ಬೆಂಗಳೂರು: ಅಪೂರ್ಣಗೊಂಡಿರುವ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯನ್ನ ಜನವರಿ ತಿಂಗಳಾಂತ್ಯಕ್ಕೆ ಮುಗಿಸುವಂತೆ ಕಾವೇರಿ ಜಲ ನಿಗಮ ನಿಯಮಿತದ ಅಧಿಕಾರಿಗಳಿಗೆ ಗಡುವು ನಿಗದಿಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ತಿಳಿಸಿದ್ದಾರೆ.
ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಮತ್ತು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಹಾಗೂ ಕಾವೇರಿ ಜಲ ನಿಗಮ ನಿಯಮಿತದ ಅಧಿಕಾರಿಗಳು ಭಾಗವಹಿಸಿದ್ದರು.
ಹಲವು ವರ್ಷಗಳಿಂದ ಈ ಸೇತುವೆಯ ಕಾಮಗಾರಿ ನಡೆಯುತ್ತಿದೆ. ಆದರೆ, ಇದುವರೆಗೂ ಇದನ್ನ ಪೂರ್ಣಗೊಳಿಸಲಾಗಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಇದನ್ನ ಶೀಘ್ರವಾಗಿ ಸಿದ್ಧಗೊಳಿಸುವ ಅವಶ್ಯಕತೆಯಿದೆ. ಅಂತಿಮ ಹಂತದ ಕಾಮಗಾರಿಯನ್ನ ಮುಗಿಸುವ ಅವಶ್ಯಕತೆಯಿದ್ದು, ತಿಂಗಳಾಂತ್ಯದ ಒಳಗೆ ಕಾಮಗಾರಿ ಮುಗಿಸವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಲ ಸಂಪನ್ಮೂಲ ಇಲಾಖೆ ಮತ್ತು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿದ ರಾಕೇಶ್ ಸಿಂಗ್ ಮಾತನಾಡಿ, ಅಧಿಕಾರಿಗಳು ಕಾಮಗಾರಿಯನ್ನ ಮುಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ದಿನ ಕಾಮಗಾರಿ ಪ್ರಗತಿಯ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.



