ಆಕ್ಷೇಪಾರ್ಹ ಹೇಳಿಕೆ ವಿವಾದ: ಸಂಜಯ್ ರೌತ್ ವಿರುದ್ಧ ದೂರು ದಾಖಲು
ದೆಹಲಿ: ಮರಾಠಿಯ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಬಿಜೆಪಿ ಸಂಸದೆ ವಿರುದ್ಧ ಆಕ್ಷೇಪಾರ್ಹ ಮತ್ತು ಬೆದರಿಕೆಯ ಹೇಳಿಕೆ ನೀಡಿರುವ ಆರೋಪದಡಿಯಲ್ಲಿ ಶಿವಸೇನೆಯ ರಾಜ್ಯಸಭೆ ಸದಸ್ಯ ಸಂಜರ್ ರೌತ್ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿದೆ.
ಡಿಸೆಂಬರ್ 9ರಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪ್ತಿ ರಾವತ್ ಭಾರದ್ವಾಜ್ ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ದೂರಿನಲ್ಲಿ ಸಂಜಯ್ ರೌತ್ ಅವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂದು ದೂರಿದ್ದಾರೆ. ಇದರ ಆಧಾರದಲ್ಲಿ ಸಂಜಯ್ ರೌತ್ ಅವರ ವಿರುದ್ಧ ಐಪಿಸಿ ಸೆಕ್ಷನ್ 500(ಮಾನಹಾನಿ ವಿರುದ್ಧ ಶಿಕ್ಷೆ) ಮತ್ತು 509 (ಮಹಿಳೆಯರ ವಿರುದ್ಧ ನಿಂದನಾತ್ಮಕ ಹೇಳಿಕೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




