ಬೆಂಗಳೂರು: ಬಡವರ, ದೀನದಲಿತರ ಪರ ಧ್ವನಿಯಾಗಿ ಪರವಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಾ ಬಂದಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರ ಇಂದಿರಾ ಹೆಲ್ತ್ ಕೇರ್ ನಲ್ಲಿ ದಿ.ಮಹದೇವಪ್ಪ ಪ್ರತಿಷ್ಠಾನ ಮತ್ತು ಅಕ್ಷಯ ಟ್ರಸ್ಟ್, ವಿಜಯ ನೇತ್ರಾಲಯ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಮಳೆ, ಬಿಸಿಲಿನಿಂದ ರಕ್ಷಣೆಗೆಗಾಗಿ ಉಚಿತವಾಗಿ ಛತ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಸಾರ್ವಜನಿಕರ ಪರ ಹೋರಾಟ ಮತ್ತು ಸೇವೆ ಮನೋಭಾವನೆವುಳ್ಳ ಜನಪ್ರತಿನಿಧಿಗಳು ಆಯ್ಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಬೆಂಗಳೂರು ನಗರಕ್ಕೆ ಬರುತ್ತಾರೆ ಎಂದು 30 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಮಾಡಿದ್ದರು. ಆದರೆ ಒಂದೇ ದಿನದಲ್ಲಿ ರಸ್ತೆಯಲ್ಲಿ ಗುಂಡಿ ಬಿತ್ತು. ರಾಜ್ಯ ಸರ್ಕಾರ ಮತ್ತು ಬಿ.ಬಿ.ಎಂ.ಪಿ. ಆಡಳಿತ ವ್ಯವಸ್ಥೆ ಏನು ಎಂಬುದು ಇದರಿಂದ ತಿಳಿಯುತ್ತದೆ ಎಂದರು.
ಅಡಮಾನವಿಟ್ಟ ಹಲವಾರು ಬಿ.ಬಿ.ಎಂ.ಪಿ. ಕಟ್ಟಡಗಳನ್ನು ನಮ್ಮ ಆಡಳಿತ ಅವಧಿಯಲ್ಲಿ ಋಣಮುಕ್ತ ಮಾಡಲಾಯಿತು. ರಾಜಕೀಯದಲ್ಲಿ ದುಡ್ಡು ಮಾಡಲು ಬರಬೇಡಿ, ಜನ ಸೇವೆ ಮಾಡುವವರು ಬನ್ನಿ ಮತ್ತು ಉತ್ತಮ ರಾಜಕಾರಣಿಗಳು ಎಲ್ಲ ಪಕ್ಷದಲ್ಲಿ ಇದ್ದಾರೆ. ಅಂತಹವರನ್ನ ಜನರು ಆಯ್ಕೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತಾಡಿದ ಎಮ್.ಶಿವರಾಜು, ಮೇರುನಟ ಡಾ||ರಾಜ್ ಕುಮಾರ್ ರವರು ನೇತ್ರದಾನದ ಮಹತ್ವ ಸಾರಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಕಣ್ಣನ್ನು 8 ಜನಕ್ಕೆ ಮತ್ತೆ ಪ್ರಪಂಚ ನೋಡುವಂತೆ ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದರು. ಅವರ ಸ್ಪೂರ್ತಿಯಿಂದ ದಿ.ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದರು.
ಬಿ.ಬಿ.ಎಂ.ಪಿ. ಮಾಜಿ ಸದಸ್ಯರಾದ ಎಸ್.ಕೇಶವಮೂರ್ತಿ, ಮೋಹನ್ ಕುಮಾರ್ ಮೊದಲಾದವರು ಇದ್ದರು.




