ರಾಜ್ಯ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಅಕ್ರಮ, ಪೊಲೀಸ್ ದೌರ್ಜನ್ಯ ಇಂದು ಮನೆಮಾತಾಗಿದೆ. ಸರ್ಕಾರದ ಕಾರ್ಯಕ್ಷಮತೆಯನ್ನು ಭ್ರಷ್ಟಾಚಾರದ ಪರ್ಸಂಟೇಜ್ ಲೆಕ್ಕದಲ್ಲಿ ಅಳೆಯುವ ಸಂದರ್ಭವನ್ನು ನಾವು ಇಂದು ಕಾಣುತ್ತಿದ್ದೇವೆ. ಇದಕ್ಕೆ ತಾಜಾ ಉದಾಹರಣೆ, ನವೆಂಬರ್ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕಾಗಿ (GIM) ಕಿರುಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಐದು ನಿಮಿಷಗಳ ಕಿರುಚಿತ್ರ ನಿರ್ಮಾಣಕ್ಕಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ನಾಲ್ಕುವರೆ (4.5) ಕೋಟಿ ರೂಪಾಯಿಗಳನ್ನು ಪಾವತಿಸಲು ಒಪ್ಪಂದ ಮಾಡಿಕೊಂಡಿರುವುದು. ಈಗಾಗಲೇ ಈ ಸಂಸ್ಥೆಗೆ ಒಂದುವರೆ (1.5) ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವಿಚಾರದ ಬಗ್ಗೆ ಸ್ವತಃ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ನಿರಾಣಿಯವರು ತಮ್ಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ದಿನಾಂಕ 21-10-2022 ರಂದು ಟಿಪ್ಪಣಿ ಮೂಲಕ ಪತ್ರ ಬರೆದು, (ಪತ್ರ ಸಂಖ್ಯೆ ಬೃಮಕೈಸ/3236/2022) ಈ ಒಪ್ಪಂದವನ್ನು ರದ್ದುಪಡಿಸಲು ಸೂಚಿಸಿದ್ದಾರೆ.
ಸಚಿವರ ಈ ಟಿಪ್ಪಣಿಯನ್ನು ಗಮನಿಸಿದರೆ ಹಲವಾರು ಅನುಮಾನಗಳು ಮೂಡುತ್ತವೆ. ಟಿಪ್ಪಣಿಯಲ್ಲಿ ಸಚಿವರು ಹೇಳಿರುವಂತೆ, ಈ ಕಿರುಚಿತ್ರಕ್ಕಾಗಿ ಮಾಡಿಕೊಂಡಿರುವ ಒಪ್ಪಂದವು ಅವರ ಗಮನಕ್ಕೆ ಬಂದಿರುವುದಿಲ್ಲ ಎಂದು ತಿಳಿದುಬರುತ್ತದೆ, ಆದರೆ ಇದೂ ಕೂಡ ಅನುಮಾನಾಸ್ಪದವಾಗಿದೆ. ತಮ್ಮ ಇಲಾಖೆಯಲ್ಲಿ ಈ ಪ್ರಮಾಣದ ಹಣವನ್ನು ಯಾವ ಬಾಬ್ತಿಗೆ ಖರ್ಚು ಮಾಡಲಾಗುತ್ತಿದೆ ಎಂದು ಸಚಿವರಿಗೆ ತಿಳಿದಿಲ್ಲವೆಂದರೆ, ಅವರಿಗೆ ತಮ್ಮ ಇಲಾಖೆಯ ಮೇಲೆ ನಿಯಂತ್ರಣವಿಲ್ಲವೆಂದು ಹಾಗು ಸರ್ಕಾರದೊಳಗೆ ಇಲ್ಲಾ ಹೊರಗಿನಿಂದ ಇಲಾಖೆಯನ್ನು ಮತ್ತೊಬ್ಬರು ನಿಯಂತ್ರಿಸುತ್ತಿರುವುದು, ಇಲ್ಲಾ ಅಧಿಕಾರ ಶಾಹಿಯು ಸರ್ಕಾರದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ ಎಂಬ ಅನುಮಾನ ಮೂಡುತ್ತದೆ, ಇಲ್ಲಾ ಈ ವಿಚಾರವು ಬಹಿರಂಗವಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ, ಸಚಿವರು ತಮ್ಮ ಮೇಲೆ ಬರಬಹುದಾದ ಆಪಾದನೆಯನ್ನು ಅಧಿಕಾರಿಗಳ ಮೇಲೆ ಹೊರಿಸುವ ಕ್ರಮವೂ ಆಗಿದೆ. ಆದರೆ, ಒಟ್ಟಾರೆಯಾಗಿ ಈ ಸರ್ಕಾರವು ಜನರ ಹಣವನ್ನು ಲೂಟಿ ಮಾಡುತ್ತಿರುವುದಂತು ಸತ್ಯ ಎಂದು ಇದು ತೋರಿಸುತ್ತದೆ.
