ಸಂವಿಧಾನ ಜಾಗೃತಿ ಜಾಥಾ: ಎತ್ತಿನ ಬಂಡಿಗಳ ಮೆರವಣಿಗೆ, ಬೈಕ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ

2 years ago

ಬಳ್ಳಾರಿ: ಸಂವಿಧಾನ ಜಾಗೃತಿ ಜಾಥಾ ಸಂಡೂರು ತಾಲ್ಲೂಕಿನ ಸುಶೀಲ ನಗರ, ಯಶವಂತ ನಗರ, ಬಂಡ್ರಿ ಹಾಗೂ ನಿಡಗುರ್ತಿ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲಿ ಸಂಚರಿಸಿತು. ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಜೊತೆಗೆ, ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.

ಜಾಥಾವನ್ನು ಪ್ರತಿ ಗ್ರಾಮಗಳಲ್ಲಿ ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ನೇತಾರರ ವೇಷಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು, ಕೋಲಾಟದ ಮೂಲಕ ನೃತ್ಯ, ಹಲಗೆ ಮತ್ತು ಡೊಳ್ಳು ಕಲಾವಿದರು, ತಾಷಾ ರಾಂಡೋಲ್, ಕಂಸಾಳೆ ಹಾಗೂ ನಂದಿ ಕೋಲು ಕುಣಿತದ ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.

ಜಾಥಾಗೆ ಪ್ರಥಮವಾಗಿ ಸುಶೀಲನಗರ ಗ್ರಾಮದಲ್ಲಿ ಲಂಬಾಣಿ ನೃತ್ಯ, ಮಹನೀಯರ ವೇಷಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.

ಸುಶೀಲನಗರ ಗ್ರಾಮದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶೇಖರ್ ಪಾಟೀಲ್ ಮಾತನಾಡಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಮಗ್ರತೆ, ಭ್ರಾತೃತ್ವ ಹಾಗೂ ಸಮಾನತೆಗಳ ಕುರಿತು ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, 2 ವರ್ಷ, 11 ತಿಂಗಳು, 18 ದಿನಗಳ ಕಾಲ ಹಗಲು-ರಾತ್ರಿ ಶ್ರದ್ಧೆಯಿಂದ ಸಂವಿಧಾನವನ್ನು ರಚಿಸಿದರು. ಸಂವಿಧಾನದ ಪ್ರಸ್ತಾವನೆಯು ಮಹತ್ವದ್ದಾಗಿದ್ದು, ನಮಗೆ ಎರಡನೇ ರಾಷ್ಟ್ರಗೀತೆ ಇದ್ದಂತೆ ಎಂದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕ್ಯಾಮಲಿಂಗ ಕರ್ಜಿಗಿ ಮಾತನಾಡಿ, ಸಂವಿಧಾನ ನಮ್ಮೆಲ್ಲರಿಗೆ ಶ್ರೇಷ್ಠವಾಗಿದ್ದು, ಸಂವಿಧಾನದ ಆಶಯಗಳನ್ನು ಈಡೇರಿಸಲು ನಾವೆಲ್ಲರೂ ಬದ್ಧರಾಗಿರಬೇಕಿದೆ ಎಂದರು.

ಯಶವಂತ ನಗರ ಗ್ರಾಮದಲ್ಲಿ ಅದ್ದೂರಿಯಾದ ಸ್ವಾಗತ ದೊರೆಯಿತು. ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಭಾಷಣ ಮಾಡಿದ್ದು ಆಕರ್ಷಕವಾಗಿತ್ತು. ವಿಶೇಷವಾಗಿ ಮೆರವಣಿಗೆಯಲ್ಲಿ ಭಾಗಿಯಾದ ಎಲ್ಲಾ ಸಾರ್ವಜನಿಕರಿಗೆ ಗ್ರಾಮಸ್ಥರು ಮಜ್ಜಿಗೆ ಹಂಚಿದರು. ಬಂಡ್ರಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಲೇಜಿಮ್ ನೃತ್ಯ ಗಮನ ಸೆಳೆಯಿತು. ನಿಡಗುರ್ತಿ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೆರವಣಿಗೆ ಮತ್ತು ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.

ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply