ಬೆಂಗಳೂರಿನಲ್ಲಿ ಮುಂದುವರೆದ ಚಿರತೆ ಕಾಟ

2 years ago

#Continued #leopard #problem #Bangalore

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಕಾಟ ಮುಂದುವರೆದಿದೆ. ಮೊನ್ನೆ ಬ್ರೂಕ್‌ ಪೀಲ್ಡ್ ನಲ್ಲಿ ಕಾಣಿಸಿಕೊಂಡ ಚಿರತೆ ಆತಂಕ ಕಾರಣವಾಗಿದ್ದು, ಇದೀಗ ಬೊಮ್ಮನಹಳ್ಳಿಯ ಕೂಡ್ಲು, ಸಿಂಗಸಂದ್ರ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು ಹೆಚ್ ಎಸ್ ಆರ್ ಲೇಔಟ್ ಬಿಟಿಎಂ ಲೇಔಟ್ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಚಿರತೆ ಕಂಡು ಬಂದಿದ್ದರಿಂದ ಬೊಮ್ಮನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಬ್ಬೊಬ್ಬರೇ ಓಡಾಡದಂತೆ ಅರಣ್ಯ ಇಲಾಖೆ ಸೂಚನೆ‌ ನೀಡಿದೆ. ರಾತ್ರಿ ವೇಳೆ ಒಬ್ಬೊಬ್ಬರೇ ಓಡಾಡಬೇಡಿ ಅನಿವಾರ್ಯವಿದ್ದಲ್ಲಿ ಕಾರಿನಲ್ಲಿ ಓಡಾಡಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕೆಆರ್ ಪುರಂ ಅರಣ್ಯಾಧಿಕಾರಿಗಳು ಚಿರತೆಗಾಗಿ ಸಿಂಗಸಂದ್ರ ಲೇಔಟ್ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ದಾಮೊದರ್ ರೆಡ್ಡಿ ಅವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು, ಬೀದಿ ನಾಯಿಗಳು ಚಿರತೆಯನ್ನು ನೋಡಿ ಅದನ್ನು ಓಡಿಸಿಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಚಿರತೆ ನೋಡಿದ ನಿವಾಸಿಗಳು ಆತಂಕದಲ್ಲೇ ಮನೆಯಲ್ಲಿ ಅಡಗಿ ಕೂರುವಂತಾಗಿದೆ. ಇದೀಗ ನಿದ್ದೆಗೆಡಿಸಿದ ಚಿರತೆ ಸೆರೆಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

ಗಾಬರಿಪಡುವ ಅಗತ್ಯವಿಲ್ಲ, ನಾವು ನಿನ್ನೆ ರಾತ್ರಿ ತಂಡವನ್ನು ಕಳುಹಿಸಿದ್ದೇವೆ ಮತ್ತು ಇಂದು ಕೆಲವು ಸಿಬ್ಬಂದಿಯನ್ನು ಕಳುಹಿಸಿ ಚಿರತೆ ಹುಡುಕಿಸಲಾಗುತ್ತಿದೆ. ಚಿರತೆಯ ಸುಳಿವು ಸಿಕ್ಕಿಲ್ಲ. ನಾವು ಚಿರತೆ ತಲಾಶ್ ಮುಂದುವರೆಸುತ್ತಿದ್ದೇವೆ ಮತ್ತು ಅಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇವೆ ಎಂದು ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿ ಎನ್ ರವೀಂದ್ರ ಕುಮಾರ್ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಪೊಲೀಸರು ಚಿರತೆ ಕಾಣಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ. ನಗರದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಹೊರವಲಯದಲ್ಲಿ ಚಿರತೆ ಓಡಾಡಿದ ಅನೇಕ ದೃಶ್ಯಗಳು ಕಂಡುಬಂದಿವೆ.

Leave a Reply