ಬೆಂಗಳೂರು: ರಾಜಭವನದ ಕಡತ ಸೋರಿಕೆ ಪ್ರಕರಣದಲ್ಲಿ ತನಿಖೆಗೆ ಅವಕಾಶ ಕೋರಿ ಪತ್ರ ಬರೆದಿರುವ ಐಪಿಎಸ್ ಅಧಿಕಾರಿ ಅತ್ಯಂತ ಭ್ರಷ್ಟ ಎಂದು ಕಿಡಿಕಾರಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅವರ ಮೇಲಿರುವ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಣಿ ಅಪರಾಧಗಳನ್ನು ಮಾಡಿರುವ ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾನೆ. ಈತನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪೂರ್ಣ ಕೃಪಾಕಟಾಕ್ಷವಿದೆ ಎಂದರು.
ಲೋಕಾಯುಕ್ತ ವಿಶೇಷ ತನಿಖಾ ದಳದ ಐಜಿಪಿ ಎಂ.ಚಂದ್ರಶೇಖರ್ ಆ ಭ್ರಷ್ಟ ಅಧಿಕಾರಿ ಆಗಿದ್ದು, ಇಂಥ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂದರು.
ಆಂಧ್ರಪ್ರದೇಶದ ಮೂಲದವರಾದ ಚಂದ್ರಶೇಖರ್ ಹಿಮಾಚಲ ಪ್ರದೇಶದ ಕೇಡರ್ ನಲ್ಲಿ ಆಯ್ಕೆಯಾದವರು. 2008-09 ರಲ್ಲಿ ಕರ್ನಾಟಕದಲ್ಲಿ ನಿಯೋಜನೆ ಮೇಲೆ ಕೆಲಸ ಮಾಡಲು ರಾಜ್ಯಕ್ಕೆ ಬಂದವರು. ಗರಿಷ್ಠ 5 ವರ್ಷ ಈ ರೀತಿ ಸೇವೆ ಸಲ್ಲಿಸಬಹುದಷ್ಟೇ. ಆದರೆ ಇವರು ಹಿಮಾಚಲ ಪ್ರದೇಶದ ಹವಾಮಾನ ತಮ್ಮ ಆರೋಗ್ಯಕ್ಕೆ ಅನುಕೂಲಕರವಾಗಿಲ್ಲ ಎಂದು ತಮ್ಮ ಆರೋಗ್ಯದ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಲ್ಲೇ ಉಳಿದುಕೊಂಡಿದ್ದಾರೆ ಎಂದರು.
ಚಂದ್ರಶೇಖರ್ ಅವರ ಪತ್ನಿ ಹೆಸರಿನಲ್ಲಿ 38 ಮಹಡಿಯ ಕಟ್ಟಡವನ್ನು ರಾಜಕಾಲುವೆ ಮೇಲೆ ಕಟ್ಟುತ್ತಿದ್ದಾರೆ. ಈ ಅಧಿಕಾರಿಯ ಕೈಕೆಳಗಿನ ಅಧಿಕಾರಿ ಹಾಗೂ ಶ್ರೀಧರ್ ಎಂಬುವವರು 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂಬ ದೂರನ್ನುನೀಡಿದ್ದಾರೆ. ಆದರೂ ರಾಜ್ಯಸರ್ಕಾರ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಇಂತಹ ಅಧಿಕಾರಿ ಲೋಕಾಯುಕ್ತ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಕೋರುವ ಉದ್ಧಟತನ ತೋರಿದ್ದಾರೆ. ಇವರಿಗೆ ಆ ಅಧಿಕಾರ ಕೊಟ್ಟವರು ಯಾರು? ಇಂತಹ ಆರೋಪಗಳನ್ನು ಹೊತ್ತಿರುವ ಆ ಅಧಿಕಾರಿಯನ್ನು ಉನ್ನತ ಹುದ್ದೆಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಎಂದರು.
