ಬೆಂಗಳೂರು: ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಸಮಯದಲ್ಲಿ ಕಾರ್ಯಕರ್ತರನ್ನು ಗುರುತಿಸಲು ನಡೆಸಲಾಗಿದ್ದ ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಇದೀಗ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ನಡುವಿನ ಸಂಘರ್ಷಕ್ಕೆ ವೇದಿಕೆ ನಿರ್ಮಿಸಿದೆ.
ರಾಜ್ಯದ ನಾಯಕರು ಹಲವು ಸುತ್ತಿನ ಸಭೆ ನಡೆಸಿ ಅಂತಿಮಗೊಳಿಸಿದ ಪಟ್ಟಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಕೆಲ ಹೆಸರುಗಳು ಸೇರ್ಪಡೆಯಾಗಿವೆ. ಅದರಲ್ಲೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದ ನವೀನ್ ಎಂಬ ವ್ಯಕ್ತಿ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಇದು ಸಿಎಂ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಜೊತೆಗೆ ಕಲಬುರಗಿಯ ಕೆಲವರು ಪಟ್ಟಿಯಲ್ಲಿ ನುಸುಳಿರುವುದು ಕೂಡಾ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರಲ್ಲಿ ಅಸಮಾಧಾನ ಮೂಡಿಸಿದ್ದು, ಪಟ್ಟಿಯನ್ನು ಪ್ರಕಟಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಆದರೆ, ಹೈಕಮಾಂಡ್ ನಿಂದ ಶೀಘ್ರ ಆದೇಶ ಹೊರಡಿಸುವಂತೆ ಸೂಚನೆ ಬಂದಿದೆ. ಇದನ್ನು ಪಾಲಿಸಲು ರಾಜ್ಯದ ನಾಯಕರು ನಿರಾಕರಿಸಿದ್ದು, ಬಿಕ್ಕಟ್ಟು ಸೃಷ್ಟಿಯಾಗಿದೆ. ಸರ್ಕಾರದ ಆದೇಶ ಹೊರಬೀಳುವ ಮುನ್ನ ತಮ್ಮ ಗಮನಕ್ಕೂ ಬಾರದೆ, ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟು ಪರಿಹರಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸರ್ಜೇವಾಲಾ ಮಧ್ಯಪ್ರವೇಶ ಮಾಡಿದ್ದಾರೆ.
ವಾರಾಂತ್ಯಕ್ಕೆ ಅವರು ಬೆಂಗಳೂರಿಗೆ ಬರುತ್ತಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆಶಿವಕುಮಾರ್ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ನಿಗಮ ಮಂಡಳಿ ನೇಮಕಾತಿ ಬಗ್ಗೆ ರಾಜ್ಯ ನಾಯಕರುಗಳೊಂದಿಗೆ ಸಮಾಲೋಚಿಸದೆ ಹೈಕಮಾಂಡ್ ನಾಯಕರೇ ಪಟ್ಟಿ ತಯಾರಿಸುವುದರಿಂದಾಗಿ ಗೊಂದಲಗಳಾಗಿವೆ. ಅದನ್ನು ಸರಿಪಡಿಸುತ್ತಿರುವುದರಿಂದಾಗಿ ವಿಳಂಬವಾಗುತ್ತಿದೆ ಎಂದಿದ್ದಾರೆ.
ನೇಮಕಾತಿ ಪಟ್ಟಿಗೆ ಸಂಬಂಧಪಟ್ಟಂತೆ ತಮ್ಮೊಂದಿಗೆ ಯಾರೂ ಚರ್ಚಿಸಿಲ್ಲ, ಅಭಿಪ್ರಾಯವನ್ನೂ ಕೇಳಿಲ್ಲ. ನಿಮ್ಮ ಕಡೆಯ ಒಂದೆರೆಡು ಹೆಸರುಗಳನ್ನು ಕೊಡಿ ಎಂದಷ್ಟೇ ಕೇಳಿದ್ದರು ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಹೈಕಮಾಂಡ್ ನಾಯಕರಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರ ಪೂರ್ಣ ಮಾಹಿತಿ ಇರುವುದಿಲ್ಲ. ಜಿಲ್ಲಾ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ನಮ್ಮಂತಹ ನಾಯಕರುಗಳಿಗೆ ಹೆಚ್ಚಿನ ವಿವರಗಳಿರುತ್ತವೆ. ನಮ್ಮಂತವರ ಜೊತೆ ಚರ್ಚೆ ಮಾಡಬೇಕಿತ್ತು. ಹೈಕಮಾಂಡ್‍ನವರಿಗೆ ಮಾಹಿತಿ ಇರುವುದಿಲ್ಲ ಎಂದು ಹೇಳಿದರು.
ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ನೇಮಕಾತಿಯ ಹೊಣೆಗಾರಿಕೆಯನ್ನು ಬಿಡಬೇಕಿತ್ತು. ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರೇ ನೇರವಾಗಿ ಪಟ್ಟಿ ನೀಡುತ್ತಿದ್ದಾರೆ. ಅದರಿಂದಾಗಿ ವಿಳಂಬವಾಗುತ್ತಿದೆ ಎಂದರು.
ನಾನು 8 ವರ್ಷ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆ ಹಾಗೂ ಸತತವಾಗಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದವರು ಯಾರು ಎಂದು ತಮಗೆ ಮಾಹಿತಿ ಇರುತ್ತದೆ. ನಮ್ಮೊಂದಿಗೆ ಚರ್ಚೆ ನಡೆಸದೇ ಇರುವುದರಿಂದಲೇ ಗೊಂದಲವಾಗುತ್ತದೆ ಎಂದರು.
ಪಕ್ಷದಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಬೇಕು. ಕೆಲಸ ಮಾಡದೇ ಇದ್ದವರಿಗೆ ಅವಕಾಶ ಕೊಟ್ಟಾಗ ಪ್ರಾಮಾಣಿಕರ ಮನಸ್ಸಿಗೆ ನೋವಾಗುತ್ತದೆ. ಹೀಗಾಗಿ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಪ್ರಮುಖರ ಜೊತೆ ಚರ್ಚೆ ಮಾಡಬೇಕು. ಏಕಾಏಕಿ ಯಾರ್ಯಾರದ್ದೋ ಹೆಸರುಗಳು ಪಟ್ಟಿಯಲ್ಲಿ ಬಂದರೆ ಸಮಸ್ಯೆಯಾಗುತ್ತದೆ ಎಂದರು.




