಹಕದ ಅಭಿಯಾನಕ್ಕೆ ಕಂಗಲಾಗುವ ನಮ್ಮ ಅನೇಕ ಚಿಂತಕರು, ಸಾಹಿತಿಗಳು, ಹೋರಾಟಗಾರರು ತಕ್ಷಣ ಪ್ರತಿಕ್ರಿಯಿಸಿ ‘ನಾನವನಲ್ಲಪ್ಪ’ ನಾನು ಅಂತಹವನಲ್ಲಪ್ಪ, ನನಗೇನೂ ಆಸೆ ಇಲ್ಲಪ್ಪ’ ಎಂದು ಸ್ಪಷ್ಟೀಕರಣ ಕೊಡಲು ಶುರುಮಾಡುತ್ತಾರೆ. ಇದರ ಜೊತೆಗೆ ಹಿಂದೆ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದವರನ್ನು ಜರಿಯಲು ಶುರುಮಾಡುತ್ತಾರೆ.

ರಾಜಕೀಯ ಪಕ್ಷಗಳೆಂದರೆ ಬಡಾವಣೆ ಅಭಿವೃದ್ದಿ ಸಮಿತಿ ಅಲ್ಲ, ಅದಕ್ಕೊಂದು ಸಿದ್ದಾಂತ ಇರುತ್ತದೆ. ಒಂದು ಪಕ್ಷವನ್ನು ಬೆಂಬಲಿಸುವವರು ಕೇವಲ ರಸ್ತೆ,ನೀರು,ಲೈಟ್ ಗಾಗಿ ಮತಹಾಕುವುದಿಲ್ಲ, ಪಕ್ಷದ ಸಿದ್ದಾಂತವನ್ನು ಕೂಡಾ ಅವರು ಗಣನೆಗೆ ತೆಗೆದುಕೊಳ್ಳುತ್ತಾರೆ. ಇದು ಒಬ್ಬ ಪ್ರಜೆಯ ಕರ್ತವ್ಯಕೂಡಾ ಆಗಿದೆ. ಸಾಹಿತಿಗಳು, ಚಿಂತಕರು, ಹೋರಾಟಗಾರರು ಕೂಡಾ ಪ್ರಜೆಗಳು ಮತ್ತು ಮತದಾರರು. ಅವರು ಪಕ್ಞಾತೀತರಾಗಿ ಇರಬೇಕಾದ ಅಗತ್ಯವೂ ಇಲ್ಲ. ಅವರು ಪಕ್ಷದ ಸದಸ್ಯರೂ ಆಗಬೇಕಾಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಚುನಾವಣಾ ರಾಜಕೀಯ ಮುಖವಾಡ ಮಾತ್ರ ಅದರ ಹಿಂದೆ ಇರುವುದು ಸಾಂಸ್ಕೃತಿಕ ರಾಜಕೀಯದ ಮುಖ ಎಂದು ತಿಳಿದುಕೊಂಡರೆ ಇದು ಇನ್ನು ಸ್ಪಷ್ಟವಾಗಬಹುದು. ಶತ್ರುಗಳನ್ನು ಗುರುತಿಸದೆ ಇದ್ದರೆ ಯುದ್ದವನ್ನು ಗೆಲ್ಲಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಸೈದ್ದಾಂತಿಕ ಸಹಮತ ಹೊಂದಿದವರನ್ನು ಕರೆದು ಸರ್ಕಾರ ಅನುದಾನ ನೀಡುತ್ತಿರುವ ಭಾಷೆ-ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳಿಗೆ ಆಹ್ಹಾನಿಸಿ ನೇಮಿಸಿಕೊಳ್ಳುವುದು ರೂಢಿ. ಇಂತಹ ಸಂಸ್ಥೆಗಳ ಜವಾಬ್ದಾರಿ ವಹಿಸುವಂತೆ ಸರ್ಕಾರ ಆಹ್ಹಾನ ನೀಡುವುದು ಮತ್ತು ಅದನ್ನು ಸಾಹಿತಿಗಳು,ಚಿಂತಕರು ಹೋರಾಟಗಾರರು ಒಪ್ಪಿಕೊಳ್ಳುವುದು ಅಪರಾಧ ಅಲ್ಲ, ಅದು ಎರಡು ಕಡೆಗಳ ಕರ್ತವ್ಯ.

ನಾಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಕಾಡೆಮಿ, ಪ್ರಾಧಿಕಾರಗಳ ಹುದ್ದೆಗಳನ್ನು ಖಾಲಿ ಬಿಡಲಿಕ್ಕೆ ಆಗುತ್ತಾ? ಇಲ್ಲದೆ ಇದ್ದರೆ ಬಿಜೆಪಿ ಇಲ್ಲವೇ ಆ ಪಕ್ಷದ ಬಿಟೀಮ್ ಗೆ ಸೇರಿದವರನ್ನು ತಂದು ಕುರ್ಚಿಯಲ್ಲಿ ಕೂರಿಸಲಾಗುತ್ತಾ?

