ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೂಚನೆ
ಬಳ್ಳಾರಿ: ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರವೂ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಹೇಳಿದರು.
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ನಗರದ ಹೊಸ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗಡಿ, ಹೋಟೆಲ್, ಬೇಕರಿ, ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಇತರೆ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕೋಟ್ಪಾ ಕಾಯ್ದೆಗೆ ಸಂಬಂಧಿಸಿದ ನಾಮಫಲಕಗಳನ್ನು ಹಾಕಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು. ನಾಮಫಲಕ ಹಾಕದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 1308 ಶಾಲೆಗಳಲ್ಲಿ 1267 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳನ್ನಾಗಿ ಘೋಷಣೆ ಮಾಡಲಾಗಿದ್ದು, ಬಾಕಿ ಉಳಿದ 41 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳಾಗಿ ಘೋಷಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಜಿಲ್ಲೆಯ 75 ಪದವಿ ಪೂರ್ವ ಕಾಲೇಜುಗಳ ಪೈಕಿ 62 ಕಾಲೇಜುಗಳಲ್ಲಿ ಸೆಕ್ಷನ್-4 ಮತ್ತು ಸೆಕ್ಷನ್-6ಬಿ ನಾಮಫಲಕಗಳು ಅಳವಡಿಸಲಾಗಿದ್ದು, ಬಾಕಿ ಉಳಿದ ಕಾಲೇಜುಗಳಲ್ಲಿ ಈ ಕೂಡಲೇ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ, ಡಿಡಿಪಿಯು ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಆಹಾರ ಮಾರಾಟಕ್ಕೆ ಸಂಬಂಧಿಸಿದಂತೆ 2093 ಪರವಾನಿಗೆ ಪಡೆದ ಅಂಗಡಿ, ಬೇಕರಿ, ಹೋಟೆಲ್ಗಳಿದ್ದು, ಅವುಗಳಲ್ಲಿ 1407 ಸೆಕ್ಷನ್ – 4 ನಾಮಫಲಕ ಅಳವಡಿಸಲಾಗಿದೆ ಹಾಗೂ ಬಾಕಿ ಉಳಿದ 686 ಸ್ಥಳಗಳಲ್ಲಿ ನಾಮಫಲಕ ಅಳವಡಿಸಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಪಂಗಳಲ್ಲಿ ಹಾಗೂ ಗ್ರಾಮಗಳಲ್ಲಿ ತಂಬಾಕು ನಿಯಂತ್ರಣ ಸಮಿತಿಗಳನ್ನು ರಚಿಸಲಾಗಿದ್ದು, ನಿಮಮಾನುಸಾರ ಸಭೆ ನಡೆಸಿ ಕೋಟ್ಪಾ-2003ರ ಸೆಕ್ಷನ್ 4, 5, 6ಎ ಮತ್ತು 7ರ ಅನುಷ್ಠಾನಗೊಳಿಸಬೇಕು ಹಾಗೂ ಕಾರ್ಯಾಚರಣೆ ನಡೆಸಿ ದಂಡ ಸಂಗ್ರಹಿಸುವಂತೆ ಸೂಚಿಸಿದರು.
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಾಗಿ ಕಂಡುಬರುತ್ತಿದ್ದು, ಕಡಿವಾಣ ಹಾಕಬೇಕು ಮತ್ತು ದಂಡ ವಿಧಿಸಬೇಕು ಎಂದು ಕೆಕೆಆರ್ಟಿಸಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳ ಮೈಕ್ ಮೂಲಕ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ಪರಿಣಾಮ ಕುರಿತು 2 ನಿಮಿಷಗಳ ಜಿಂಗಲ್ ಮೂಲಕ ಪ್ರಚಾರ ನೀಡಬೇಕು ಎಂದರು.
ಕೋಟ್ಪಾ ಕಾಯ್ದೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.



