ಕೋಲಾರ ಟಿಕೆಟ್ ಹಂಚಿಕೆ ಸಮಸ್ಯೆ ಪರಿಹರಿಸಿದ ಕಾಂಗ್ರೆಸ್

2 years ago

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿದೆ. ತಮ್ಮ ಬಣಕ್ಕೆ ಟಿಕೆಟ್ ನೀಡಬೇಕು ಎಂದು ರಾಜೀನಾಮೆ ಬೆದರಿಕೆ ಹಾಕಿದ್ದ ಸಚಿವರು ಹಾಗೂ ಶಾಸಕರು, ಸಚಿವ ಕೆ.ಎಚ್.ಮುನಿಯಪ್ಪ ಕುಟುಂಬದ ಹೊರತಾಗಿ ಎಡಗೈ ಸಮುದಾಯದ ಯಾರಿಗಾದರೂ ಟಿಕೆಟ್ ನೀಡಲು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಈ ಕ್ಷೇತ್ರದ ಟಿಕೆಟ್ ಈಗ ಬೆಂಗಳೂರಿನ ಕಾಂಗ್ರೆಸ್ ಮುಖಂಡನ ಪಾಲಾಗಿದೆ.

ಈ ಕ್ಷೇತ್ರದಿಂದ ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಅವರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯಿತು. ಆದರೆ, ಸಂಪನ್ಮೂಲ ಸೇರಿದಂತೆ ಹಲವು ಕಾರಣದಿಂದ ಇವರನ್ನು ಕಣಕ್ಕೆ ಇಳಿಸುವುದು ಅಷ್ಟು ಅನುಕೂಲಕರವಲ್ಲ ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಪ್ರಸ್ತಾಪ ಕೈಬಿಡಲಾಯಿತು.

ಇದಾದ ನಂತರ ಎಲ್ಲರ ಅಭಿಪ್ರಾಯ ಪಡೆದು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಸೇರಿದ ಕೆ.ವಿ.ಗೌತಮ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.

ಕೆ.ವಿ.ಗೌತಮ್ ಬೆಂಗಳೂರಿನ ಮಾಜಿ ಮೇಯರ್ ಕೆ.ವಿಜಯಕುಮಾರ್ ಅವರ ಮಗ. ಕೋಲಾರ ಮೂಲದವರಾದ ಇವರು ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಕೆ ವಿಜಯಕುಮಾರ್ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪುತ್ರನನ್ನು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಸಲು ತೀರ್ಮಾನಿಸಲಾಗಿದ್ದು ಇದಕ್ಕೆ ಎಲ್ಲ ಬಣಗಳು ಒಮ್ಮತ ಸೂಚಿಸಿವೆ.

ಈ ಬೆಳವಣಿಗೆಯ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ನಮ್ಮ ಪಕ್ಷದಲ್ಲಿರುವ ಎರಡೂ ಬಣಗಳು ಒಂದಾದರೆ ಮಾತ್ರ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ ಎಂದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಬಂದರು. ಪಕ್ಷ ಗೆಲ್ಲಬೇಕು ಎಂಬ ಕಾರಣಕ್ಕೆ ನಾನು ಯಾರನ್ನೂ ವಿರೋಧಿಸಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಯಾರ ವಿರುದ್ಧವೂ ಕೆಲಸ ಮಾಡಿಲ್ಲ. ರಮೇಶ್ ಕುಮಾರ್ ಮತ್ತು ನನ್ನ ಮಧ್ಯೆ ಸಮಸ್ಯೆ ಪರಿಹರಿಸುವಂತೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನೇ ಮನವಿ ಮಾಡಿದ್ದೆ ಎಂದರು.

ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ನಾನು ಕೂಡ ಒಬ್ಬ ಅಭ್ಯರ್ಥಿಯ ಹೆಸರು ಹೇಳಿದ್ದೇನೆ. ಮೂರನೇ ಅಭ್ಯರ್ಥಿಯ ಹೆಸರನ್ನು ನಾನು ಹೇಳಿಲ್ಲ. ರಮೇಶ್ ಕುಮಾರ್ ಮತ್ತು ನನ್ನನ್ನು ಮೊದಲು ಒಗ್ಗೂಡಿಸಿ, ನಂತರ ಚುನಾವಣೆ ಮಾಡಿ ಎಂದಿದ್ದೇನೆ ಎಂದರು.

ಇತ್ತೀಚಿನ ಬೆಳವಣಿಗೆಗಳಿಂದ ನನಗೆ ನೋವಾಗಿದೆ. ಆದರೆ, ಪಕ್ಷ ನನಗೆ ಮುಖ್ಯ. ಇಲ್ಲಿ ನಾವಿಬ್ಬರೂ ಒಂದಾಗದಿದದ್ದರೆ ಮೂರನೇ ವ್ಯಕ್ತಿ ಅಭ್ಯರ್ಥಿಯಾಗಿ ಬಂದರೂ ಗೆಲುವು ಕಷ್ಟ ಎಂದರು.

Leave a Reply