ಪ್ರಶ್ನೆ ಅರ್ಹತೆಯದ್ದು ಮಾತ್ರ. ಹಿಂದಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ನಮ್ಮ ಅನೇಕ ಸಾಹಿತಿಗಳು,ಚಿಂತಕರು ಅಕಾಡೆಮಿ,ಪ್ರಾಧಿಕಾರಗಳಿಗೆ ಅಧ್ಯಕ್ಷರಾಗಿ, ಸದಸ್ಯರಾಗಿ ನೇಮಕಗೊಂಡರು. ವಿಶ್ವವಿದ್ಯಾಲಯದ ಕುಲಪತಿಗಳಾದರು. ಅವರನ್ನು ಗಂಜಿ ಗಿರಾಕಿಗಳೆಂದು ಹಳಿದಿರಬಹುದು, ಆದರೆ ಅವರ ಅರ್ಹತೆ, ಪ್ರಾಮಾಣಿಕತೆ ಮತ್ತು ಸಾಧನೆ ಬಗ್ಗೆ ಯಾರಾದರೂ ಸೈದ್ದಾಂತಿಕ ವಿರೋಧಿಗಳಾದರೂ ಆರೋಪ ಮಾಡಿದ್ದಾರೆಯೇ?.

ಕಾಂಗ್ರೆಸ್ ಪಕ್ಷವನ್ನು ಬಹಿರಂಗವಾಗಿಯೇ ಬೆಂಬಲಿಸಿದ ಎಷ್ಟು ಮಂದಿ ಸಾಹಿತಿಗಳು, ಹೋರಾಟಗಾರರು ಹಿಂದಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ವಿಧಾನಪರಿಷತ್, ರಾಜ್ಯಸಭೆಗೆ ನಾಮಕರಣ ಗೊಂಡಿದ್ದಾರೆ? ಎಷ್ಟು ಮಂದಿ ಚುನಾವಣೆಯಲ್ಲಿ ಟಿಕೆಟ್ ಕೇಳಿದ್ದಾರೆ? ಎಷ್ಟು ಮಂದಿ ಬಿಡಿಎ ಸೈಟು ಮಾಡಿಕೊಂಡಿದ್ದಾರೆ?

ನಾನೇ ಐದು ವರ್ಷ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿದ್ದೆ. ಇವರಲ್ಲಿ ಯಾರೊಬ್ಬರೂ ಕೂಡಾ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ನನ್ನ ಬಳಿ ಬಂದಿಲ್ಲ. ಕೋಮುವಾದದ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಾಹಿತಿ ದೇವನೂರ ಮಹದೇವ ಅವರು ಒಪ್ಪಿಕೊಂಡಿದ್ದರೆ ಈಗಾಗಲೇ ನಾಲ್ಕೈದು ಅವಧಿಗೆ ಶಾಸಕರಾಗಿ ಸಚಿವರೂ ಆಗುತ್ತಿದ್ದರು. ಆದ್ದರಿಂದ ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಕುಹಕಿಗಳಿಗೆ ಸ್ಪಷ್ಟೀಕರಣ ನೀಡುವ ಅಗತ್ಯವೂ ಇಲ್ಲ.

ಸಂವಿಧಾನದ ಆಶಯಗಳಿಗೆ ಬದ್ದವಾದ ಪಕ್ಷವೊಂದು, ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದು ಹೇಳಿಕೊಂಡು ಅಡ್ಡಾಡುವ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡ ವ್ಯಕ್ತಿಯನ್ನು ತಂದು ಸ್ಥಾನಮಾನ ನೀಡಿದರೆ ಇಲ್ಲವೇ, ತಾನು ಜಾತ್ಯತೀತ ಎಂದು ಹೇಳಿಕೊಳ್ಳುವ ವ್ಯಕ್ತಿ ಅಧಿಕಾರದ ಹಿಂದೆ ಬಿದ್ದು ಕೋಮುವಾದಿ ಪಕ್ಷದ ಸರ್ಕಾರದಲ್ಲಿ ಯಾವುದಾದರೂ ಕುರ್ಚಿ ಮೇಲೆ ಕೂತರೆ ತಪ್ಪು.

ಬಹಳ ಮಂದಿ ಮರೆತುಬಿಟ್ಟ ಸಂಗತಿ ಇದೆ. ಇಂದು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತ ಅನೇಕ ಸಾಹಿತಿಗಳು,ಚಿಂತಕರು,ಹೋರಾಟಗಾರರು 1975ರಲ್ಲಿ ತುರ್ತುಪರಿಸ್ಥಿತಿ ವಿರುದ್ದದ ಹೋರಾಟದಲ್ಲಿ ಭಾಗವಹಿಸಿದವರೇ ಆಗಿದ್ದಾರೆ. ಅದು ಆ ಕಾಲದ ಕರೆ, ಇದು ಈ ಕಾಲದ ಕರೆ. ಯಾರಿಗೆ ಗೊತ್ತು ಮುಂದೊಂದು ದಿನ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಕಾಲವೂ ಬರಬಹುದು. ನಿಜವಾದ ಪ್ರಜಾಪ್ರಭುತ್ವವಾದಿ ತನ್ನ ಕಾಲದ ಕರೆಗೆ ಓಗೊಡಬೇಕಾಗುತ್ತದೆ.

ಒಡೆಯುವವರು ಬಹಳ ಬೇಗ ಒಟ್ಟಾಗುತ್ತಾರೆ, ಕಟ್ಟುವವರು ಬಹಳ ಬೇಗ ಒಡೆದುಹೋಗುತ್ತಾರೆ. ಇದು ಕಟ್ಟಲು ಹೊರಟವರಿಗೂ ಗೊತ್ತಿರಬೇಕು.

ದಿನೇಶ್ ಅಮಿನ್ ಮಟ್ಟು

Leave a Reply