ಮಂಗಳೂರು: ದೆಹಲಿಯಲ್ಲಿ ನಿನ್ನೆ ಮತ್ತು ಇವತ್ತು ಕ್ರಮವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯ ಸರಕಾರಗಳ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವ ಸಂಪುಟದ ಸದಸ್ಯರು ಮತ್ತು ಎಂಪಿಗಳ, ಶಾಸಕರು ಧರಣಿ ಸತ್ಯಾಗ್ರಹ ನಡೆಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸರ್ವಾಧಿಕಾರಿ ನೀತಿ, ತೆರಿಗೆಯ ಪಾಲನ್ನು ಸರಿಯಾಗಿ ಹಂಚಿಕೆ ಮಾಡದೆ ದಮನಕಾರಿ ನೀತಿಯನ್ನು ಪ್ರದರ್ಶಿಸುತ್ತಿರುವ ನೀತಿಗಳ ವಿರುದ್ಧ ಐತಿಹಾಸಿಕ ಹೋರಾಟ ನಡೆದಿದ್ದು ಇಂದು ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೌಹಾರ್ದ ಬೆಂಬಲವಾಗಿ ಮಂಗಳೂರಿನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಕೆ.ಯಾದವಶೆಟ್ಟಿ ಮಾತನಾಡಿ, ರಾಜ್ಯಗಳ ಸಂವಿಧಾನಬದ್ಧ ತೆರಿಗೆ ಪಾಲನ್ನು ನೀಡದೆ ಬೆದರಿಕೆ ಒಡ್ಡುವ ಕೇಂದ್ರ ಸರಕಾರದ ನೀತಿಗೆ ಈಗಾಗಲೇ ಪ್ರಬಲವಾದ ಆಕ್ರೋಶ ವ್ಯಕ್ತವಾಗಿದೆ. ವಿರೋಧಪಕ್ಷಗಳ ಆಡಳಿತವನ್ನು ಒಪ್ಪುವ ಸ್ಥಿತಿಯಲ್ಲಿ ಕೇಂದ್ರ ಸರಕಾರ ಇಲ್ಲ ಎಂದು ಇದರಿಂದ ತಿಳಿಯುತ್ತಿದೆ. ಇದು ಖಂಡನೀಯ ಎಂದರು.
ನರೇಂದ್ರ ಮೋದಿ ಸರಕಾರ ಎಲ್ಲಾ ರಂಗಗಳಲ್ಲು ವಿಫಲವಾಗಿರುವುದು ಇದರಿಂದ ತಿಳಿಯುತ್ತಿದೆ. ಅಪಾಯಕಾರಿ ನರೇಂದ್ರ ಮೋದಿ ಸರಕಾರವನ್ನು ಮಹಾ ಚುನಾವಣೆಯಲ್ಲಿ ಸೋಲಿಸಬೇಕೆಂದು ಕರೆ ನೀಡಿದರು.
ಸಭೆಯನ್ನುದ್ದೇಶಿಸಿ ವಸಂತ ಆಚಾರಿ, ಸುಕುಮಾರ್ ತೊಕ್ಕೋಟ್ಟು ಮಾತನಾಡಿದರು. ಪ್ರತಿಭಟನಾ ಪ್ರದರ್ಶನದಲ್ಲಿ ಮುನೀರ್ ಕಾಟಿಪಳ್ಳ, ಪದ್ಮಾವತಿ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಜಯಂತಿಶೆಟ್ಟಿ, ಯೋಗೀಶ್ ಜಪ್ಪಿನ ಮೋಗರು, ಬಿ.ಕೆ.ಇಮ್ತಿಯಾಜ್, ಭಾರತಿ ಬೋಳಾರ, ಪ್ರಮೀಳ, ಪ್ರಮೀಳಾ ದೇವಾಡಿಗ, ಮನೋಜ್ ವಾಮಂಜೂರು, ಸದಾಶಿವ ದಾಸ್ ಮುಂತಾದವರು ಉಪಸ್ಥಿತರಿದ್ದರು.