ನನ್ನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಲೋಕಾಯುಕ್ತಕ್ಕೆ ಬರೆದಿದ್ದ ಅತಿ ಗೌಪ್ಯ ಪಾತ್ರವೊಂದು ಸೋರಿಕೆ ಆಗಿತ್ತು. ಅದು ನಮ್ಮ ಕುಟುಂಬದ ವಿರುದ್ಧ ಅನೇಕ ತಿಂಗಳಿನಿಂದ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವ ಖಾಸಗಿ ಸುದ್ದಿವಾಹಿನಿಗೆ ಆ ಪತ್ರ ಸೋರಿಕೆ ಆಗಿತ್ತು. ಅದು ಐಜಿಪಿ ಚಂದ್ರಶೇಖರ್ ಅವರಿಂದಲೇ ಸೋರಿಕೆ ಆಗಿದೆ. ಆದರೆ, ಅದೇ ಅಧಿಕಾರಿ ರಾಜ್ಯಪಾಲರ ಕಚೇರಿಯಿಂದಲೇ ಪತ್ರ ಸೋರಿಕೆ ಆಗಿದೆ ಎಂದು ಕಥೆ ಕಟ್ಟಿ ರಾಜ್ಯಪಾಲರ ಕಾರ್ಯಾಲಯದ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಅನುಮತಿ ಕೊಡುವಂತೆ ಲೋಕಾಯುಕ್ತ ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದರು.
ಇಂತಹ ಅಧಿಕಾರಿಯನ್ನು ಮುಂದಿಟ್ಟುಕೊಂಡು ನಾವು ಹೇಳಿದಂತೆ ವಿರೋಧಪಕ್ಷದವರನ್ನು ಮುಗಿಸಲು ಶ್ರಮ ವಹಿಸಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಸೂಚನೆ ಕೊಟ್ಟಿದ್ದಾರೆ. ಈ ಕಾರ್ಯ ಮಾಡುವವರಿಗೆ ಸಿಐಡಿಯ ಮುಖ್ಯಸ್ಥ ಸ್ಥಾನ ಇಲ್ಲವೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆ ನೀಡುವ ಮಾತು ಕೂಡ ಕೊಟ್ಟಿದ್ದಾರೆ ಎಂದರು.
ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ನನ್ನ ಬಳಿ ಇರುವ ದಾಖಲೆಗಳನ್ನು ಬಯಲು ಮಾಡಿದರೆ ಕೊನೇಪಕ್ಷ 6ರಿಂದ 7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಬಿಡುತ್ತೇನೆ ಎಂದರು.
ನಾನು ಬಹಳ ಕ್ಲೀನ್, ಪಾರದರ್ಶಕ, ನನ್ನ ಜೀವನ ತೆರೆದ ಪುಸ್ತಕ ಎಂದೆಲ್ಲಾ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳ ಕಥೆ ಏನಾಗಿದೆ? ಅವುಗಳ ತನಿಖೆ ಎಲ್ಲಿಗೆ ಬಂದಿದೆ ಎಂಬುದನ್ನು ಜನರಿಗೆ ಹೇಳಬೇಕಲ್ಲವೇ? ಇವರು ಕ್ಲೀನ್, ಸ್ವಚ್ಚ ಆಗಿದ್ದರೆ ಇಷ್ಟು ಪ್ರಕರಣಗಳು ಇವರ ಮೇಲೆ ಏಕೆ ದಾಖಲಾಗುತ್ತಿದ್ದವು ಎಂದರು.
ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಯಾವ ರೀತಿ ಗೌರವ ಕೊಡುತ್ತಿದ್ದಾರೆ ಎಂಬುದಕ್ಕೆ ತಾಜಾ ನಿದರ್ಶನ. ಸಿದ್ದರಾಮಯ್ಯನವರು ವಿರೋಧಪಕ್ಷದ ನಾಯಕರಾಗಿದ್ದಾಗ ರಾಜ್ಯಪಾಲರ ಕರ್ತವ್ಯ ಹಾಗೂ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ. ಆಗ ಸರ್ಕಾರ ತಪ್ಪು ಮಾಡಿದಾಗ ತಿದ್ದುವ ಅಧಿಕಾರ ರಾಜ್ಯಪಾಲರಿಗಿದೆ ಎಂದು ಹೇಳಿದ್ದಾರೆ. ಅದನ್ನೊಮ್ಮೆ ಕೇಳುವುದು ಒಳ್ಳೆಯದು ಎಂದರು.