ಕಂಡು ಕೇಳದ ರೀತಿಯಲ್ಲಿ ಲೂಟಿ ಮಾಡುತ್ತಿರುವ ಈ ಸರ್ಕಾರವು, ಕೆಟಿಟಿಪಿ ಕಾಯ್ದೆಯನ್ನು ನಿರಂತರವಾಗಿ ಉಲ್ಲಂಘನೆ ಮಾಡುತ್ತಿದೆ. ಎಲ್ಲಾ ಖರಿದಿಗಳಿಗೂ ಮತ್ತು ಗುತ್ತಿಗೆ ನೀಡಲು ಕೆಟಿಟಿಪಿ ಕಾಯ್ದೆಯಿಂದ ವಿನಾಯಿತಿ ಪಡೆಯುವುದಾದರೆ, ಆ ಕಾಯ್ದೆ ಯಾಕಾದರೂ ಇರಬೇಕು ಎಂಬುದು ಪ್ರಶ್ನೆಯಾಗಿದೆ. ಇತ್ತೀಚೆಗೆ ಕನ್ನಡ ಚಲನಚಿತ್ರ ಹಿತಿಹಾಸದಲ್ಲಿ ಮೆಗಾ ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕ ಮತ್ತು ಅವರ ಸಂಬಂಧಿಯೊಬ್ಬರು ಇದೇ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಈ ವಿಚಾರ ಅವರ ಗಮನಕ್ಕೆ ಬಂದಿತ್ತೊ ಇಲ್ಲವೊ ತಿಳಿದಿಲ್ಲ, ತಿಳಿದಿದ್ದರೆ, ಅವರೂ ಕೂಡ ಆಶ್ಚರ್ಯ ಪಡುವತ್ತಿದ್ದರೆನೊ. ಬಹುಶಃ ಇದು ಜಾಗತಿಕ ಹೂಡಿಕೆದಾರರ ಸಮಾವೇಶವಾಗಿರುವುದರಿಂದ ಇದನ್ನು ಹಾಲಿವುಡ್ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರಬಹುದು. ಇಲ್ಲಾ ಬಹುತೇಕ ಶೂನ್ಯ ಸಾಧನೆಯ ತಮ್ಮ ಸರ್ಕಾರದ ಬಗ್ಗೆ ಕಂತೆ ಪುರಾಣದ ಚಿತ್ರ ನಿರ್ಮಾಣಕ್ಕೆ ಈ ಹಣ ಬೇಕಾಗಿರಬಹುದು.
ಒಂದೆಡೆ ಹಣವಿಲ್ಲ ಎಂದು ಹೇಳುವ ಸರ್ಕಾರ ಮತ್ತೊಂದೆಡೆ, ಈ ರೀತಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ನೆರವಾಗುತ್ತಿದೆ. ಯಾವ ಜನಕಲ್ಯಾಣ ಸಾಧನೆಯೂ ಇಲ್ಲದ ಸರ್ಕಾರ, ತನ್ನನ್ನು ಬಿಂಬಿಸಿಕೊಳ್ಳಲು ಪ್ರತಿನಿತ್ಯ ಜಾಹಿರಾತು ನೀಡಿ ಹತ್ತಾರು ಕೋಟಿ ಹಣ ಅಪವ್ಯಯ ಮಾಡುತ್ತಿದೆ. ಇನ್ನೊಂದೆಡೆ ಶಾಲೆಗಳ ನಿರ್ವಹಣೆಗೆ, ಪಠ್ಯ ಪುಸ್ತಕ, ಸಮವಸ್ತ್ರ, ಶೂ/ ಕಾಲುಚೀಲ ಒದಗಿಸಲು ಹಣದ ಮುಗ್ಗಟ್ಟು ಎಂದು ಹೇಳಿ ಪೋಷಕರಿಂದ ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಲು ಮುಂದಾಗುತ್ತದೆ. ಕೆಲವೇ ಲಕ್ಷಗಳ ಸೇತುವೆ/ ರಸ್ತೆ / ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮತಿ ಪಡೆಯಲಾಗುತ್ತದೆ, ಆದರೆ, ನಾಲ್ಕುವರೆ ಕೋಟಿ ರೂಪಾಯಿಗಳ ಕಿರುಚಿತ್ರ ನಿರ್ಮಾಣವು ಸಚಿವರ ಗಮನಕ್ಕೆ ಬಾರದಿರುವುದು ಹಾಸ್ಯಾಸ್ಪದ ಮತ್ತು ಹೊಣೆಗೇಡಿತನ. ಶಾಲಾ ಮಕ್ಕಳಿಂದ ಮಾಸಿಕ ವಂತಿಗೆ ಸಂಗ್ರಹಿಸಲು ಹೊರಡಿಸುವ ಸುತ್ತೋಲೆ ತಮ್ಮ ಗಮನಕ್ಕೆ ಬಂದಿಲ್ಲವೆಂದು ಶಿಕ್ಷಣ ಸಚಿವರು ತಮ್ಮ ಹೊಣಗೇಡಿತನವನ್ನು ಇತ್ತೀಚೆಗಷ್ಟೆ ಪ್ರದರ್ಶಿಸಿದ್ದಾರೆ.
