ಸೌಹಾರ್ದ ಪರಂಪರೆಯ ನೆಲೆಬೀಡಾಗಿದ್ದ ನಮ್ಮ ನಾಡು ಈಗ ದುರಿತ ಕಾಲದಲ್ಲಿದೆ. ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಆಶಿಸಿದ್ದ ಭಾರತ ಇದಲ್ಲ. ದೇಶದ ಸೌಂದರ್ಯವಾಗಿರುವ ‘ಬಹುತ್ವ ಮತ್ತು ಬಂಧುತ್ವ’ ಅಪಾಯದಲ್ಲಿದೆ. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರ ಬೆಳೆಯುತ್ತಿದೆ. ರಾಷ್ಟ್ರೀಯತೆ, ದೇಶಭಕ್ತಿ, ಧರ್ಮ ರಕ್ಷಣೆಯನ್ನೇ ಗುರಾಣಿಯನ್ನಾಗಿಸಿ ಪ್ರಜಾತಂತ್ರದ ಮೂಲಭೂತ ಹಕ್ಕು-ಅವಕಾಶಗಳನ್ನು ಕಸಿಯಲಾಗುತ್ತಿದೆ. ಸರ್ವಾಧಿಕಾರಕ್ಕೆ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಮುಖವಾಡ ತೊಡಿಸಲಾಗಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಮನುಷ್ಯ ತನ್ನ ಸಹಜೀವಿ ಮನುಷ್ಯನನ್ನೇ ದ್ವೇಷಿಸುವಂತಹ ವಾತಾವರಣವನ್ನು ಸಹಿಷ್ಣುತೆಯನ್ನು ಪೊರೆಯಬೇಕಿದ್ದ ಸರ್ಕಾರವೇ ನಿರ್ಮಿಸುತ್ತಿದೆ. ಮನುಷ್ಯರ ಮಧ್ಯೆ ಪರಸ್ಪರ ಅಪನಂಬಿಕೆಗಳನ್ನು ಸೃಷ್ಟಿಸಲೆಂದೇ ಕಾಯಿದೆ ಕಾನೂನುಗಳನ್ನು ರಚಿಸಿ ಚರ್ಚೆಗೆ ಬಿಡಲಾಗಿದೆ. ಸರ್ವಾಧಿಕಾರವನ್ನು ವಿರೋಧಿಸಿ ಜನರ ಪರವಾಗಿ, ದೇಶದ ಪರವಾಗಿ ಹೋರಾಟ ಮಾಡುತ್ತಿರುವ ಯುವ-ಎಡ-ಅಂಬೇಡ್ಕರ್ ವಾದಿ-ಜನ-ಪರಿಸರ- ಮಹಿಳಾ ಪರ ಹೋರಾಟಗಾರರನ್ನು ಬಂಧಿಸಲಾಗಿದೆ. ಇಡಿ, ಐಟಿ, ಸಿಬಿಐಯನ್ನು ಬಳಸಿಕೊಂಡು ಪ್ರತಿಪಕ್ಷದ ನಾಯಕರನ್ನು ಹಣಿಯಲಾಗುತ್ತಿದೆ. ಇದೆಲ್ಲವೂ ಭಾರತದ ದುರಿತ ಕಾಲವನ್ನು ಸೂಚಿಸುತ್ತದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಜಗತ್ತು ಸುಮ್ಮನೆ ಕೂರದೆ ಪ್ರತಿಕ್ರಿಯೆ ನೀಡಲೇಬೇಕಿದೆ.

ಆ ಕಾರಣಕ್ಕಾಗಿ ಸಮುದಾಯ ಕರ್ನಾಟಕವು ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ “ಸಂವಿಧಾನದ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ದಿನಾಂಕ 13.04.2024 ರಂದು ಬೆಳಿಗ್ಗೆ 10.30ಕ್ಕೆ ಬಾಪು ಸಭಾಂಗಣ, ಗಾಂಧಿ ಭವನ, ಬೆಂಗಳೂರು ಇಲ್ಲಿ ನಡೆಯಲಿದೆ.

ಹಿರಿಯ ಸಾಹಿತಿಗಳೂ, ಬೆಂಗಳೂರು ಸಮುದಾಯದ ಅಧ್ಯಕ್ಷರೂ ಆಗಿರುವ ಅಗ್ರಹಾರ ಕೃಷ್ಣಮೂರ್ತಿಯವರು ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ರಾಜಪ್ಪ ದಳವಾಯಿ, ಜನಾರ್ದನ ಜೆನ್ನಿ, ಡಾ ಮೀನಾಕ್ಷಿ ಬಾಳಿ, ಶಿವಸುಂದರ್, ಜೆ ಸಿ ಶಶಿಧರ್, ಮನೋಜ್ ವಾಮಂಜೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಸಮುದಾಯದ ವಲಯ ಕಾರ್ಯದರ್ಶಿ ರವೀಂದ್ರನಾಥ ಸಿರಿವರ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಆ ಬಳಿಕ ಡಾ ರಾಜಪ್ಪ ದಳವಾಯಿ ರಚನೆಯ, ಶಶಿಧರ ಭಾರಿಘಾಟ್ ನಿರ್ದೇಶನದ, ಬೆಂಗಳೂರು ಸಮುದಾಯ ಪ್ರಸ್ತುತಪಡಿಸುವ “ಜನ ಸತ್ತಿಲ್ಲ” ಕಿರುನಾಟಕ ಪ್ರದರ್ಶನ ನಡೆಯಲಿದೆ.

ಸಂವಿಧಾನದ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿರೋಧದ ಬಗೆಗೆ ಸಾಮೂಹಿಕ ಸಂಘಟನೆಗಳ ಜೊತೆ ಮಹತ್ವದ ಸಮಾಲೋಚನೆ ನಡೆಯಲಿದೆ. ಈ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾಗಿರುವ ಕೆ.ನೀಲಾ ವಹಿಸಲಿದ್ದಾರೆ. ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾಗಿರುವ ಮಾವಳ್ಳಿ ಶಂಕರ್ ಅಭಿಪ್ರಾಯ ಮಂಡನೆ ಮಾಡಲಿದ್ದಾರೆ. ಚಿಂತಕ ಎಸ್.ವೈ, ಗುರುಶಾಂತ್, ಹಿರಿಯ ಲೇಖಕಿ ಡಾ. ಕೆ.ಶರೀಫಾ, ಈ ಬಸವರಾಜು, ಜಿ.ಸಿ. ಬಯ್ಯಾರೆಡ್ಡಿ, ಅಧ್ಯಕ್ಷರು, ಕೆ.ಜಿ. ಮಹದೇವಪ್ಪ, ಅಖಿಲ ವಿಧ್ಯಾಸಂದ್ರ, ಭೀಮನಗೌಡ, ಬಿ.ಆರ್. ಮಂಜುನಾಥ್, ರಾಮಚಂದ್ರಪ್ಪ, ಗೋಪಾಲಕೃಷ್ಣ ಪರಳಹಳ್ಳಿ, ಎಸ್. ದೇವೇಂದ್ರಗೌಡ ಭಾಗವಹಿಸಲಿದ್ದಾರೆ.

ಇದಾದ ಬಳಿಕ ಕೇಸರಿ ಹರವು ಅವರ ‘ಕಿಸಾನ್ ಸತ್ಯಾಗ್ರಹ’ – ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.



