ಬರೋಬ್ಬರಿ 50 ಲಕ್ಷ ಪರಿಹಾರಕ್ಕೆ ಒತ್ತಾಯ
ಜನಪ್ರತಿನಿಧಿಗಳು, ಪತ್ರಕರ್ತರು, ಗಣ್ಯರ ಮೇಲೆ ಕ್ರಮಕ್ಕೆ ಆಗ್ರಹ
ಬೆಳಗಾವಿ: ಮೂಗಿನ ಹೊಳ್ಳೆಯೊಳಗೆ ನಿಂಬೆಹಣ್ಣಿನ ರಸ ಬಿಟ್ಟುಕೊಂಡರೆ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗುತ್ತದೆ ಎಂದು ಉದ್ಯಮಿ ವಿಜಯ ಸಂಕೇಶ್ವರ್ ಹೇಳಿಕೆ ನೀಡಿದ್ದರು. ಇದಾದ ನಂತರ ರಾಯಚೂರಿನ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ್ ನಿಂಬೆಹಣ್ಣಿನ ರಸದ ಪ್ರಯೋಗ ಮಾಡಿ ಜೀವಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿಜಯ ಸಂಕೇಶ್ವರ್ ವಿರುದ್ಧ ಬೆಳಗಾವಿಯ ಆರ್.ಟಿ.ಐ ಕಾರ್ಯಕರ್ತ ಮತ್ತು ವಕೀಲ ಭೀಮನಗೌಡ ಜಿ ಪರಗೋಡ ದೂರು ನೀಡಿದ್ದಾರೆ.
ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಕುಮಾರ್, ಧಾರವಾಡ ಜಿಲ್ಲಾಧಿಕಾರಿ ಮತ್ತು ರಾಯಚೂರು ಜಿಲ್ಲಾಧಿಕಾರಿ, ಸಿಂಧನೂರು ತಾಲೂಕು ದಂಡಾಧಿಕಾರಿಗೆ ದೂರು ನೀಡಿದ್ದಾರೆ.
ಕೋವಿಡ್-19 ಸಾಂಕ್ರಮಿಕ ರೋಗ ನಿಯಂತ್ರಣ ಕಾಲದಲ್ಲಿ ರೋಗ ನಿಯಂತ್ರಣ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಿಗೆ ದಾರಿ ತಪ್ಪಿಸುವ ಹೇಳಿಕೆ ನೀಡಿದ ಧಾರವಾಡದ ಮಾಜಿ ಸಂಸದ ಮತ್ತು ವಿ.ಆರ್.ಎಲ್. ಸಂಸ್ಥೆಯ ಸಿ.ಎಮ್.ಡಿ ವಿಜಯ ಸಂಕೇಶ್ವರ ಅವರ ವಿರುದ್ಧ ದೂರು ನೀಡಿರುವುದಾಗಿ ಭೀಮನಗೌಡ ಜಿ ಪರಗೋಡ ಹೇಳಿದ್ದಾರೆ.
