ಬೆಂಗಳೂರು: ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಅತ್ಯಂತ ಭ್ರಷ್ಟವಾಗಿದ್ದು, ಅಲ್ಲಿ ಭ್ರಷ್ಟಾಚಾರದ ಮೇಲೆಯೇ ಚುನಾವಣೆ ನಡೆಯುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಯಾವ ರೀತಿ ಸ್ಪಷ್ಟನೆಯನ್ನೂ ನೀಡುತ್ತಿಲ್ಲ. ಬದಲಾಗಿ ಕರ್ನಾಟಕ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಯಾರೋ ಬಿಜೆಪಿಯ ಕೆಳ ಹಂತದ ನಾಯಕರು 700 ಕೋಟಿ ರೂ. ಆರೋಪ ಮಾಡಿದ್ದರೆ ನಿರ್ಲಕ್ಷಿಸಬಹುದಿತ್ತು. ಆದರೆ ಪ್ರಧಾನಿಯಂತಹ ಹುದ್ದೆಯಲ್ಲಿರುವವರು ಆಧಾರರಹಿತವಾಗಿ ಈ ರೀತಿ ಮಾತನಾಡಿರುವುದು ಸರಿಯಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮೈತ್ರಿಕೂಟ ಒಟ್ಟಾಗಿ ಚುನಾವಣೆ ನಡೆಸುತ್ತಿದೆ. ನಾವು ಜಯ ಗಳಿಸುತ್ತೇವೆ ಎಂದರು.
ಕರ್ನಾಟಕದ ವಿಧಾನಸಭೆ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಬಹಿರಂಗ ಪ್ರಚಾರ ಅಂತ್ಯವಾಗಿದೆ. ಇನ್ನು ಮುಂದಾದರೂ ರಾಜಕೀಯ ಟೀಕೆ ಟಿಪ್ಪಣಿಗಳು ನಿಲ್ಲಬಹುದು ಎಂದರು.




