ಬೆಂಗಳೂರು: ಗುತ್ತಿಗೆ ಕೆಲಸದಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವುದು ಹೊಸದೇನಲ್ಲ. ಆದರೆ ಗುತ್ತಿಗೆದಾರರೇ ದೂರು ನೀಡುವಷ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದನ್ನು ಗಮನಿಸಿದರೆ, ಅಧಿಕಾರಿಗಳು, ಶಾಸಕರು ಮತ್ತು ಮಂತ್ರಿಗಳು ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ಆಗ್ರಹಿಸಿದೆ.
ಗುತ್ತಿಗೆದಾರರ ಬಳಿ ಪ್ರತಿ ಗುತ್ತಿಗೆಯ ಸಂದರ್ಭದಲ್ಲೂ ಶೇಕಡಾ 40ಕ್ಕೂ ಅಧಿಕ ಪ್ರಮಾಣದಲ್ಲಿ ಸಂಬಂಧಿಸಿದ ತಡೆಯುವಂತೆ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಮನವಿ ಮಾಡಿರುವ ಬಗ್ಗೆ ಪ್ರಸ್ತಾಪಿಸಿರುವ ಸಿಪಿಐ(ಎಂ) ಪಕ್ಷ ಭ್ರಷ್ಟಾಚಾರ ಮತ್ತು ಗುತ್ತಿಗೆದಾರರ ಲಾಭಗಳೆಲ್ಲಾ ಸೇರಿದರೆ ಕಾಮಗಾರಿಯೆಂಬುದು ಶೇಕಡಾ 40ಕ್ಕಿಂತಲೂ ಕಡಿಮೆ ಬಂಡವಾಳದಿಂದ ನಡೆಸಲ್ಪಡುತ್ತದೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ರಾಜ್ಯದ ರಸ್ತೆ, ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡುಬರುತ್ತದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ವಿವರಿಸಿದ್ದಾರೆ.
ಸರಕಾರಗಳ ಇಂತಹ ದೌರ್ಬಲ್ಯಗಳಿಂದಾಗಿಯೇ ಭಾರೀ ಲೂಟಿಗೊಳಪಡಿಸಲಾದ ಅಕ್ರಮ ಗಣಿಗಾರಿಕೆ ಮುಂತಾದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಸಾರ್ವಜನಿಕ ಸಂಪನ್ಮೂಲಗಳು ಲೂಟಿಗೊಳಪಡುತ್ತಿವೆ. ಇದೇ ಪರಿಸ್ಥಿತಿ ರಾಜ್ಯ ಸರಕಾರದ ವಿವಿಧ ಇಲಾಖೆಗಳು ಮತ್ತು ಅಭಿವೃದ್ದಿ ನಿಗಮಗಳಲ್ಲಿಯೂ ಕಾಣಬಹುದಾಗಿದೆ. ಬಹುತೇಕ ಇವುಗಳ ಫಲಾನುಭವಿಗಳು ಶಾಸಕರ ಹಿಂಬಾಲಕರು ಮತ್ತು ಹಣ ಅಥವಾ ದೊಡ್ಡ ಪ್ರಮಾಣದ ಲಂಚ ನೀಡುವವರಾಗಿದ್ದಾರೆ. ನಿಜ ಫಲಾನುಭವಿಗಳು ಶಾಸಕರುಗಳ ಕೃಪೆಯಿಲ್ಲದೇ, ಲಂಚ ನೀಡಲಾಗದೇ ಕಛೇರಿಗಳ ಸುತ್ತ ಗಿರಕಿ ಹೊಡೆದು ಬೇಸ್ತು ಬೀಳುತ್ತಿದ್ದಾರೆ. ಇತ್ತೀಚೆಗೆ ಗಂಗಾ ಕಲ್ಯಾಣ ಯೋಜನೆಯಲ್ಲಿನ ಭಾರಿ ಅವ್ಯವಹಾರ ಮತ್ತು ಭ್ರಷ್ಟಾಚಾರವನ್ನು ಸರಕಾರ ರಚಿಸಿದ ಸದನ ಸಮಿತಿ ಬಹಿರಂಗಪಡಿಸಿದೆ ಎಂದಿದ್ದಾರೆ.
ಆಸ್ತಿ-ಪಾಸ್ತಿಗಳ ವರ್ಗಾವಣೆ ಮತ್ತೊಂದು ಪಾಲು ವಿಭಾಗದ ಸಂದರ್ಭದಲ್ಲಿಯೂ, ಭೂಮಿಗಳ ಸರ್ವೇ ಮಾಡಿಸುವಾಗಲೂ ರೈತರೂ ಸೇರಿದಂತೆ ನಾಗರೀಕರು ತೀವ್ರ ಆಕ್ರೋಶಗೊಂಡಿದ್ದಾರೆ. ಕಂದಾಯ ಇಲಾಖೆ ಗಬ್ಬೆದ್ದು ನಾರುತ್ತಿದೆ. ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಇದರಿಂದ ಹೊರತಲ್ಲ ಎಂದು ಸಿಪಿಐಎಂ ಹೇಳಿದೆ.
ಈ ಎಲ್ಲವೂ ದೇಶದ ಮುಂದೆ ರಾಜ್ಯವನ್ನು ತಲೆ ತಗ್ಗಿಸುವಂತೆ ಮಾಡಿವೆ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ದೂಡಿವೆ. ಈ ಎಲ್ಲಾ ಅನುಚಿತ ಬೆಳವಣಿಗೆಗಳಿಗೆ ಕಾರಣವಾದ ತಮ್ಮ ಸರಕಾರದ ದುರ್ನಡೆಗಳನ್ನು ಸಿಪಿಐ(ಎಂ) ಖಂಡಿಸಿದೆ.
ಸದರಿ ಭ್ರಷ್ಠತೆಯ ಮೇಲೆ ನಿಯಂತ್ರಣ ಸಾಧಿಸಲು ತಾವು ಘೋಷಿಸಿದ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೈಗೊಳ್ಳಲಾಗುವುದೆಂಬ ತನಿಖೆಯು ನಿರರ್ಥಕವಾದುದಾಗಿದೆ. ಆದ್ದರಿಂದ, 1) ಈ ಕೂಡಲೇ ಸದರಿ ಭ್ರಷ್ಟಾಚಾರದ ವಿಚಾರಗಳನ್ನು ನ್ಯಾಯಾಂಗದ ಸುಪರ್ದಿಯಲ್ಲಿ ಉನ್ನತ ನ್ಯಾಯಾಂಗದ ತನಿಖೆಗೆ ಒಳಪಡಿಸಬೇಕು. 2) ಈ ಎಲ್ಲದಕ್ಕೂ ತಮ್ಮದೇ ಸರಕಾರ ಮತ್ತು ಮಂತ್ರಿಮಂಡಲವೇ ನೇರ ಹೊಣೆಗಾರನಾಗಿರುವುದರಿಂದ ತಕ್ಷಣವೇ ರಾಜೀನಾಮೆ ನೀಡಿ ಜನರಿಂದ ಮರಳಿ ಆದೇಶ ಪಡೆಯಲು ಚುನಾವಣೆಗೆ ಮುಂದಾಗಬೇಕು.
ಈ ಕುರಿತು ಸೂಕ್ತ ಕ್ರಮವಹಿಸುವಂತೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.



