ಕಾಂಗ್ರೆಸ್ ನಿಂದ ಬಿ.ಎಲ್.ಶಂಕರ್ ರಾಜ್ಯಸಭೆಗೆ ಆಯ್ಕೆಯಾಗಲಿ

2 years ago

ಇಂದಿನ ಕಾಂಗ್ರೆಸ್ ನ ಪರಿಸ್ಥಿತಿಯಲ್ಲಿ ರಾಜ್ಯಸಭೆಗೆ ಯೋಗ್ಯರು, ಸಮರ್ಥರನ್ನು ಕಳುಹಿಸುವುದು ಅತ್ಯಂತ ಅವಶ್ಯಕ.

ಹತ್ತು ವರ್ಷಗಳಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿರುವ ಕಾರಣದಿಂದ ಕೇಂದ್ರ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ ನಡೆಸುವುದು ಅಷ್ಟು ಸುಲಭ ಸಾಧ್ಯವಾಗಿಲ್ಲ.

ಇದೇ ರೀತಿಯಲ್ಲಿ ರಾಜ್ಯಸಭೆಯಲ್ಲೂ ಸಹ ಕೇಂದ್ರ ಸರ್ಕಾರದ ವಿರುದ್ಧ ಅವರ ತಪ್ಪುಗಳನ್ನು ಎತ್ತಿ ತೋರಿಸುತ್ತಾ ದೇಶದ ಜನರಿಗೆ ಸತ್ಯವನ್ನು ತಿಳಿಸುವ ಕೆಲಸವನ್ನು ಮಾಡುವ ಕಾರ್ಯದಲ್ಲೂ ಸಹ ಕಾಂಗ್ರೆಸ್ ಪಕ್ಷಕ್ಕೆ ಸದಸ್ಯರಿಗಿಂತ ಪರಿಣಾಮಕಾರಿಯಾಗಿ ಚರ್ಚೆಗಳಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ಮಸೂದೆಗಳ ಬಗ್ಗೆ ಅಂಕಿಅಂಶಗಳೊಂದಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಾದ ಮಾಡಬಲ್ಲ ಸದಸ್ಯರ ಕೊರತೆ ಇರುವುದು ಸ್ಪಷ್ಟವಾಗಿದೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಬಿ.ಎಲ್.ಶಂಕರ್

ಶ್ರೀ ಮಲ್ಲಿಕಾರ್ಜುನ ಖರ್ಗೆರವರ ದಿಟ್ಟತನದ ಹೋರಾಟಕ್ಕೆ ಬೆಂಬಲವಾಗಿ ನಿಂತು ಅವರ ಪರವಾಗಿ ಧ್ವನಿಯಾಗಿ ಕೇಂದ್ರ ಸರ್ಕಾರವನ್ನು ಸಮರ್ಥವಾಗಿ ಎದುರಿಸಬಲ್ಲ ಸಂಸದೀಯ ಪಟುಗಳ ಮತ್ತು ಯೋಗ್ಯ ನಾಯಕರುಗಳ ಅವಶ್ಯಕತೆ ಈಗ ಎಲ್ಲ ಸಂದರ್ಭಗಳಿಗಿಂತ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಮೂರು ಜನರನ್ನ ರಾಜ್ಯಸಭೆಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಪಕ್ಷದ ವಿಚಾರಗಳನ್ನ ಗಟ್ಟಿಯಾಗಿ ಪ್ರತಿಪಾದಿಸುವ ಕೇಂದ್ರ ಸರ್ಕಾರದ ತಪ್ಪುಗಳನ್ನ ಸಮರ್ಥವಾದ ವಾದದೊಂದಿಗೆ ಸಾರ್ವಜನಿಕರ ಮುಂದೆಡುವ ವ್ಯಕ್ತಿತ್ವಗಳು ಅವಶ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಡಾ.ಬಿ.ಎಲ್.ಶಂಕರ್ ಯೋಗ್ಯವಾದ ಆಯ್ಕೆಯಾಗುತ್ತಾರೆ.

