ಕಾಂಗ್ರೇಸ್ ಯುವಪಡೆಗೆ ಕನಯ್ಯಲಾಲ್ ಮತ್ತು ಡಾ.ವಿನಯ್ ಲಾಲ್ ಕುರಿತು ಪಾಠಗಳು

2 years ago

ನಿನ್ನೆ ನಾನು ನಜ್ಮಾ ಎಂಬ ಹೆಣ್ಣು ಮಗಳು ಕಾಂಗ್ರೇಸ್ ಸೇರಿದ ಬಗ್ಗೆ ಪ್ರಸ್ತಾಪಿಸುತ್ತಾ, ಆಕೆಯ ಕುರಿತು ಒಂದೆರೆಡು ಒಳ್ಳೆಯ ಮಾತನಾಡಿದ್ದೆ. ಆದರೆ, ಇದು ಕಾಂಗ್ರೆಸ್ ಪಕ್ಷದಲ್ಲಿ ಯುವ ಸದಸ್ಯರಿಗೆ ಕೊಂಚ ಇರಿಸು ಮುರುಸಾಗಿದೆ. ಕಾಂಗ್ರೇಸ್ ನಾಯಕರನ್ನು ಹೆಗಲ ಮೇಲೆ ಪಲ್ಲಕ್ಕಿಯಲ್ಲಿ ಹೊತ್ತು ತಿರುಗುವುದನ್ನು ನಾಯಕತ್ವದ ಗುಣ ಎಂದು ಪರಿಗಣಿಸಲಾಗುವುದಿಲ್ಲ.

ಒಂದಿಷ್ಟು ವೈಚಾರಿಕ ಪ್ರಜ್ಞೆ ಮತ್ತು ಓದುವ ಅಭ್ಯಾಸ ಇಟ್ಟುಕೊಂಡು ನಾಯಕತ್ವದ ತಪ್ಪುಗಳನ್ನು ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಆತನನ್ನು ಸಮಾಜ ನಾಯಕ ಎಂದು ಗುರುತಿಸುತ್ತದೆ. ಇಂತಹ ಗುಣ ಎಷ್ಟು ಮಂದಿ ಯುವನಾಯಕರಲ್ಲಿ ಇದೆ ಎಂಬುದನ್ನು ಪ್ರಶ್ನಿಸಿಕೊಳ್ಳುವುದು ಉತ್ತಮ.

ನಜ್ಮಾ ಎಂಬ ಹೆಣ್ಣು ಮಗಳ ಕ್ರಿಯಾಶೀಲತೆಯ ಬಗ್ಗೆ ನಿಮಗೆ ಇದು ಗೊತ್ತಿರಲಿ. ಕಾಂಗ್ರೇಸ್ ಪಕ್ಷದಲ್ಲಿ ಕಾನೂನು ಘಟಕ ಎಂಬ ಅಂಗ ಸಂಸ್ಥೆ ಇದೆ. ಅದನ್ನು ನಾನು ಕತ್ತೆ ಕಾಯುವವರ ಘಟಕ ಎಂದು ಕರೆಯುತ್ತೇನೆ. ಏಕೆಂದರೆ, ಕರ್ನಾಟಕದಲ್ಲಿ ಓರ್ವ ಮುಸ್ಲಿಂ ನಾಯಕ ಅಥವಾ ಇತರೆ ನಾಯಕರು ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ, ಕ್ಷಣಾರ್ಧದಲ್ಲಿ ರಾಜ್ಯಾದ್ಯಂತ ನೂರಾರು ಎಫ್.ಐ.ಆರ್. ಗಳು ದಾಖಲಾಗುತ್ತವೆ. ಈಶ್ವರಪ್ಪ  ಸಂಸದ ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ನುಡಿದಾಗ ಕಾಂಗ್ರೇಸ್ ಪಕ್ಷದ ವತಿಯಿಂದ ಎಷ್ಟು ಎಫ್.ಐ.ಆರ್. ಗಳು ದಾಖಲಾಗಿವೆ? ಅಥವಾ ಸಿ.ಟಿ.ರವಿ. ಶೋಭಾ ಕರಂದ್ಲಾಜೆ, ಬಸವನಗೌಡ ಯತ್ನಾಳ್ ಇವರು ಆಡಿರುವ ಮಾತುಗಳಿಗೆ ಎಷ್ಟು ದೂರುಗಳು ದಾಖಲಾಗಿವೆ? ಎಂಬುದರ ಬಗ್ಗೆ ಒಮ್ಮೆ ಆತ್ಮಸಾಕ್ಷಿಯನ್ನು ಪರಿಕ್ಷಿಸಿಕೊಳ್ಳುವುದು ಒಳಿತು.

