ಬೆಂಗಳೂರು: ಮಕ್ಕಳ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ತುರ್ತು ಪರಿಸ್ಥಿತಿಯಲ್ಲಿ ನೀಡಲು ಅನುಮೋದನೆ ದೊರೆತಿದೆ. 2 ವರ್ಷದಿಂದ 18 ವರ್ಷದ ಮಕ್ಕಳಿಗೆ ನೀಡಲು ಅನುಮತಿ ದೊರತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಫಿಸಿಟಾಲ್ ಸೆಂಟರ್ ಆಫ್ ಅಕಾಡೆಮಿಕ್ಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಪೋಷಕರೆಲ್ಲರು ಬಹಳ ಕಾತರದಿಂದ ಕಾಯುತ್ತಿದ್ದುದರಿಂದ ಇದು ಬಹಳ ಸಂತಸದ ಸಂಗತಿ. ಇದರ ಪೂರೈಕೆ ಬಗ್ಗೆ ಕೇಂದ್ರ ಸಚಿವಾಲಯದೊಂದಿಗೆ ಚರ್ಚೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ. ಜೈಡಸ್ ಎಂಬ ಭಾರತೀಯ ಸಂಸ್ಥೆ ವಿಶ್ವದಲ್ಲೇ ಮೊದಲ ಡಿಎನ್ಎ ಲಸಿಕೆ ಸಂಶೋಧನೆ ಮಾಡಿರುವುದು ಸಹ ಹೆಗ್ಗಳಿಕೆಯ ವಿಷಯ. ಇಂಡಿಯಾ ಟುಡೆ ಸಂಸ್ಥೆ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ಭಾರತ್ ಬಯೋಟೆಕ್ ಸಂಸ್ಥೆಯ ಕೃಷ್ಣಾ ಎಲ್ಲಾ ಅವರನ್ನು ಭೇಟಿ ಮಾಡುವ ಅವಕಾಶ ದೊರೆಯಿತು ಎಂದರು.
ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಮೂಗಿಗೆ ಹಾಕುವ ನೇಸಲ್ ವ್ಯಾಕ್ಸಿನ್ ಕೂಡ ಅಂತಿಮ ಹಂತದಲ್ಲಿದೆ. ಇದಕ್ಕೆ ಅನುಮತಿ ದೊರತೆರೆ ಇನ್ನಷ್ಟು ಶೀಘ್ರವಾಗಿ ಲಸಿಕೆ ಹಾಕಬಹುದು. ನೇಸಲ್ ವ್ಯಾಕ್ಸಿನ್ ಗೆ ನುರಿತ ಆರೋಗ್ಯ ಸಿಬ್ಬಂದಿ ಅವಶ್ಯಕತೆ ಇಲ್ಲದಿರುವುದರಿಂದ ಹೆಚ್ಚು ವೇಗವಾಗಿ ಲಸಿಕೆ ವಿತರಿಸಬಹುದು. ರಾಜ್ಯದಲ್ಲಿ 2-18 ವರ್ಷ ಒಳಗಿನ ಸುಮಾರು 1.5 ಕೋಟಿ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಮಕ್ಕಳಿಗೆ ಲಸಿಕೆ ನೀಡಲು ಸುಮಾರು 3 ಕೋಟಿ ಡೋಸ್ ಲಸಿಕೆ ಅವಶ್ಯಕತೆ ಇದೆ. ಎಂದರು.



