ಕೃಷಿ ಇಲಾಖೆ ವತಿಯಿಂದ ಸಮಗ್ರ ಬೆಳೆ ನಿರ್ವಹಣೆ ಗುಚ್ಚ ಪ್ರಾತ್ಯಕ್ಷಿಕೆ

2 years ago

ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಡಾ.ಸೋಮಸುಂದರ್

ಬಳ್ಳಾರಿ: ರೈತರ ಜೀವನ ಸುಗಮಗೊಳ್ಳಲು ಸರ್ಕಾರದ ವಿವಿಧ ಕೃಷಿ ಯೋಜನೆಗಳನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಸೋಮಸುಂದರ್ ಕೆ.ಎಂ. ಕರೆನೀಡಿದರು.

ಕೃಷಿ ಇಲಾಖೆ ವತಿಯಿಂದ ರಾಷ್ಟೀಯ ಆಹಾರ ಭದ್ರತೆ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಹಲಕುಂದಿ, ಸಂಜೀವರಾಯನಕೋಟೆ, ಕುರುಗೋಡು ತಾಲ್ಲೂಕಿನ ಸಿಂಧಿಗೇರಿ ಗ್ರಾಮಗಳಲ್ಲಿ ಎಫ್‌ಎನ್‌ಎಸ್ ಯೋಜನೆಯ ತೊಗರಿ ಸಜ್ಜೆ ಕ್ಷೇತ್ರಗಳ ಸಮಗ್ರ ಬೆಳೆ ನಿರ್ವಹಣೆ ಗುಚ್ಚ ಪ್ರಾತ್ಯಕ್ಷಿಕೆೆ ನೀಡಿ ಮಾತನಾಡಿದರು.

ರೈತರು ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ ವಂಚಿತರಾಗದೆ, ಪ್ರತಿಯೊಬ್ಬ ಅರ್ಹ ರೈತರು ಯೋಜನೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡು, ಫಲಾನುಭವಿಗಳಾಗಬೇಕು. ಅದೇರೀತಿಯಾಗಿ ರೈತಾಪಿ ವರ್ಗದವರು ತಪ್ಪದೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದರು.

ರಾಷ್ಟ್ರೀಯ ಆಹಾರ ಭದ್ರತೆಯ ಸಂಯೋಜಕ ಡಾ.ಪಿ.ಕೆ ಸಾಹಾ ಮಾತನಾಡಿ, ತೊಗರಿಯ ಹೆಚ್ಚಿನ ಇಳುವರಿ ಪಡೆಯಲು ಆಧುನಿಕ ತಂತ್ರಜ್ಞಾನ ಮತ್ತು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಸಿರಿಧಾನ್ಯ ಬೆಳೆಗಳ ಮಹತ್ವ ಪ್ರತಿಯೊಬ್ಬ ರೈತರು ಅರಿಯಬೇಕು ಎಂದರು.

ಪ್ರಸ್ತುತ ಕೃಷಿಯಲ್ಲಿರುವ ಕೂಲಿಕಾರರ ಸಮಸ್ಯೆಯನ್ನು ನಿಭಾಯಿಸಲು ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಔಷಧಿ ಸಿಂಪರಣೆ ಮಾಡಲು ಡ್ರೋನ್ ಬಳಕೆ ಅನುಕೂಲವಾಗುತ್ತದೆ ಎಂದರು.

ಸಿಂಧಿಗೇರಿ ಗ್ರಾಮದಲ್ಲಿ ತೊಗರಿ ಮತ್ತು ನವಣೆ ಮಿಶ್ರ ಬೆಳೆಯ ಕ್ಷೇತ್ರದಲ್ಲಿ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಸಿಂಪರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಎನ್.ಕೆಂಗೇಗೌಡ, ಸಹಾಯಕ ಕೃಷಿ ನಿರ್ದೇಶಕ ದಯಾನಂದ್.ಎಂ., ಬಳ್ಳಾರಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ್ ಸಿಂಧಿಗೆರಿ, ಕೋಳೂರಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಯೇಸು ಬಾಬು.ಕೆ., ಸೇರಿದಂತೆ ಸಿಬ್ಬಂದಿ ವಾಣಿ, ರೇಣುಕಾರಾಧ್ಯ, ರೈತರು ಇದ್ದರು.

Leave a Reply