ಬಲಾತ್ಕಾರಿ ಬಚಾವೋ ಪಾರ್ಟಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವ ಸಂಕಲ್ಪ: ಸುಭಾಷಿಣಿ ಅಲಿ

2 years ago

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತವರು ಹಾಸನದಲ್ಲಿ ಹಲವು ಜನಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಶಕ್ತಿ ಪ್ರದರ್ಶನ ನಡೆಸಿ ತಕ್ಷಣ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕು ಮತ್ತು ಅವರಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಹಾರಾಜಾ ಪಾರ್ಕ್ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸದಸ್ಯರು, ಪ್ರಜ್ವಲ್ ರೇವಣ್ಣ ಬಂಧಿಸಬೇಕು. ಮಹಿಳೆಯರಿಗೆ ರಕ್ಷಣೆ ನೀಡಬೇಕು. ಅವರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು. ದಾರಿಯುದ್ದಕ್ಕೂ ಘೋಷಣೆ ಕೂಗಿದ ಸದಸ್ಯರು, ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಹಿರಂಗ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ರಾಜ್ಯಸಭೆ ಮಾಜಿ ಸದಸ್ಯೆ ಸುಭಾಷಿಣಿ ಅಲಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ದೇಶದ ಹಲವೆಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಪುರುಷ ಪ್ರಧಾನ, ಬಂಡವಾಳಶಾಹಿ ವ್ಯವಸ್ಥೆ, ರಾಜಕೀಯ ಪ್ರಭುತ್ವದಂತಹ ಮೈತ್ರಿಕೂಟ ರಚಿಸಿಕೊಂಡಿರುವ ಬಲಾತ್ಕಾರಿ ಬಚಾವೋ ಪಾರ್ಟಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವ ಸಂಕಲ್ಪ ಮಾಡುತ್ತಿದ್ದೇವೆ ಎಂದರು.

ನಮ್ಮನ್ನು ಆಳುವ ದೊಡ್ಡವರು ಹೇಳುತ್ತಿದ್ದಾರೆ, ಇದುವರೆಗೆ ನಾವು ಟ್ರೇಲರ್ ತೋರಿಸಿದ್ದೇವೆ. ಇನ್ನೂ ಸಿನಿಮಾ ಬಾಕಿ ಇದೆ ಎಂದು. ಆದರೆ, ಇವರು ತೋರಿಸಿರುವ ಟ್ರೇಲರ್ ಎಂಥದ್ದು? ಬ್ರಿಜ್ಭೂಷಣ್ ಪರವಾಗಿ ನಿಂತರು. ಬಿಲ್ಕೀಸ್ ಬಾನು ಅತ್ಯಾಚಾರಿಗಳಿಗೆ ಜಾಮೀನು ಕೊಡಿಸಿದರು. ರಾಮ್ ರಹೀಮರಿಗೆ ಪೆರೋಲ್ ಕೊಡಿಸಿದರು. ಪ್ರಜ್ವಲ್ ರೇವಣ್ಣ ಕೈಎತ್ತಿ ಹಿಡಿದು ಮತ ಕೇಳಿದರು. ಇದೇನಾ ನಿಮ್ಮ ಟ್ರೇಲರ್ ಎಂದು ಪ್ರಶ್ನಿಸಿದರು.

ಇಂತಹ ನಿಮ್ಮ ಸಿನಿಮಾ, ಟ್ರೇಲರ್ ನಡೆಯಲ್ಲ. ಜೂನ್ 4 ರ ನಂತರ ಟ್ರೇಲರ್ ಬಂದ್ ಆಗಲಿದೆ. ಯಾವುದೇ ಸರ್ಕಾರವಿರಲಿ, ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಮನೆಯಲ್ಲಿ ಕೆಲಸ ಮಾಡುವವರು, ಅವರ ಪಕ್ಷದ ಕಾರ್ಯಕರ್ತೆಯರು, ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು, ಜಗತ್ತಿನ ಎದುರು ತೋರಿಸಿದ್ದಾರೆ ಎಂದರು.

Leave a Reply