ಈ ಸಂಬಂಧ ಅವರು ಮೂರು ಪುಟಗಳ ಸುದೀರ್ಘ ಲಿಖಿತ ದೂರು ನೀಡಿದ್ದು, ದೂರಿನಲ್ಲಿ, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ: 28-01-2021ರಂದು ಧಾರವಾಡದ ಮಾಜಿ ಸಂಸದರು ಮತ್ತು ವಿಆರ್.ಎಲ್, ಸಂಸ್ಥೆಯ ಸಿ.ಎಮ್.ಡಿ ವಿಜಯ ಸಂಕೇಶ್ವರರವರು ಕೋವಿಡ್-19 ಸಾಂಕ್ರಮಿಕ ರೋಗದ ನಿಯಂತ್ರಣ ಸುಲಭ ಉಪಾಯ ಅದು ನಿಂಬೆ ಹಣ್ಣಿನ ರಸವನ್ನು ಮೂಗಿನ ಎರಡು ಹೊಳ್ಳೆಗಳಲ್ಲಿ ಹಾಕಿಸಿಕೊಂಡರೆ ಕೋವಿಡ್ ಸಾಂಕ್ರಮಿಕ ರೋಗದಿಂದ ಗುಣಮುಖರಾಗುತ್ತೀರಿ ಮತ್ತು ಯಾವುದೇ ಆಸ್ಪತ್ರೆಗಳಿಗೆ ಅಲೆದಾಡುವುದು ಮತ್ತು ಈ ಕಾಯಿಲೆಯಿಂದ ಗುಣಮುಖರಾಗಲು ಆಸ್ಪತ್ರೆಯ ಚಿಕಿತ್ಸೆಗೆ ಹೆಚ್ಚು ವೆಚ್ಚ ಮಾಡಬೇಕಿಲ್ಲ ಎಂದು ಸಲಹೆ ನೀಡಿದ್ದು, ಅದೇ ದಿನ ದಿನಾಂಕ: 28-04-2021ರಂದು ರಾಜ್ಯದ ಪ್ರಮುಖ ಪತ್ರಿಕೆಗಳಾದ ವಿಜಯವಾಣಿ, ವಿಜಯ ಕರ್ನಾಟಕ ಪ್ರಜಾವಾಣಿ ಹಾಗೂ ಇತರ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು ಇರುತ್ತದೆ ಎಂದಿದ್ದಾರೆ.
ಇದರ ಅನ್ವಯ (ವಿಜಯ ಸಂಕೇಶ್ವರ ಅವರು ಹೇಳಿಕೆ ನೀಡಿದ ನಂತರ) ರಾಯಚೂರ ಜಿಲ್ಲೆಯ ಸಿಂದನೂರ ಪಟ್ಟಣದ ನಟರಾಜ ಕಾಲನಿಯ ಶಿಕ್ಷಕ ಬಸವರಾಜ ಇವರು ಬುಧುವಾರ ಬೆಳಿಗ್ಗೆ ಮಾಜಿ ಸಂಸದರು ಮತ್ತು ವಿ.ಆರ್.ಎಲ್. ಸಂಸ್ಥೆಯ ಸಿ.ಎಮ್.ಡಿ ವಿಜಯ ಸಂಕೇಶ್ವರರವರ ಸಲಹೆಗಳನ್ನು ಪಾಲನೆ ಮಾಡಿ ನಿಂಬೆ ಹಣ್ಣಿನ ರಸ ತಮ್ಮ ಎರಡು ಮೂಗಿನ ಹೊಳ್ಳೆಗಳಲ್ಲಿ ಹಾಕಿಕೊಂಡಿದ್ದರಿಂದ ಸದರಿ ವ್ಯಕ್ತಿಗೆ ಎರಡು ಭಾರಿ ವಾಂತಿಯಾಗಿ ನಂತರ ನೆಲಕ್ಕೆ ಕುಸಿದು ಬಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಯಾವುದೇ ಪ್ರಯೋಜನವಾಗಿರುವದಿಲ್ಲ. ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದಿದ್ದಾರೆ.
ಜೊತೆಗೆ, ಇವರಿಗೆ (ಬಸವರಾಜ) ಈ ಮೊದಲು ಯಾವುದೆ ಆರೋಗ್ಯ ಸಮಸ್ಯೆ ಇರಲಿಲ್ಲ ಅಂತಾ ಕುಟುಂಬದವರು ಹೇಳಿದ್ದು, ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ. ಸದರಿ, ಶಿಕ್ಷಕ ಬಸವರಾಜ ಇವರು ಮೂಲತಃ ಸಿಂದನೂರ ತಾಲೂಕಿನ ರಾಮತ್ನಾಳ ಗ್ರಾಮದವರಾಗಿದ್ದು, ಇವರು 2002ರಲ್ಲಿ ಸಿಂದನೂರಿನ ಶರಣ ಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಾ ಇದ್ದರು ಎಂದು ಉಲ್ಲೇಖಿಸಿದ್ದಾರೆ.
