ನರೇಗಾ ಯೋಜನೆಯಡಿ ಹೆಚ್ಚಿನ 50 ಮಾನವ ದಿನಗಳ ಅನುದಾನಕ್ಕಾಗಿ ಕೇಂದ್ರಕ್ಕೆ ಬೇಡಿಕೆ: ಕೃಷ್ಣ ಬೈರೇಗೌಡ

2 years ago

ಜನರ ಗುಳೆ ತಡೆಯಲು ಅಗತ್ಯ ಕ್ರಮ

ಬರ ಘೋಷಿಸಿದ ದೇಶದಲ್ಲೇ ಮೊದಲ ರಾಜ್ಯ ಕರ್ನಾಟಕ

ಕಾನೂನಿನಂತೆ ಬರ ಘೋಷಿಸುತ್ತಿದ್ದಂತೆ 150 ಮಾನವ ದಿನ ಲಭ್ಯವಾಗಬೇಕು

ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿದರೂ ಪ್ರತಿಕ್ರಿಯೆ ಇಲ್ಲ

ಕೇಂದ್ರಕ್ಕೆ 18,171 ಕೋಟಿ ರೂ. ಪರಿಹಾರವೂ ಬಂದಿಲ್ಲ

ಬೆಳಗಾವಿ: ಬರ ಹಿನ್ನೆಲೆಯಲ್ಲಿ ಜನರು ಗುಳೆ ಹೋಗುವುದನ್ನು ತಡೆಯಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಅಗತ್ಯ ಕ್ರಮ ತೆಗೆದುಕೊಂಡಿದೆ. ಅಲ್ಲದೆ, ನರೇಗಾ ಯೋಜನೆಯ ಅಡಿಯಲ್ಲಿ ಮಾನವ ದಿನಗಳನ್ನು 150 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರದಿಂದ ಇನ್ನೂ ನಮ್ಮ ಮನವಿಗೆ ಸಕಾರಾತ್ಮ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಪರಿಸ್ಥಿತಿ ನಿಭಾಯಿಸಲು ಮುಂಜಾಗ್ರತಾ ಕ್ರಮಕೈಗೊಳ್ಳುವ ಕುರಿತು ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಎನ್ ರವಿಕುಮಾರ, ನಿರಾಣಿ ಹನುಮಂತಪ್ಪ ರುದ್ರಪ್ಪ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ನಿಯಮ 68ರ ಮೇರೆಗೆ ಎತ್ತಿದ ಚರ್ಚೆಗೆ ಸರ್ಕಾರದ ಪರವಾಗಿ ಕೃಷ್ಣಬೈರೇಗೌಡ ಉತ್ತರಿಸಿದರು.

ಬರ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ರಾಜ್ಯ ಸರ್ಕಾರ ಈಗಾಗಲೇ ತೆಗೆದುಕೊಂಡಿದೆ. ಬರ ಕಾರಣಕ್ಕೆ ಜನ ಬೇರೆ ಕಡೆಗಳಿಗೆ ವಲಸೆ ಹೋಗುವ ಪ್ರಸಂಗಗಳೂ ಕಂಡು ಬಂದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನರೇಗಾ ಮಾನವ ದಿನಗಳನ್ನು 100 ರಿಂದ 150 ಕ್ಕೆ ಏರಿಸುವುದೊಂದೆ ನಮ್ಮ ಮುಂದಿರುವ ಕ್ರಮ. ಏಕೆಂದರೆ ಬರ ಘೋಷಿಸಿದ ತಕ್ಷಣ ನರೇಗಾ ಯೋಜನೆಯ ಅಡಿಯಲ್ಲಿ ಹೆಚ್ಚಿನ 50 ಮಾನವ ದಿನಗಳನ್ನು ನೀಡಬೇಕು ಎಂದು ಕಾನೂನಿನಲ್ಲಿದೆ. ಆದರೆ, ಈ ಬಗ್ಗೆ ನಾವು ಸೆಪ್ಟೆಂಬರ್ 23 ರಂದೇ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಈವರೆಗೆ ಉತ್ತರ ನೀಡಿಲ್ಲ ಎಂದು ಅವರು ವಿಷಾದಿಸಿದರು.

ಕೇಂದ್ರದಿಂದ ಈಗಾಗಲೇ ಲಭ್ಯವಾಗಿರುವ 13 ಕೋಟಿ ರೂ. ಮಾನವ ದಿನಗಳ ಅನುದಾನದ ಗುರಿಯನ್ನು ನಾವು ಈಗಾಗಲೇ ತಲುಪಿದ್ದು, ಈ ಅವಧಿಯಲ್ಲಿ ನರೇಗಾಕ್ಕೆ ನಾವು ವಿಶೇಷ ಆದ್ಯತೆ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಪುರಷ್ಕರಿಸುವ ವಿಶ್ವಾಸವೂ ಇದೆ ಎಂದರು.

ಕೇಂದ್ರಕ್ಕೆ 18,171 ಕೋಟಿ ರೂ. ಪರಿಹಾರಕ್ಕಾಗಿ ಮನವಿ: ಬರ ನಿರ್ವಹಣೆಗಾಗಿ ನಾವು ಈಗಾಗಲೇ ಕೇಂದ್ರ ಸರ್ಕಾರಕ್ಕೆ 18,171 ಕೋಟಿ ರೂ. ಪರಿಹಾರವನ್ನು ಎನ್‌ಡಿಆರ್‌ಎಫ್ ಅನ್ವಯ ಕೋರಿ ಮನವಿ ಮಾಡಿದ್ದೇವೆ. ಸೆಪ್ಟೆಂಬರ್ 23ರಂದು ಕೇಂದ್ರ ಕೃಷಿ, ಗೃಹ ಸಚಿವರ ಭೇಟಿಗೆ ಪ್ರಯತ್ನ ಕೂಡ ನಡೆಸಲಾಗಿದೆ. ಕೇಂದ್ರ ಬರ ಅಧ್ಯಯನ ತಂಡವು ರಾಜ್ಯದಲ್ಲಿ ಅಕ್ಟೋಬರ್ 4 ರಿಂದ ಅಕ್ಟೋಬರ್ 9ರ ವರೆಗೆ ರಾಜ್ಯದ 13 ಜಿಲ್ಲೆಗಳಲ್ಲಿ ಭೇಟಿ ನೀಡಿ ಬರದ ಪರಿಸ್ಥಿತಿಯನ್ನು ಅವಲೋಕಿಸಿದೆ. ಈ ತಂಡದವರಿಗೆ ನಾವು ರಾಜ್ಯದಲ್ಲಿನ ಬರ ಪರಿಸ್ಥಿತಿಯ ತೀವ್ರತೆಯನ್ನು ಮನವರಿಕೆ ಮಾಡಿದ್ದೇವೆ ಎಂದು ಹೇಳಿದರು.

ಬರ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ: ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳಲ್ಲಿ ಮಳೆ ಕೊರತೆಯಾಗಿದೆ. ಎಲ್ಲ ರಾಜ್ಯಗಳು ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡುವ ವಿಷಯದಲ್ಲಿ ಕರ್ನಾಟಕ ರಾಜ್ಯವು ಮಂಚೂಣಿಯಲ್ಲಿದೆ. ನಾವು ಮನವಿ ಮಾಡಿದ ತಿಂಗಳ ನಂತರ ಆಂಧ್ರಪ್ರದೇಶ ಮತ್ತು ಎರಡು ತಿಂಗಳ ನಂತರ ಮಹಾರಾಷ್ಟ್ರದಿಂದ ಕೇಂದ್ರಕ್ಕೆ ಮನವಿ ಸಲ್ಲಿಕೆಯಾಗಿವೆ. ಇದು ಬರ ನಿರ್ವಹಣೆ ವಿಷಯದಲ್ಲಿ ರಾಜ್ಯವು ಸಾಕಷ್ಟು ಮುಂಜಾಗ್ರತೆ ವಹಿಸಿದೆ ಎಂಬುದನ್ನು ತಿಳಿಸುತ್ತದೆ ಎಂದು ಹೇಳಿದರು.

ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ: ಕುಡಿಯುವ ನೀರಿನ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡಿದ ಸಚಿವರು, ರಾಜ್ಯದ 26 ಗ್ರಾಮಗಳಲ್ಲಿ 22 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 89 ಗ್ರಾಮಗಳಲ್ಲಿ ಬಾಡಿಗೆ ಆಧಾರದ ಮೇಲೆ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ಅಧಿಕಾರಿಗಳಿಗೆ ಬರ ನಿರ್ವಹಣೆ ಕುರಿತು ಸಭೆ ನಡೆಸಲಾಗುತ್ತಿದೆ. ಸಮಸ್ಯಾತ್ಮಕ ಗ್ರಾಮಗಳನ್ನು ಪಟ್ಟಿ ಮಾಡಿ ಅಂತಹ ಕಡೆಗಳಲ್ಲಿ ಮುಂದೆ ಎದುರಾಗಲಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಟೆಂಡರ್ ಪ್ರಕ್ರಿಯೆ ನಡೆಸಿ ನೀರು ಸರಬರಾಜು ಸಿದ್ಧತೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮೇವಿಗೂ ಸಮಸ್ಯೆ ಇಲ್ಲ: ಜನವರಿ, ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಅನುಕೂಲವಾಗುವಂತೆ 7,63,000 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ರಾಜ್ಯದ ಮೇವನ್ನು ಬೇರೆಡೆ ಸಾಗಿಸದಂತೆ ಈಗಾಗಲೇ ನವೆಂಬರ್ 22ರಂದೇ ನಿರ್ಬಂಧ ಆದೇಶ ಹೊರಡಿಸಲಾಗಿದೆ. ನೀರು ಸರಬರಾಜು, ಮೇವು ಖರೀದಿ ಸೇರಿದಂತೆ ಬರ ನಿರ್ವಹಣೆಗಾಗಿ ಜಿಲ್ಲಾ ಹಂತದಲ್ಲಿ ಈಗಾಗಲೇ 895 ಕೋಟಿ ರೂ.ಗಳನ್ನು ಇಟ್ಟಿದ್ದೇವೆ ಎಂದರು.

ಬರವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ: ಬರ ನಿರ್ವಹಣೆಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ಈಗಾಗಲೇ ಸಂಪುಟ ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಜೂನ್‌ದಿಂದ ಇಲ್ಲಿವರೆಗೆ ಒಟ್ಟು 8 ಸಭೆಗಳು ನಡೆದಿವೆ. ತಾವು ರಾಜ್ಯದ ಜಿಲ್ಲೆಗಳಿಗೆ ತೆರಳಿ ಬರದ ತಯಾರಿ ಕೆಲಸವನ್ನು ಅವಲೋಕಿಸಿದ್ದನ್ನು ಸಚಿವರು ತಿಳಿಸಿದರು. ರಾಜ್ಯ ನಾಲ್ಕು ವಿಭಾಗಗಳ ಅಧಿಕಾರಿಗಳ ಸಭೆ ನಡೆಸಿ ಬರ ನಿರ್ವಹಣೆಯ ಬಗ್ಗೆ ಸಮಗ್ರ ಚರ್ಚಿಸಿರುವುದಾಗಿ ಸದನಕ್ಕೆ ಮಾಹಿತಿ ನೀಡಿದರು.

ಬರ ನಿರ್ವಹಣೆ ವಿಷಯವನ್ನು ಯಾರು ಕೂಡ ಹಗುರವಾಗಿ ತೆಗೆದುಕೊಳ್ಳಬಾರದು. ಖುದ್ದು ಶಾಸಕರೇ ನೋಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಶಾಸಕರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಬರ ನಿರ್ವಹಣೆಗಾಗಿ 18,171 ಕೋಟಿ ರೂ. ಪರಿಹಾರವನ್ನು ಎನ್‌ಡಿಆರ್‌ಎಫ್ ಅನ್ವಯ ರಾಜ್ಯಕ್ಕೆ ನೀಡಲು ಕೋರಿ ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ ಎರಡ್ಮೂರು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈಗಾಗಲೇ 183 ಟಾಸ್ಕ್ಫೋರ್ಸ್ ಸಭೆಗಳು ನಡೆದಿವೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 133 ಸಭೆಗಳು ಜರುಗಿವೆ. ಕೇಂದ್ರ ಗೃಹ, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿದ್ದೇವೆ ಎಂದು ವಿವರಿಸಿದರು.

Leave a Reply