ಸರಳ ಮತ್ತು ಸುಸಂಸ್ಕೃತ ಹಾಗೂ ಸಜ್ಜನಿಕೆಯ ರಾಜಕಾರಣವನ್ನು ಬಯಸುವ ಮನಸ್ಸುಗಳಿಗೆ ಬಿ.ಎಲ್.ಶಂಕರ್ ಅವರು ಆಯ್ಕೆಯಾಗಬೇಕೆನ್ನುವುದು ಪ್ರಜ್ಞಾವಂತರ ಇಚ್ಛೆಯಾಗಿರುತ್ತದೆ. ಇವರು ಕಳೆದ ನಾಲ್ಕು ದಶಕಗಳ ಸುದೀರ್ಘವಾದ ರಾಜಕಾರಣದ ಅನುಭವವನ್ನು ಹೊಂದಿದವರಾಗಿದ್ದು ಒಂದು ಬಾರಿ ಲೋಕಸಭಾ ಸದಸ್ಯರು ಆಗಿದ್ದು, ವಿಧಾನ ಪರಿಷತ್ತಿನಲ್ಲಿ ಸಭಾಪತಿಯಾಗಿ ತಮ್ಮದೇ ಆದಂತಹ ವ್ಯಕ್ತಿತ್ವವನ್ನು ಸಾಬೀತುಪಡಿಸಿರುವ ಬಿ.ಎಲ್.ಶಂಕರ್ ಅವರು ದೇಶದ ಸಂಸದೀಯ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಅಧ್ಯಯನದ ಆಧಾರದ ಮೇಲೆ ಪಿಎಚ್ಡಿ ಪದವಿಯನ್ನು ಸಹ ಪಡೆದುಕೊಂಡಿರುತ್ತಾರೆ. ಕಾಂಗ್ರೆಸ್ ಪಕ್ಷದ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ನಿಲುವುಗಳಲ್ಲಿ ಯಾವುದೇ ಸಂದರ್ಭದಲ್ಲಿ ರಾಜಿಯಾಗದೆ ರಾಜಕಾರಣವನ್ನು ಮುನ್ನಡೆಸಿಕೊಂಡು ಬಂದಿರುತ್ತಾರೆ

ಸಾರ್ವಜನಿಕ ಚುನಾವಣೆಗಳಿಗೆ ನಿಂತು ಚುನಾವಣಾ ರಾಜಕಾರಣದ ತಂತ್ರಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿ ಆಯ್ಕೆಯಾಗುವಂತಹ ಸಾಮರ್ಥ್ಯ ಬಹಳಷ್ಟು ಯೋಗ್ಯರು ಮತ್ತು ಸಮರ್ಥರಾದ ನಾಯಕರುಗಳಲ್ಲಿ ಇಲ್ಲದಿರುವುದು ಅವರುಗಳು ರಾಜಕಾರಣದಲ್ಲಿ ಹೆಚ್ಚಿನ ಸ್ಥಾನಮಾನವನ್ನ ಪಡೆದುಕೊಳ್ಳಲು ಸಾಧ್ಯವಾಗದಿರಲು ಪ್ರಮುಖ ಕಾರಣವಾಗಿರುತ್ತದೆ. ಇದನ್ನೇ ಮಾನದಂಡವನ್ನಾಗಿಸಿಕೊಂಡು ನಿಜಕ್ಕೂ ಸಮರ್ಥವಾದ ವಿಚಾರ ಮಂಡನೆ ಮಾಡಬಲ್ಲ ವ್ಯಕ್ತಿಗಳನ್ನು ಅವಕಾಶಗಳಿಂದ ದೂರವಿರುವುದು ಸಹ ಪ್ರಜಾಪ್ರಭುತ್ವಕ್ಕೆ ಮತ್ತು ಅದರ ಬೆಳವಣಿಗೆಗೆ ಸಹಕಾರಿಯಾಗುವುದಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಡಾ.ಬಿ.ಎಲ್.ಶಂಕರ್ ಅವರನ್ನ ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆ ಮಾಡಿದರೆ ಸದನದಲ್ಲಿ ಮುಂದಿನ ದಿನಗಳಲ್ಲಿ ನಾಡಿನ ವಿಚಾರಗಳನ್ನ ಪ್ರಬಲವಾಗಿ ಮಂಡಿಸಬಲ್ಲ ಕನ್ನಡಿಗರ ಧ್ವನಿಯಾಗಿ ಹೊರಹೊಮ್ಮುತ್ತಾರೆ. ಇದರಿಂದ ನಾಡಿಗೂ ಪಕ್ಷಕ್ಕೂ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಗು ಒಳ್ಳೆಯದಾಗುತ್ತದೆ.

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply