ಮಾನ್ಯ ಮುಖ್ಯಮಂತ್ರಿಗಳಿಗೆ ಒಂದು ಬಹಿರಂಗ ಪತ್ರ
ಇವರಿಗೆ,
ಸನ್ಮಾನ್ಯ ಸಿದ್ದರಾಮಯ್ಯನವರು
ಕರ್ನಾಟಕ ರಾಜ್ಯ ಸರ್ಕಾರ,
ಬೆಂಗಳೂರು
ಇವರಿಂದ,
ದೇವನೂರ ಮಹಾದೇವ
53, 11ನೆಯ ಕ್ರಾಸ್,
ನವಿಲು ರಸ್ತೆ
ಕುವೆಂಪುನಗರ, ಮೈಸೂರು
ನಾನು ಗೊಂದಲ, ಆತಂಕಗಳ ನಡುವೆ ತಮಗೆ ಈ ಪತ್ರ ಬರೆಯುತ್ತಿರುವೆ. ಒಳಮೀಸಲಾತಿ ವರದಿ ವಿವಾದಕ್ಕೊಳಗಾಗಿ, ಎಲ್ಲಿ ಮುಂದೂಡಲ್ಪಡುತ್ತದೊ ಎಂಬುದು ನನ್ನನ್ನು ತುಂಬಾ ಕಾಡುತ್ತಿದೆ. ಜೊತೆಗೆ, ಖಾಲಿ ಇರುವ ಉದ್ಯೋಗಗಳಿಗೂ ನೇಮಕಾತಿ ಇಲ್ಲದೆ ಏಗುತ್ತಿರುವ ತರುಣರು, ತಮ್ಮ ತಾರುಣ್ಯ ಕಳೆದುಕೊಂಡು ಮಧ್ಯ ವಯಸ್ಕರಾಗುತ್ತಿದ್ದಾರೆ. ಇದು ತುಂಬಾನೆ ದಯನೀಯ ಪರಿಸ್ಥಿತಿ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಇಂತಹ ಪರಿಸ್ಥಿತಿಯಲ್ಲಿ ನನಗೆ ತೋರುತ್ತಿರುವ ಪರಿಹಾರ ಇದು. ಒಂದು, ಜಸ್ಟೀಸ್ ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು. ಇದರ ಜೊತೆಗೇನೆ, ಇಂದು ದಲಿತ ಸಮುದಾಯವೂ ದಿನದಿನಕ್ಕೂ ಚಲನಶೀಲತೆ ಪಡೆದುಕೊಂಡು ಬದಲಾವಣೆಯಾಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮೀಸಲಾತಿ ಪ್ರಾತಿನಿಧ್ಯವನ್ನು ಸಮತೋಲನ ಮಾಡುವುದಕ್ಕಾಗಿ ಹಾಗೂ ಕಾಲಕಾಲಕ್ಕೆ ಹೊಸ ದತ್ತಾಂಶಗಳಿಂದ ಒಳ ಮೀಸಲಾತಿಯ ಪ್ರಮಾಣವನ್ನು ಪರಿಷ್ಕರಿಸಲು, ಹಿಂದುಳಿದ ವರ್ಗಗಳಿಗೆ ಇರುವಂತೆಯೇ, ಪರಿಶಿಷ್ಟ ಜಾತಿಗಳ ಆಯೋಗಕ್ಕೂ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಒದಗಿಸಬೇಕು ಎಂಬುದು ನನ್ನ ಭಾವನೆ. ಈ ರೀತಿಯಾದರೆ ಆ ಆಯೋಗದ ಮುಂದೆ, ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯ ಬಗ್ಗೆ ಇರಬಹುದಾದ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಸಾಧ್ಯತೆ ಹೆಚ್ಚುತ್ತದೆ.
ಈ ಹಿಂದೆ ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷರಾಗಿ ಜಸ್ಟೀಸ್ ನಾಗಮೋಹನ್ ದಾಸ್ ಅವರು ಸಲ್ಲಿಸಿದ ವರದಿಯಲ್ಲಿ ‘ಪರಿಶಿಷ್ಠ ಜಾತಿ ಸಮುದಾಯವು 17.98%, ಪರಿಶಿಷ್ಠ ಪಂಗಡವು 7.41% ಜನಸಂಖ್ಯೆ ಇರುವುದರಿಂದ ಎಸ್‌ಸಿಗೆ 18% ಹಾಗೂ ಎಸ್‌ಟಿಗೆ 7.50% ನೀಡುವುದು ಸೂಕ್ತ’ ಎಂದಿದ್ದರು. (ಆದರೆ, ಅಂದು ಆ ಆಯೋಗದ ಮುಂದೆ 17%ಗೆ ಏರಿಸುವ ವಿಚಾರವಷ್ಟೇ ಇದ್ದುದರಿಂದ, ಶಿಫಾರಸ್ಸು ಅಷ್ಟಕ್ಕೆ ಸೀಮಿತವಾಗಿತ್ತು). ತಾವು 1% ಹೆಚ್ಚಳದ ನಿರ್ಧಾರ ಕೈಗೊಂಡರೆ ಹೆಚ್ಚುವರಿಯಾಗಿ ಸಿಗುವ 1% ನಿಂದ ಇಂದಿನ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಇದು ಸರ್ಕಾರದ ಕೈಯಲ್ಲೇ ಇದೆ ಎಂದುಕೊಂಡಿದ್ದೇನೆ. ನೀವು ಈ ಕುರಿತು ಆಶ್ವಾಸನೆ ನೀಡಿದರೂ ದಲಿತ ಸಮುದಾಯ ನಂಬುತ್ತದೆ.
