ಬೆಂಗಳೂರು: ಕೇರಳದ ಮಾಜಿ ಶಿಕ್ಷಣ ಸಚಿವ ಹಾಗೂ ಸಿಪಿಎಂ ಪೊಲಿಟ್ ಬ್ಯೂರೋ ಸದಸ್ಯ ಎಂ.ಎ ಬೇಬಿ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಎಂ.ಎ.ಬೇಬಿ ದೇಶದ ಮತ್ತು ಜಗತ್ತಿನ ಪ್ರಖ್ಯಾತ ಸಂಗೀತಗಾರರು, ಸಾಹಿತ್ಯ ದಿಗ್ಗಜರು, ಬರಹಗಾರರೊಂದಿಗೆ ಅನನ್ಯ ಬಾಂಧವ್ಯ ಹೊಂದಿದ್ದಾರೆ.
ಈ ಹಿಂದೆ ಅಮೇರಿಕಾ ದಾಳಿಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾದ ಸಮಾಜವಾದಿ ಕ್ಯೂಬಾ ದೇಶದ ಜನರ ಹಸಿವು ನೀಗಿಸಲು ಭಾರತದ ಪ್ರತಿ ಮನೆಯಿಂದ ಸಂಗ್ರಹಿಸಲಾದ ಆಹಾರ ಪದಾರ್ಥಗಳನ್ನು ಕೊಲ್ಕತ್ತಾ ಬಂದರಿನಿಂದ ಕ್ಯೂಬಾದ ಹವಾನ ಬಂದರಿಗೆ ಎರಡು ಹಡಗುಗಳಲ್ಲಿ ಕೊಂಡ್ಯೂಯ್ದ ಭಾರತ ಕ್ಯೂಬಾ ಸೌಹಾರ್ದ ಸಮಿತಿ ಸಂಚಾಲಕರಾಗಿ ಇವರು ಕೆಲಸ ಮಾಡಿದ್ದರು.
ಭಾರತದಿಂದ ಹಡಗಿನಲ್ಲಿ ಆಗಮಿಸಿದ ಆಹಾರ ಪದಾರ್ಥಗಳನ್ನು ಸ್ವತಃ ಫಿಡಲ್ ಕ್ಯಾಸ್ಟ್ರೋ ಹವಾನ ಬಂದರಿಗೆ ಬಂದು ಸ್ವೀಕರಿಸಿ ಭಾರತದ ನಾಗರೀಕರು ನೀಡಿರುವ ಈ ಆಹಾರದಿಂದ ಎರಡು ತಿಂಗಳು ಕ್ಯೂಬಾ ನಾಗರಿಕರು ಅತ್ಯುತ್ತಮ ಬ್ರೆಡ್ ತಯಾರಿಸಿ ತಿಂದು ತಮ್ಮ ಹಸಿವು ನೀಗಿಸಿಕೊಳ್ಳಲಿದ್ದಾರೆ ಎಂದು ಬಣ್ಣಿಸಿದ್ದರು. ಆ ಆಹಾರ ಪದಾರ್ಥಗಳನ್ನು ಕೊಂಡೊಯ್ದವರು ಬೇಬಿ.
ಕಳೆದ ನಾಲ್ಕು ದಿನಗಳಿಂದ ಕಲಬುರಗಿ, ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ಸಿಪಿಎಂ ಪಕ್ಷದ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕದಲ್ಲಿ ಸಂಚಾರ ಮಾಡುತ್ತಿರುವ ಬೇಬಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಯು ಬಸವರಾಜ ಹಾಗೂ ರಾಜ್ಯ ಸಮಿತಿ ಸದಸ್ಯೆ ಕೆ.ಎಸ್.ವಿಮಲ ಅವರೊಂದಿಗೆ ಹಂಸಲೇಖ ಅವರನ್ನು ಹಾಗೂ ಮಗಳು ತೆಜಸ್ವಿನಿ ಮತ್ತು ಮಗ ಅಲಂಕಾರ್ ಅವರನ್ನು ಅವರ ಮನೆಯಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿದರು.



