ಬೆಂಗಳೂರು: ದೇಶದ ಕಟ್ಟಡ ನಿರ್ಮಾಣ ವಲಯ 2016/ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಗರಿಷ್ಠ ಮುಖಬೆಲೆಯ ನೋಟು ನಿಷೇಧದ ಬಳಿಕ ಜಾರಿ ಮಾಡಲಾದ ಸರಕು ಸೇವಾ ತೆರಿಗೆ ನೀತಿಯಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಲುಕಿತು. ಇದಾದ ಬಳಿಕ 2020 ಮಾರ್ಚನಲ್ಲಿ ದಾಳಿ ಮಾಡಿದ ಕೊರೊನಾ ಈ ಕ್ಷೇತ್ರವನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ) ಆರೋಪಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಂಘದ ಪದಾಧಿಕಾರಿಗಳು, ಇತ್ತೀಚಿಗೆ ನಿರಂತವಾಗಿ ಏರಿಕೆಯಾಗುತ್ತಿರುವ ಡಿಸೇಲ್ ಹಾಗೂ ಪೆಟ್ರೋಲಿಯಂ ತೈಲ ಬೆಲೆಗಳು ನಿರ್ಮಾಣ ವಲಯದ ಮೇಲೆ ಗಂಭೀರ ಪರಿಣಾಮ ಬೀರಿ ಲಕ್ಷಾಂತರ ಉದ್ಯೋಗಗಳ ನಾಶಕ್ಕೆ ಕಾರಣವಾಗುತ್ತಿವೆ. ನಮ್ಮ ದೇಶದಲ್ಲಿ ಕೃಷಿಕ್ಷೇತ್ರದ ಬಳಿಕ ಅತಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿರುವ ನಿರ್ಮಾಣ ವಲಯದಲ್ಲಿ ಸುಮಾರು 10 ಕೋಟಿ ಜನ ಕೆಲಸ ಮಾಡುತ್ತಿದ್ದಾರೆ. ಇವರು ಕೊರೊನಾ ಲಾಕ್ ಡೌನ್ ನಲ್ಲಿ ಅತಿ ಹೆಚ್ಚು ತೊಂದರೆಗೊಳಪಟ್ಟ ಶ್ರಮಜೀವಿಗಳು. ಆದರೆ ಕೊರೊನ್ನೋತ್ತರ ಕಾಲಘಟ್ಟದಲ್ಲೂ ಅವರ ಸಂಕಷ್ಟಗಳು ದೂರವಾಗಿಲ್ಲ ಎಂದರು.
ಈ ಹಿನ್ನಲೆಯಲ್ಲಿ ಕನಸ್ಟ್ರಕ್ಷನ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ(CWFI) ಸಂಘಟನೆಯು ಈ ಕೆಳಕಂಡ ಬೇಡಿಕೆಗಳಿಗಾಗಿ ನಿರ್ಮಾಣ ವಲಯದ ಕಾರ್ಮಿಕರ ಎರಡು ದಿನಗಳ ರಾಷ್ಟ್ರೀಯ ಮುಷ್ಕರಕ್ಕೆ ಡಿಸೆಂಬರ್ 2 ಮತ್ತು 3 ರಂದು ಕರೆ ನೀಡಿದೆ. ಈ ಕರೆಯನ್ನು ಸಂಪೂರ್ಣ ಬೆಂಬಲಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್( ಸಿಐಟಿಯು) ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಹತ್ತು ಹಲವು ಬೇಡಿಕೆಗಳ ಆಧಾರದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕಾರ್ಮಿಕ ಇಲಾಖೆಗಳ ಕಚೇರಿಗಳ ಎದುರು ಪ್ರತಿಭಟನೆಗಳನ್ನು ಆಯೋಜಿಸಿದೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಿದೆ ಎಂದರು.
ಮೊದಲನೆ ದಿನ ಡಿಸೆಂಬರ್ 2 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಎರಡನೇ ದಿನ ಡಿಸೆಂಬರ್ 3ರಂದು ಡೈರಿ ಸರ್ಕಲ್ ಬಳಿ ಇರುವ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸುರಕ್ಷಾ ಭವನದ ಮುಂದೆ ಬೃಹತ್ ಪ್ರತಿಭಟನೆಗಳನ್ನು ನಡೆಸಲಿದ್ದಾರೆ ಎಂದರು.
ಅಖಿಲ ಭಾರತ ಬೇಡಿಕೆಗಳು:
- ಕಟ್ಟಡ ಉಧ್ಯಮವನ್ನು ರಕ್ಷಿಸಬೇಕು
- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನು 1996 ಹಾಗೂ ಸೆಸ್ ಕಾನೂನು 1996 ಕಾನೂನು ಪುನರ್ ಸ್ಥಾಪಿಸಬೇಕು
- ದೇಶದ್ಯಾಂತ ಕಾನೂನುಬದ್ದವಾಗಿ ರಚನೆಯಾಗಿರುವ ಕಲ್ಯಾಣ ಮಂಡಳಿ ಉಳಿಯಬೇಕು
- ನಿರಂತರವಾಗಿ ಏರಿಕೆಯಾಗುತ್ತಿರುವ ಕಟ್ಟಡ ಸಾಮಾಗ್ರಿಗಳ ಬೆಲೆಗಳ ನಿಯಂತ್ರಣ ಮಾಡಬೇಕು
- ಕಟ್ಟಡ ಸಾಮಾಗ್ರಿಗಳ ಮೇಲೆ ವಿಧಿಸಲಾಗುತ್ತಿರುವ ಜಿ.ಎಸ್.ಟಿ ಕಡಿತಗೊಳಿಸಬೇಕು
- ಅಂತರ ರಾಜ್ಯ ವಲಸೆ ಕಾರ್ಮಿಕರ ಕಾನೂನು 1979 ರ ಪರಿಣಾಮಕಾರಿ ಜಾರಿ ಮಾಡಬೇಕು
ರಾಜ್ಯದ ಬೇಡಿಕೆಗಳು:
- 3000 ರೂಪಾಯಿ ಲಾಕ್ಡೌನ್ ನಗದು ಪರಿಹಾರ ಎಲ್ಲರಿಗೂ ಕೂಡಲೇ ಪಾವತಿಯಾಗಬೇಕು
- ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್,ಬೂಸ್ಟರ್ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡದೇ ಇರುವುದು ಹಾಗು ಮಂಡಳಿಯ ನಿಯಮಾವಳಿ, ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಕಾರ್ಮಿಕ ಇಲಾಖೆ ನಿರ್ದೇಶನ ಉಲ್ಲಂಘನೆ ಈ ವಿಚಾರದಲ್ಲಿ ತನಿಖೆಗೆ ಒತ್ತಾಯ
- ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ವೈದ್ಯಕೀಯ ಅರ್ಜಿಗಳು ಇತ್ಯರ್ಥವಾಗಬೇಕು
- ಮದುವೆ ಸಹಾಯಧನ ವಿಳಂಬ ಮತ್ತು ಬಾಂಡ್ ವಿತರಣೆ ಸರಿಪಡಿಸಿ
- ಸಹಜ ಮರಣ ಪರಿಹಾರದ ಮೊತ್ತ ಕೂಡಲೇ 2 ಲಕ್ಷಕ್ಕೆ ಹೆಚ್ಚಿಸಬೇಕು
- ಅಪಘಾತ ಮರಣ ಪರಿಹಾರದ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು
- ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು
- ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ಜಾರಿಗೊಳಿಸಬೇಕು
- ಶೈಕ್ಷಣಿಕ ಸಹಾಯಧನ ಅರ್ಜಿಗಳ ತಂತ್ರಾಂಶ ಕೂಡಲೇ ಆರಂಭಿಸಬೇಕು
- ಅರ್ಜಿಗಳ ವಿಳಂಬ ವಿಲೇವಾರಿ ನಿಲ್ಲಬೇಕು: ಕಾರ್ಮಿಕ ಅದಾಲತ್ ನೆಪಕ್ಕೆ ಮಾತ್ರ ಬೇಡ
- ಬೋಗಸ್ ಕಾರ್ಡ್ಗಳಿಗೆ ನಿಯಂತ್ರಣ ಹಾಕಿ ತಪ್ಪಿತ್ತಸ್ಥರಿಗೆ ಶಿಕ್ಷೆಯಾಗಲಿ
- ಸಕ್ರಮಗೊಳಿಸಲಾದ ಅನಧಿಕೃತ ಕಟ್ಟಡಗಳಿಂದ ಸೆಸ್ ಸಂಗ್ರಹಕ್ಕೆ ಕ್ರಮವಹಿಸಿ
- ಪ್ರತ್ಯೇಕ ಸಾಫ್ಟ್ವೇರ್ ಅಳವಡಿಕೆ ಕಾರ್ಯ ಶೀಘ್ರ ಆಗಲಿ
- ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ನೋಂದಣಿಗೆ ಪ್ರತ್ಯೇಕ ಐಡಿ ಜಾರಿಯಾಗಲಿ
- ಕಲ್ಯಾಣ ಮಂಡಳಿಯಲ್ಲಿ ಸಿಐಟಿಯುಗೆ ಕಾರ್ಮಿಕ ಪ್ರಾತಿನಿಧ್ಯ ಸಿಗಬೇಕು
- ಮಂಡಳಿ-ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು
- 2016ರಿಂದ ನವೀಕರಣಗೊಳ್ಳದಿರುವ ಕಾರ್ಮಿಕರಿಗೆ ನವೀಕರಣಕ್ಕೆ ಅವಕಾಶ ನೀಡಬೇಕು
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ) ಅಧ್ಯಕ್ಷ ವೀರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ಬೆಂಗಳೂರು ಉತ್ತರ ಜಿಲ್ಲೆ ಕಾರ್ಯದರ್ಶಿ ಹರೀಶ್ ಕುಮಾರ್, ಖಜಾಂಚಿ ಹನುಮಂತ ರಾವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