ಕಲ್ಲಡ್ಕ ಪ್ರಭಾಕರ ಭಟ್ಟ ಎಂಬ ಅಯೋಗ್ಯ ಕಳೆದ ಆರೇಳು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಬಂದು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಸಂದರ್ಭದಲ್ಲಿ ಆತನ ಮೇಲೆ ಮೊಕದ್ದಮೆ ದಾಖಲಿಸಿದ ಹೆಣ್ಣು ಮಗಳು ನಜ್ಮಾಳೇ ಹೊರತು, ಕಾಂಗ್ರೇಸ್ ಪಕ್ಷದ ಯುವ ನೇತಾರರಲ್ಲ.  ನಿರೀಕ್ಷಿಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ  ಕಲ್ಲಡ್ಕ ಪ್ರಭಾಕರ ಭಟ್ಟನು  ‘’ನನಗೆ 84 ವರ್ಷವಾಗಿದೆ  ಉಡುಪಿ ಜಿಲ್ಲೆಯಿಂದ ಇಲ್ಲಿಗೆ ಆಗಮಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ” ದ್ವೇಷದ ಭಾಷಣ ಮಾಡಲು ಇಲ್ಲಿಗೆ ಬರಲು ಸಾಧ್ಯವಾಗುತ್ತದೆ, ವಿಚಾರಣೆಗೆ ಬರಲು ಸಾಧ್ಯವಾಗುವುದಿಲ್ಲವೆ? ಎಂದು ನ್ಯಾಯಾಲಯ ಛಾಟಿ ಏಟು ಬೀಸಿತು. ನಂತರ ಜಾಮೀನು ನೀಡುವಾಗ, ಮತ್ತೇ ದ್ವೇಷ ಭಾಷಣ ಮಾಡಿದರೆ, ಜಾಮೀನು ರದ್ದಾಗುತ್ತದೆ. ನೀನು ಮಂಡ್ಯದ ಜೈಲಿನಲ್ಲಿ ಮುದ್ದೆ ಮುರಿಯಬೇಕಾಗುತ್ತದೆ ಎಂಬ ಎಚ್ಚರಿಕೆಯ ಜೊತೆಗೆ ಷರತ್ತನ್ನು ಸಹ ವಿಧಿಸಿತು. ಅಂದಿನಿಂದ ಕಲ್ಲಡ್ಕ ಪ್ರಭಾಕರ ಭಟ್ಟನ ನವರಂಧ್ರಗಳು ಬಂದ್ ಆಗಿವೆ.

ನಜ್ಮಾ ಆ ವೇಳೆಯಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಇರಲಿಲ್ಲ. ಆ ಹೆಣ್ಣುಮಗಳು ದೂರಿನಲ್ಲಿ ದಾಖಲಿಸಿದ ಅಂಶಗಳನ್ನು ನೋಡಿ ನಾನು ಬೆರಗಾಗಿದ್ದೆ. ಕಾನೂನು ತಜ್ಞರ ಸಹಾಯ ಪಡೆದು ಸಲ್ಲಿಸಿದ್ದ ಆ ದೂರಿನ ಅನ್ವಯ ಈಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಕಲ್ಲಡ್ಕ ಪ್ರಭಾಕರ ಭಟ್ಟ ಅಷ್ಟುಸುಲಭವಾಗಿ ಅದರಿಂದ  ಹೊರಬರಲು ಸಾಧ್ಯವಿಲ್ಲ. ಏಕೆಂದರೆ ಆತನ ಹೀನ ಇತಿಹಾಸದ ದಾಖಲೆಗಳು ಈಗ ನ್ಯಾಯಾಲಯದ ಮುಂದಿವೆ. ಇಂತಹ ಸಾಹಸಮಯ ಕೃತ್ಯಕ್ಕೆ ಕೈ ಹಾಕಿದ ನಜ್ಮಾಳ ಭವಿಷ್ಯದ ರಾಜಕೀಯ ಬದುಕು ಉಜ್ವಲವಾಗಿರಲಿ ಎಂದು ನಾನು ಹಾರೈಸಿದ್ದೀನಿ.

ಶತಮಾನದ ಕಸದ ತಿಪ್ಪೆಗುಂಡಿ ಎಂದು ಕರೆಯುವ ಕಾಂಗ್ರೇಸ್ ಪಕ್ಷವನ್ನು ವರ್ತಮಾನದಲ್ಲಿ ಬೆಂಬಲಿಸುವುದು ನನಗೆ ಮತ್ತು ಸಮಾನ ಮನಸ್ಕರಿಗೆ ಅನಿವಾರ್ಯವಾಗಿದೆಯೇ ಹೊರತು, ನಾವ್ಯಾರು ಭಜನಾ ಮಂಡಳಿಯ ಸದಸ್ಯರಲ್ಲ.

ಇದು ನಿಮಗೆ ನೆನಪಿರಲಿ. ನಿಮ್ಮಲ್ಲಿ ಪ್ರಶ್ನಿಸುವ ಗುಣವಿದ್ದರೆ, ಈ ವೇಳೆಗೆ ನಾಯಕರಾಗಿ ಬೆಳೆಯುತ್ತಿದ್ದಿರಿ.  ಜೆ.ಡಿ.ಎಸ್.ನಿಂದ ವಲಸೆ ಬಂದ ವರ್ಷದೊಳಗೆ ಮಧು ಬಂಗಾರಪ್ಪನಿಗೆ ಸಚಿವ ಸ್ಥಾನ ನೀಡುವುದು, ಅದೇ ಈಡಿಗ ಜನಾಂಗದಿಂದ ಬಂದು ಕಾಂಗ್ರೇಸ್ ನಲ್ಲಿ ನಲವತ್ತು ವರ್ಷ ಸೇವೆ ಸಲ್ಲಿಸಿದ ಬಿ.ಕೆ. ಹರಿಪ್ರಸಾದ್ ಅವರನ್ನು ಸಚಿವ ಸ್ಥಾನದಿಂದ ದೂರ ಇಟ್ಟಿರುವುದು ನಿಮಗೆ ತಪ್ಪು ಎಂದು ಅನಿಸಲಿಲ್ಲವೆ? ಇಂದು ಲೋಕಸಭೆಯ ಅಭ್ಯರ್ಥಿಗಳಲ್ಲಿ ಕುಟುಂಬ ರಾಜಕಾರಣ ವಿಜೃಂಭಿಸುತ್ತಿರುವುದು ನಿಮಗೆ ಕಾಣುತ್ತಿಲ್ಲವೆ? ಇಂತಹ ಸನ್ನೀವೇಶದಲ್ಲಿ ನಿಮಗೆ ಭವಿಷ್ಯ ಇದೆಯಾ? ನಿಮಗಾದ ದುರಂತ ರಾಜ್ಯದಲ್ಲಿ ನಜ್ಮಾ ಎಂಬ ಹೆಣ್ಣು ಮಗಳಿಗೆ ಮತ್ತು ಕನಯ್ಯ ಕುಮಾರ್ ಎಂಬ ಪ್ರತಿಭಾವಂತ ಯುವಕನಿಗೆ ರಾಷ್ಟ್ರಮಟ್ಟದಲ್ಲಿ ಆಗಬಾರದು ಎಂಬ ಕಳಕಳಿ ನನ್ನದು.

ನೀವು ಶತಮಾನದ ಇತಿಹಾಸ ಬೇಡ, ಕಳೆದ ಹತ್ತು ವರ್ಷದ ಕಾಂಗ್ರೇಸ್ ಇತಿಹಾಸವನ್ನು ಒಮ್ಮೆ ಗಮನಿಸಿ. ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ಮಟ್ಟದಲ್ಲಿ ಇಲ್ಲದೆ ಹೋಗಿದ್ದರೆ, ಈ ವೇಳಗೆ ಕಾಂಗ್ರೇಸ್ ಪಕ್ಷ ನೆಲಕಚ್ಚಿರುತ್ತಿತ್ತು. ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ತಮ್ಮ ಅನುಭವ ಮತ್ತು ವಿದ್ವತ್ ಮೂಲಕ ಅವರು ಮಂಡಿಸುವ ವಿಚಾರಗಳಿಗೆ ಸ್ವತಃ ಪ್ರಧಾನಿಯ ಬಳಿ ಉತ್ತರವಿಲ್ಲ. ಈ ಕಾರಣಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಪಾರ್ಲಿಮೆಂಟಿಗೆ ಬರದಂತೆ ತಡೆಯುವುದು ಬಿ.ಜೆ.ಪಿ.ಯ ಏಕೈಕ ಗುರಿಯಾಗಿತ್ತು. ಇಂದು ಪಾರ್ಲಿಮೆಂಟ್ ಸದನದಲ್ಲಿ ಖರ್ಗೆಯವರು, ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೇಸ್ ನ ಮಹುವಾ ಮೊಯಿತ್ರಾ ಈ ಮೂವರ ಮಾತುಗಳಿಗೆ ಮಾತ್ರ  ಆಡಳಿತ ಸರ್ಕಾರ ಬೆಚ್ಚಿ ಬೀಳುತ್ತಿದೆ.

ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿದ್ದ ಕನಯ್ಯ ಕುಮಾರ್ ಇತ್ತೀಚಿನ ದಿನಗಳಲ್ಲಿ ನಾನು ಕಂಡ ಅತ್ಯುತ್ತಮ ವಾಗ್ಮಿ. ಈ ಯುವಕ ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಸ್ವಂತ ರಾಜ್ಯವಾದ ಬಿಹಾರದ ಬೇಗು ಸರಾಯ್ ಕ್ಷೇತ್ರದಿಂದ ಕಮ್ಯೂನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಪರಾಜಿತನಾದನು. 2021 ರಲ್ಲಿ ಕಾಂಗ್ರೇಸ್ ಪಕ್ಷವನ್ನು ಸೇರಿದ ಕನಯ್ಯ ಕುಮಾರನನ್ನು ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಸಮರ್ಥವಾಗಿ ಬಳಸಿಕೊಂಡರು. ಇಂದು ದೇಶದ ಪ್ರಮುಖ ಮಾಧ್ಯಮಗಳಲ್ಲಿ ಮತ್ತು ಚರ್ಚೆಗಳಲ್ಲಿ ಪಕ್ಷದ ಪರವಾಗಿ ಪ್ರಬಲವಾಗಿ ವಿಚಾರ ಮಂಡಿಸುತ್ತಾ, ಮೋದಿ ಮತ್ತು ಬಿ.ಜೆ.ಪಿ.ಯ ಕರಾಳ ದಂಧೆಗಳನ್ನು ಎಳೆ ಎಳೆಯಾಗಿ ಬಿಡಿಸುವ ಕನಯ್ಯ ಕುಮಾರ್ ಗೆ ಈ ಬಾರಿ ಕಾಂಗ್ರೇಸ್ ನಿಂದ ಟಿಕೇಟ್ ನೀಡಿಲ್ಲ. ಇಂತಹ ಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷದಲ್ಲಿ  ನಿಮಗೆ ನಿಮ್ಮ ಭವಿಷ್ಯ ಉಜ್ವಲವಾಗಿದೆ ಎಂದು ಅನಿಸುತ್ತಿದೆಯಾ? ಕಾಂಗ್ರೇಸ್ ಪಾಲಿಗೆ ಯುವ ಪ್ರತಿಭೆ ಎಂದರೆ, ಬಳಸಿ ಬಿಸಾಡುವ ಟಿಸ್ಯೂ ಪೇಪರ್ ಎಂಬಂತಾಗಿದೆ. ಇದನ್ನು ಪಕ್ಷದ ನಾಯಕರು ತಿದ್ದಿಕೊಳ್ಳಬೇಕಿದೆ.

ಯಾವುದೇ ಪಕ್ಷದಲ್ಲಿ ನಾಯಕತ್ವ  ದೊರಕುವುದು ಭಜನೆ,  ಘೋಷಣೆ ಅಥವಾ ಜೈ ಕಾರಗಳ ಮೂಲಕ  ಅಲ್ಲ. ನೀವು ಬೌದ್ಧಿಕವಾಗಿ ಪ್ರಬುದ್ಧರಾಗ ಬೇಕು. ವಾಟ್ಸ್ ಅಪ್ ಯೂನಿರ್ವಸಿಟಿಯಿಂದ ಹೊರಬಂದು ಗಂಭೀರವಾಗಿ ಭಾರತದ  ಇತಿಹಾಸವನ್ನು ಓದುವ ಅಭ್ಯಾಸ ಮಾಡಬೇಕು. ಇತಿಹಾಸಕಾರರಾದ ಇರ್ಫಾನ್ ಹಬೀಬ್, ರೋಮಿಲಾ ಥಾಪೂರ್, ಹಾಗೂ ವಿನಯ್ ಲಾಲ್ ಅವರ ಕೃತಿಗಳನ್ನು ಓದಬೇಕು. ಮೂರು ವರ್ಷದ ಹಿಂದೆ 2021 ರಲ್ಲಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ‘’ಮಹಾತ್ಮ ಗಾಂಧಿ ಅವರ ಪ್ರೇರಣೆಯಿಂದ ಸಾವರ್ಕರ್ ಬ್ರಿಟೀಷರಿಗೆ ಕ್ಷಮಾರ್ಪಣಾ ಪತ್ರ ಬರೆದುಕೊಟ್ಟರು’’ ಎಂಬ ಮಾತನ್ನು ಹೇಳಿದ್ದರು.

