ನೋಯ್ಡಾ: ನೋಯ್ಡಾದ ಹೊಟೆಲ್ ನಲ್ಲಿ ಆರ್ಡರ್ ತಡವಾಗಿ ನೀಡಿದ್ದಕ್ಕೆ ಹೊಟೆಲ್ ಮಾಲೀಕನ ಮೇಲೆ ಡಿಲಿವರಿ ಬಾಯ್ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.
ಜಮ್ ಜಮ್ ರೆಸ್ಟೋರೆಂಟ್ ಮಾಲೀಕ ಸುನೀಲ್ ಅಗರ್ವಾಲ್ ಬಲಿಯಾದ ವ್ಯಕ್ತಿ. ಡೆಲಿವರಿ ಬಾಯ್, ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿಯ ಆರ್ಡರ್ ಪಡೆಯಲು ರೆಸ್ಟೋರೆಂಟ್ ತಲುಪಿದ್ದ. ಸಮಯಕ್ಕೆ ಸರಿಯಾಗಿ ಬಿರಿಯಾನಿ ಸಿದ್ಧವಾಗಿತ್ತು. ಪೂರಿ ಸಬ್ಜಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಲಾಗಿತ್ತು ಎಂದು ರೆಸ್ಟೋರೆಂಟ್ ಕೆಲಸಗಾರ ಪ್ರತಿಕ್ರಿಯಿಸಿದ್ದಾನೆ.
ತಡವಾಗಿ ಆರ್ಡರ್ ಕೊಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರರ ನಡುವೆ ವಾದ ಆರಂಭವಾಗಿ ಜಗಳ ತಾರಕಕ್ಕೇರಿದೆ. ಈ ಸಮಯದಲ್ಲಿ ಸುನೀಲ್ ಅಗರ್ವಾಲ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಯತ್ನಿಸಿದ್ದಾರೆ. ಆಗ ಡೆಲಿವರಿ ಬಾಯ್ ತನ್ನ ಸ್ನೇಹಿತನ ಸಹಾಯದಿಂದ ರೆಸ್ಟೋರೆಂಟ್ ಮಾಲೀಕನ ತಲೆಗೆ ಗುಂಡು ಹಾರಿಸಿ ಪರಾರಿಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆ ನಡೆದ ನಂತರ ತಕ್ಷಣ ರೆಸ್ಟೋರೆಂಟ್ ಮಾಲೀಕನನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಗಿದೆ. ಆದರೆ, ಆಸ್ಪತ್ರೆ ತಲುಪುವ ಮಾರ್ಗದಲ್ಲೇ ಮಾಲೀಕ ನಿಧನರಾಗಿದ್ದರು. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮದ್ಯ ಸೇವಿಸಿರುವ ಸಂಗತಿ ಬಯಲಾಗಿದೆ.




