ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ: ಸಿದ್ದರಾಮಯ್ಯ

2 years ago

ಮೈಸೂರು: ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ. ನಮ್ಮ ಸಂವಿಧಾನದ ಸ್ವರೂಪ ಬದಲಾಯಿಸಿ ದೇಶದ ದುಡಿಯುವ ವರ್ಗಗಳಿಗೆ ವಂಚಿಸಿದರೆ ದೇಶದ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 45ಕ್ಕೂ ಹೆಚ್ಚು ಮಂದಿ ಹೋಬಳಿ ಮಟ್ಟದ ಮುಖಂಡರು ಹಾಗೂ ಮಾಜಿ ಕೇಂದ್ರ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಆತ್ಮೀಯರು ಮತ್ತು ಸಂಬಂಧಿಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವರೆಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿರುವುದಕ್ಕೆ, Narendra Modi ಅವರು ಪ್ರಧಾನಮಂತ್ರಿ ಆಗಿರುವುದಕ್ಕೆ ನಮ್ಮ ಸಂವಿಧಾನ ಕಾರಣ ಎಂದು ಹೇಳಿದರು.

Bharatiya Janata Party (BJP) ನಮ್ಮ ಈ ಸಂವಿಧಾನ ಬದಲಾವಣೆಯ ಅಜೆಂಡಾ ಇಟ್ಟುಕೊಂಡಿದೆ. ಈ ಸಂವಿಧಾನ ಬದಲಾದರೆ ದೇಶದ ದಲಿತರು, ಶೂದ್ರರು, ಮಹಿಳೆಯರು ಮತ್ತು ಶ್ರಮಿಕ ವರ್ಗಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ನಾವೆಲ್ಲಾ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನ ಉಳಿಯಬೇಕು ಎಂದರೆ ಬಿಜೆಪಿ ಸೋಲಿಸಬೇಕು ಎನ್ನುವ ಪಣ ತೊಡಬೇಕು ಎಂದು ಕರೆ ನೀಡಿದರು.

ಶೂದ್ರರಿಗೆ ಬಿಜೆಪಿ – ಆರ್ಎಸ್ಎಸ್ ನ ಗರ್ಭಗುಡಿಯೊಳಗೆ ಪ್ರವೇಶವೇ ಇಲ್ಲ. ಶೂದ್ರರು, ದಲಿತರನ್ನು ಕೇವಲ ಬಳಸಿಕೊಳ್ಳುತ್ತಾರೆ ಆದರೆ ಆರ್.ಎಸ್.ಎಸ್ನ ಒಳಗೆ ಪ್ರವೇಶ ಕೊಡುವುದಿಲ್ಲ. ಆದ್ದರಿಂದ ಆರ್ಎಸ್ಎಸ್ ಕಡೆಗೆ ತಲೆ ಕೂಡ ಹಾಕಬೇಡಿ ಎಂದು ಮನವಿ ಮಾಡಿಕೊಂಡರು.

ದಲಿತರು, ಶೂದ್ರರು, ಹಿಂದುಳಿದವರ ವಿರೋಧಿಯಾದ ಬಿಜೆಪಿ ಹಾಗೂ ಆರ್.ಎಸ್.ಎಸ್ ಮೀಸಲಾತಿಯನ್ನೂ ವಿರೋಧಿಸುತ್ತದೆ. ಮಂಡಲ್ ವರದಿ ವೇಳೆ ಶೂದ್ರರ ಸಾವಿಗೆ ಕಾರಣರಾದವರು, ನಮ್ಮವರು ಬೆಂಕಿ ಹಚ್ಚಿಕೊಂಡು ಸಾಯುವಂತೆ ಮಾಡಿದವರು ಇವರೇ ಅಲ್ವಾ? ನಮ್ಮ ಶತ್ರುಗಳ ಜೊತೆಗೆ ಈ ದೇಶದ ಶೂದ್ರರು, ದಲಿತರು, ಹಿಂದುಳಿದವರು ಏಕೆ ಹೋಗಬೇಕು? ಎಂದು ಪ್ರಶ್ನಿಸಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್  ಅವರು ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿ ಬೌದ್ದ ಧರ್ಮಕ್ಕೆ ಹೋಗಿದ್ದಕ್ಕೆ ಜಾತಿ ಅಸಮಾನತೆ ಮತ್ತು ಸಾಮಾಜಿಕ ಅಸಮಾನತೆ ಮುಖ್ಯ ಕಾರಣ ಎಂದರು.

ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕಡಿಮೆ ಇದೆ. ನಾವು ಅಧಿಕಾರಕ್ಕೆ ಬಂದರೆ ನಾವು ರಾಜ್ಯದಲ್ಲಿ ತಂದಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಪರವಾದ ಎಸ್.ಸಿ.ಟಿ.ಪಿ / ಟಿ.ಎಸ್.ಪಿ ಮುಂತಾದ ಕಾನೂನುಗಳನ್ನು ರಾಷ್ಟ್ರಮಟ್ಟದಲ್ಲೂ ಜಾರಿಗೆ ತರಲಾಗುವುದು. ಈ ಬಗ್ಗೆ ರಾಹುಲ್ ಗಾಂಧಿ ಅವರ ಜತೆಗೂ ಮಾತನಾಡಿ ಪ್ರಣಾಳಿಕೆಯಲ್ಲಿ ಸೇರಿಸಲು ಹೇಳಿದ್ದೇನೆ ಎಂದರು.

Leave a Reply