ಇನ್ನು ಸರ್ಕಾರವು ಹಣವಿಲ್ಲ, ತಾನು ದಿವಾಳಿಯಾಗಿದ್ದೇನೆ ಎಂದು ಹೇಳುವ ಎಲ್ಲಾ ಕೆಲಸಗಳನ್ನು ಮಾಡುತ್ತಿದೆ. ಈ ನೆಪ ಇಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರೆಕಾಸಿನ ಮಜ್ಜಿಗೆಗಾಗುವಷ್ಟು ಹಣ ಬಿಡುಗಡೆ ಮಾಡಲು ಕೂಡಾ ಜಿಪುಣತನ ತೋರಿಸುವ ಸರ್ಕಾರ, ಹಣ ಲೂಟಿ ಮಾಡಲು ಮಾತ್ರ ಹಿಂದೆ ಮುಂದೆ ನೋಡುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಕಲಾವಿದರುಗಳಿಗೆ ಇದುವರೆವಿಗೂ ಹಣ ಪಾವತಿಸದ, ನೆರೆ, ಭರ ಪರಿಹಾರಕ್ಕೆ ಫಲಾನುಭವಿಗಳಿಗೆ ಪರಿಹಾರ ನೀಡಲು ಹಣವಿಲ್ಲದ ಸರ್ಕಾರಕ್ಕೆ, ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗದ ಸರ್ಕಾರಕ್ಕೆ, ಲೂಟಿ ಮಾಡಲು ಮಾತ್ರ ಹಣ ಲಭ್ಯವಿರುತ್ತದೆ. ಇದು “ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ” ಎಂಬಂತಾಗಿದೆ.
ಸಚಿವರು ಜಿಮ್ ಸಮಾವೇಶಕ್ಕೆ ವ್ಯಯಿಸುತ್ತಿರುವ ಹಣವನ್ನು ಗಮನಿಸಿದರೆ, ಪ್ರತಿಯೊಂದರಲ್ಲೂ ಇದೇ ರೀತಿಯ ಲೂಟಿ ಕಂಡುಬರುತ್ತದೆ, ಆದ್ದರಿಂದ ಬಹುತೇಕ ಲೂಟಿ ಮಾಡಲು ಮತ್ತು ಜನರನ್ನು ನಂಬಿಸಲು ನಡೆಸುವ ಜಿಮ್ ಎಂಬ ನಾಟಕವನ್ನು ರದ್ದುಗೊಳಿಸುವುದೇ ಒಳಿತು. ರಾಜ್ಯದ ಬಹುತೇಕ ಯಶಸ್ವಿ ಯುವ ಉದ್ಯಮಿಗಳು, ಕೇವಲ ತಮ್ಮ ಶ್ರಮದಿಂದ ಯಶಸ್ವಿಯಾಗಿದ್ದಾರೆಯೆ ಹೊರತು, ಸರ್ಕಾರದ ನೆರವಿನಿಂದಲ್ಲ. ಸರ್ಕಾರದ ನೆರವು ಬಹುತೇಕ ಭಲಾಡ್ಯರಿಗೆ, ಪಟ್ಟಭದ್ರರಿಗೆ ಮತ್ತು ಬೃಹತ್ ಉದ್ದಿಮೆದಾರರಿಗೆ ಮಾತ್ರ ಲಭಿಸುತ್ತಿದೆ. ರಾಜ್ಯದ ಪ್ರತಿಭಾವಂತ ಯುವ ಜನರು ನೆರವಿಗಾಗಿ ಸರ್ಕಾರಿ ಕಛೇರಿಗಳಿಗೆ ಅಲೆದೂ ಅಲೆದೂ ತಮ್ಮ ಜೀವನದ ಅಮೂಲ್ಯ ದಿನಗಳನ್ನು ವ್ಯರ್ಥ ಮಾಡಿಕೊಡಿರುವುದೆ ಅವರಿಗೆ ಲಭಿಸಿರುವ ಲಾಭ.
ಈ ಕಿರುಚಿತ್ರ ನಿರ್ಮಾಣದ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಇದಕ್ಕೆ ಕಾರಣರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಇಲ್ಲಿಯವರೆಗೆ ನಡೆಸಲಾಗಿರುವ ಜಿಮ್ ಸಮಾವೇಶಕ್ಕಾಗಿ ಮಾಡಿರುವ ಖರ್ಚು ವೆಚ್ಚಗಳನ್ನು, ಅದರಿಂದ ಆಗಿರುವ ಪ್ರಯೋಜನಗಳ ಬಗ್ಗೆ ತನಿಖೆ ನಡೆಸಿ, ಜನರ ಮುಂದೆ ಇಡಬೇಕು ಎಂದು ಕೆ.ಆರ್.ಎಸ್ ಪಕ್ಷ ಆಗ್ರಹಿಸುತ್ತದೆ.
– ದೀಪಕ್ ಸಿ. ಎನ್., ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.