01-08-2024ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪರಿಶಿಷ್ಠ ಜಾತಿಗಳು ವೈವಿಧ್ಯಮಯ ಭಿನ್ನರೂಪತೆಯ (Heterogeneous) ಗುಂಪುಗಳಾಗಿವೆ ಎಂದು ಅಭಿಪ್ರಾಯ ನೀಡಿದೆ. ವರ್ಗೀಕರಣ ನಿರ್ಧರಿಸುವಾಗ ಸರ್ವಾಂಗೀಣ ಹಿಂದುಳಿದಿರುವಿಕೆಯನ್ನೂ ಪರಿಗಣಿಸಿ ನಿರ್ಧರಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಸ್ಟೀಸ್ ನಾಗಮೋಹನ್‌ದಾಸ್‌ರವರ ವರದಿಯನ್ನು ಗಮನಿಸಿದರೆ ಅದು ಸುಪ್ರೀಂ ಕೋರ್ಟ್ ಆಶಯಕ್ಕೆ ತಕ್ಕಂತೆಯೇ ಇರುವಂತೆ ಕಾಣಿಸುತ್ತದೆ.
ಇದಲ್ಲದೆ, ಜಸ್ಟೀಸ್ ನಾಗಮೋಹನ್‌ದಾಸ್ ವರದಿಯು ಸಮಗ್ರ ಸಮೀಕ್ಷೆ ಮಾಡುವ ಮೂಲಕವೇ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ವಿಸ್ತಾರವಾದ ಸಮೀಕ್ಷೆ ಮಾಡಿ 94% ರಷ್ಟು ಜನರ ಮಾಹಿತಿ ಸಂಗ್ರಹಿಸಿದೆ. ಮನೆ ಮನೆ ಸರ್ವೇ, ನಿಗಧಿತ ಕೇಂದ್ರಗಳಲ್ಲಿ ಸರ್ವೆ, Online ಸರ್ವೆ ಅವಕಾಶ ಹೀಗೆ ಸಮಗ್ರ ಪ್ರಯತ್ನ ಮಾಡಿದೆ. ಈ ರೀತಿ ಸಮೀಕ್ಷೆ ಅಪರೂಪ. ಮೊದಲು ಇದನ್ನು ಎಲ್ಲರೂ ಗೌರವಿಸಬೇಕಾಗಿದೆ. ಹಾಗೆಂದು ಈಗ ಎದ್ದಿರುವ ಆಕ್ಷೇಪಣೆಗಳನ್ನು ತಳ್ಳಿ ಹಾಕಬೇಕಿಲ್ಲ. ಅವನ್ನು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ತಾವು ಘೋಷಣೆ ಮಾಡುವುದಾದರೆ, ಅದು ಮುಂದಿನ ದಿನಗಳಲ್ಲಿಕಾಲಕಾಲಕ್ಕೆ ಲಭ್ಯವಾಗುವ ಜಾತಿ/ಜನಗಣತಿಯ ದತ್ತಾಂಶಗಳ ಮೂಲಕ ಪರಿಷ್ಕರಣೆಯ ಮೂಲಕ ಸಮತೋಲನ ಮಾಡಲು ಅವಕಾಶವಾಗುತ್ತದೆ.
ಕೊನೆಯದಾಗಿ, 1) ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು 18% ಮತ್ತು 7.5% ಮಾಡುವ ಬಗ್ಗೆ ಆಶ್ವಾಸನೆ ನೀಡುವುದು.2) ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಕಾರ್ಯವ್ಯಾಪ್ತಿ ಹಾಗೂ ಅಧಿಕಾರದ ಘೋಷಣೆ ಮಾಡುವುದು. 3) ಮೀಸಲಾತಿಯನ್ನು ನೀಡದಿರುವುದಕ್ಕಾಗಿಯೇ ಹುಟ್ಟಿಕೊಂಡಿದೆಯೇನೋ ಎಂಬಂತಿರುವ ‘ಗುತ್ತಿಗೆ ಕೆಲಸ’ಗಳಲ್ಲು ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು. ಅಷ್ಟೇ ಅಲ್ಲದೇ, 4) ಪರಿಶಿಷ್ಠ ಜಾತಿ/ಪಂಗಡಗಳ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರ ಪಡೆದುಕೊಂಡಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಗತ್ಯವಿರುವ ಪರಿಣಾಮಕಾರಿ ಕ್ರಮಗಳನ್ನುಕೈಗೊಳ್ಳಲು ನಿರ್ಧಾರ ಪ್ರಕಟಿಸುವುದು. ಇಂಥಹ ನಿಲವುಗಳು ಜಸ್ಟೀಸ್ ನಾಗಮೋಹನ್‌ದಾಸ್ ವರದಿಯನ್ನು ತಕ್ಷಣವೇ ಅನುಷ್ಠಾನ ಮಾಡಲು ಪೂರಕ ವಾತಾವರಣ ಉಂಟು ಮಾಡಬಹುದು ಎಂದು ಭಾವಿಸುತ್ತೇನೆ.
ವಂದನೆಗಳೊಡನೆ.
– ದೇವನೂರ ಮಹಾದೇವ




