ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸೋಲಿಸಿ

2 years ago

ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆಯನ್ನು ರಕ್ಷಿಸಿ

ಮಂಗಳೂರು: ಕಾನೂನುಬದ್ಧ ಭ್ರಷ್ಟಾಚಾರ, ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮತ್ತು ಬುಡಮೇಲು, ಕಾರ್ಮಿಕರ ಮತ್ತು ರೈತರ ಹಕ್ಕುಗಳ ನಾಶ, ಕಾರ್ಪೊರೇಟ್ ಬಂಡವಾಳಿಗರಿಗೆ ದೇಶದ ಸಂಪತ್ತಿನ ವರ್ಗಾವಣೆ, ವಿವಿಧ ಮತ ಧರ್ಮಗಳು ಮತ್ತು ಜಾತಿಗಳ ಜನರ ನಡುವೆ ದ್ವೇಷ ಹಚ್ಚುವುದು, ಬಡವರು ಮತ್ತು ಶ್ರೀಮಂತರ ನಡುವಿನ ಅಂತರದ ಹೆಚ್ಚಳ, ಹೆಚ್ಚಿದ ನಿರುದ್ಯೋಗ, ಹೆಚ್ಚಿದ ಬಡತನ, ಹೀಗೆ ಎಲ್ಲಾ ರಂಗಗಳಲ್ಲೂ ದೇಶವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿರುವ ಮೋದಿ ನೇತೃತ್ವದ ಬಿಜೆಪಿ ಒಕ್ಕೂಟ ಸರ್ಕಾರವನ್ನು ಸಮಗ್ರವಾಗಿ ಸೋಲಿಸಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ.ಪ್ರಕಾಶ್ ಕೆ. ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.

ನಗರದ ಬೋಳಾರ ಕಚೇರಿಯಲ್ಲಿ ಜರುಗಿದ CITU ದ.ಕ.ಜಿಲ್ಲಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಗಳ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ನಡೆಸಿರುವುದು ಮೋದಿ ಸರ್ಕಾರದ ಸಾಧನೆಯಾಗಿದೆ. ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ಬಳಸಿ ಭ್ರಷ್ಟಾಚಾರವನ್ನು ನಡೆಸಲಾಗುತ್ತಿದೆ. ಬೀಡಿ, ಕಟ್ಟಡ, ಹಮಾಲಿ, ರಸ್ತೆ ಚಾಲಕರು ಮುಂತಾದ ಅಸಂಘಟಿತ ಕಾರ್ಮಿಕರ ಹಕ್ಕುಗಳೆಲ್ಲವನ್ನೂ ಕಿತ್ತು ಹಾಕಲಾಗಿದೆ ಎಂದರು.

ರೈತರ ಬದುಕನ್ನು ಮತ್ತು ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗೆ ಪೂರಕವಾಗಿ, ರೈತ ಕೇಂದ್ರಿತ ಕೃಷಿಯನ್ನು ಕಾರ್ಪೊರೇಟ್ ಕೇಂದ್ರಿತ ಕೃಷಿಗೆ ಬದಲಾಯಿಸಲಾಗಿದೆ. ನಿರುದ್ಯೋಗದ ಪ್ರಮಾಣವು ಶೇ.8 ಕ್ಕಿಂತಲೂ ಹೆಚ್ಚಾಗಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 126 ದೇಶಗಳ ಪೈಕಿ 116ನೇ ಸ್ಥಾನದಲ್ಲಿದೆ ಎಂದರು.

ಚುನಾವಣೆ ವ್ಯವಸ್ಥೆಯನ್ನು ಮತ್ತಷ್ಟು ನಾಶ ಮಾಡಲು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ತೆಗೆದುಹಾಕಲಾಗಿದೆ. ಭಾರತದ ಜಾತ್ಯತೀತ ಚೌಕಟ್ಟನ್ನು ನಾಶ ಮಾಡಲು ಪೌರತ್ವ ಕಾಯ್ದೆಗೆ ಮತೀಯ ನೆಲೆಯಲ್ಲಿ ತಿದ್ದುಪಡಿ ತರಲಾಗಿದೆ. ಇದರಿಂದ ಸಂವಿಧಾನಕ್ಕೆ ಅಪಾಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ಸೋಲಿಸಲು ಎಲ್ಲಾ ವಿಭಾಗಗಳ ಕಾರ್ಮಿಕರು ದೃಢ ತೀರ್ಮಾನ ಕೈಗೊಳ್ಳಬೇಕು ಎಂದರು.

CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕಳೆದ 35 ವರ್ಷಗಳಿಂದ ಜಿಲ್ಲೆಯಲ್ಲಿ ಸತತವಾಗಿ ಗೆದ್ದುಕೊಂಡು ಬರುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕಂಟಕಪ್ರಾಯವಾಗಿ ಪರಿಣಮಿಸಿ, ದ್ವೇಷ ರಾಜಕಾರಣದಿಂದ ಸೌಹಾರ್ದತೆಗೆ ಭಂಗವನ್ನುಂಟು ಮಾಡಿದ ಬಿಜೆಪಿಯ ದುರಾಡಳಿತವನ್ನು ಕೊನೆಗಾಣಿಸಲು ಜಿಲ್ಲೆಯ ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕಾಗಿದೆ. ವ್ಯಾಪಕ ಪ್ರಚಾರಾಂದೋಲನದ ಭಾಗವಾಗಿ ಹಂತಹಂತದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ CITU ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜಿಲ್ಲೆಯ ಆರ್ಥಿಕತೆಯ ಜೀವನಾಡಿ ಬೀಡಿ ಉದ್ಯಮದ ಸಂಕಷ್ಟಕ್ಕೆ ಬಿಜೆಪಿ ನೇತ್ರತ್ವದ ಕೇಂದ್ರ ಸರ್ಕಾರವೇ ನೇರ ಹೊಣೆ. ಬಿಸಿಯೂಟ ಅಂಗನವಾಡಿ ಕಟ್ಟಡ ಕಾರ್ಮಿಕರು ಸೇರಿದಂತೆ ಹಲವಾರು ವಿಭಾಗದ ಕಾರ್ಮಿಕರ ಬದುಕನ್ನೇ ಸರ್ವ ನಾಶಗೈದ ಬಿಜೆಪಿ ಮತ್ತೊಮ್ಮೆ ದೇಶದ ಅದಿಕಾರಕ್ಕೇರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಸಭೆಯಲ್ಲಿ CITU ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ರಾಧಾ ಮೂಡಬಿದ್ರೆ, ಜಿಲ್ಲಾ ಕೋಶಾಧಿಕಾರಿಗಳಾದ ಯೋಗೀಶ್ ಜಪ್ಪಿನಮೊಗರು, ಹಿರಿಯ ಕಾರ್ಮಿಕ ಮುಖಂಡರಾದ ಯು.ಬಿ.ಲೋಕಯ್ಯ, ಸುಕುಮಾರ್,ರಮಣಿ, ಪದ್ಮಾವತಿ ಶೆಟ್ಟಿ, ಬಿ.ಎಂ.ಭಟ್,ನೋಣಯ್ಯ ಗೌಡ,ಸುಂದರ ಕುಂಪಲ ಮುಂತಾದವರು ಉಪಸ್ಥಿತರಿದ್ದರು.

Leave a Reply