ವಿಜಯ ಸಂಕೇಶ್ವರರವರ ಸಲಹೆಯಿಂದ ಅವರ (ಬಸವರಾಜ) ಆರೋಗ್ಯದ ಮೇಲೆ ದುಷ್ಪಪರಿಣಾಮ ಉಂಟಾಗಿ ಅದು ಧ್ವನಿ ಪೆಟ್ಟಿಗೆ (ಲ್ಯಾರಿಂಕ್ಸ್) ತಲುಪಿ ಖಂಡಿತವಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸಾವು ಉಂಟಾಗುವ ಸಾಧ್ಯತೆ ಇರುತ್ತದೆ ಅಂತಾ ರಾಯಚೂರ ಜಿಲ್ಲೆಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಡಾ. ರಾಮಕೃಷ್ಣ ಇವರು ಹೇಳಿದ್ದು, ಪ್ರಜಾವಾಣಿ ಸೇರಿದಂತೆ ನಾಡಿನ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದರ ಜೊತೆಗೆ ನಾಡಿನ ಹಲವಾರು ತಜ್ಞರು, ವೈದ್ಯರು, ವಿಜಯ ಸಂಕೇಶ್ವರವರ ಹೇಳಿಕೆಯ ಬಗ್ಗೆ ತೀವ್ರವಾದ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಅಲ್ಲದೇ, ವಿಜಯ ಸಂಕೇಶ್ವರರವರ ಸಲಹೆಯನ್ನು ಪಾಲಿಸಿ ಮರಣ ಹೊಂದಿದ ಮೃತ ಶಿಕ್ಷಕ ಬಸವರಾಜ ಇವರಿಗೆ ರೂ. 50,00,000/- ರೂ.ಗಳ ಪರಿಹಾರಧನ ನೀಡಬೇಕು ಮತ್ತು ಈ ಘಟನೆಯನ್ನು ಕೊಲೆಗೆ ಪ್ರಚೋದನೆ ಎಂದು ಪರಿಗಣಿಸಿ ಮಾನ್ಯ ಮಾಜಿ ಸಂಸದರ ಮೇಲೆ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿಜಯ ಸಂಕೇಶ್ವರರವರು ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಮತ್ತು ನಾಡಿನ ಪ್ರಮುಖ ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಮಾಲೀಕರು. ಇಂತಹ ವ್ಯಕ್ತಿಗಳ ಹೇಳಿಕೆಯು ಜನಸಾಮಾನ್ಯರ ಮೇಲೆ ತೀವ್ರವಾದ ಪರಿಣಾಮ ಬಿರುತ್ತದೆ ಎನ್ನುವದಕ್ಕೆ ಬಸವರಾಜರವರು ಕೋವಿಡ್-19 ಸಾಂಕ್ರಮಿಕ ರೋಗದಿಂದ ಮುಕ್ತವಾಗಲು ಪಾಲಿಸಿದ ಸಲಹೆ ಒಂದು ಉತ್ತಮ ಉದಾಹರಣೆಯಾಗಿದೆ. ಹಾಗಾಗಿ ಇಂತಹ ಬೇಜವಾಬ್ದಾರಿಯುತ ಹೇಳಿಕೆ ನೀಡುವ ಮತ್ತು ಸಮರ್ಥನೆ ಮಾಡುವ ಜನಪ್ರತಿನಿಧಿಗಳು, ಪತ್ರಕರ್ತರು ಹಾಗೂ ಗಣ್ಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜೊತೆಗೆ ಐ.ಪಿ.ಸಿ ಕಲಂ 306 ಮತ್ತು ಕೋವಿಡ್-19 ಸಾಂಕ್ರಮಿಕ ರೋಗ ತಡೆಗಟ್ಟುವ ಅಧಿನಿಯಮದ ಅನ್ವಯ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದು, ಈ ಕೂಡಲೆ ತಾವುಗಳು (ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ತಾಲೂಕು ದಂಡಾಧಿಕಾರಿಗಳು) ಕಾರ್ಯತತ್ಪರರಾಗಿ ಜನರನ್ನು ದಿಕ್ಕು ತಪ್ಪಿಸುವ, ಕೋವಿಡ್-19 ಸಾಂಕ್ರಮಿಕ ಉಲ್ಬಣಕ್ಕೆ ಕಾರಣವಾಗುವ ಇಂತವರ (ವಿಜಯ ಸಂಕೇಶ‍್ವರ) ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದಿದ್ದಾರೆ.