ಇದರಿಂದ ಸಿಟ್ಟಿಗೆದ್ದ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಏಷ್ಯಾದ ಇತಿಹಾಸ ಪ್ರಾಧ್ಯಾಪಕರಾದ ಡಾ.ವಿನಯ್ ಲಾಲ್ ಹಿಂದು ಪತ್ರಿಕೆಯ ಫ್ರಂಟ್ ಲೈನ್  ಪಾಕ್ಷಿಕ ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿ ರಾಜನಾಥ್ ಸಿಂಗ್ ಅವರ ಬೌದ್ಧಿಕ ದಿವಾಳಿತನ್ನು ಎಲ್ಲರೆದುರು ಅನಾವರಣಗೊಳಿಸಿದ್ದರು. ಆ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳನ್ನು ನಾನು ಇನ್ನೂ ಮರೆತಿಲ್ಲ.

“ಭಾರತದ ಇತಿಹಾಸದಲ್ಲಿ ಶಸ್ತ್ರ ಸಜ್ಜಿತ ಹೋರಾಟ ಮತ್ತು ಪ್ರಜಾಸತ್ತಾತ್ಮಕ ಹೋರಾಟ ಎರಡೂ ಅಸ್ತಿತ್ವದಲ್ಲಿದ್ದವು. ಸಾವರ್ಕರ್, ಭಗತ್ ಸಿಂಗ್ ಮತ್ತು ಸಹಚರರು ಹಾಗೂ  ಸುಭಾಷ್ ಚಂದ್ರಬೋಸ್ ಇವರುಗಳು ಶಸ್ತ್ರ ಸಜ್ಜಿತ ಹೋರಾಟದಲ್ಲಿ ನಂಬಿಕೆ ಇಟ್ಟಿದ್ದರು. ಈ ಹೋರಾಟವು ನಮ್ಮನ್ನು ಅಂತಿಮವಾಗಿ ಹಿಂಸೆಯ ಮಾರ್ಗದತ್ತ ಕೊಂಡೊಯ್ಯುತ್ತದೆ. ಪ್ರಜಾಸತ್ತಾತ್ಮಕ ಹೋರಾಟವು ನಮ್ಮ ಎದುರಾಳಿಯ ಜೊತೆಗಿನ ಮಾತುಕತೆ ಮತ್ತು ಸಂವಾದದ ಮೂಲಕ ಅಹಿಂಸೆಯ ಮಾರ್ಗದಲ್ಲಿ ಜಯದತ್ತ ಕೊಂಡೊಯ್ಯುತ್ತದೆ. ಗಾಂಧೀಜಿ ಅವರಿಗೆ ಪ್ರಜಾಸತ್ತಾತ್ಮಕ ಹೋರಾಟದ ಬಗ್ಗೆ ಅಚಲವಾದ ನಂಬಿಕೆಯಿತ್ತು. ಇಂತಹ ಮಹಾತ್ಮನ  ಜೊತೆಗೆ  ಸಾವರ್ಕರ್ ಅವರನ್ನು ಹೋಲಿಸುವುದು ಮೂರ್ಖತನ’’ ಎಂದಿದ್ದರು.

ಪ್ರಿಯ ಯುವಕರೇ ನಿಮ್ಮಲ್ಲಿ ಬಹಳ ಮಂದಿ ಪದವೀಧರರು ಇದ್ದೀರಿ. ದಯವಿಟ್ಟು ವಿನಯ್ ಲಾಲ್ ಬರೆದಿರುವ ಹಿಂದುತ್ವದ ಕರಾಳ ಇತಿಹಾಸ ಕುರಿತ ಕೃತಿ ಹಾಗೂ ವಸಾಹತುಯುಗದ ಮತ್ತು ವಸಾಹತ್ತೋತ್ತರ ಭಾರತದ ಇತಿಹಾಸ  ಕುರಿತ ‘’ ಇತಿಹಾಸದ  ಇತಿಹಾಸ ‘’ ಕೃತಿಯನ್ನು ಓದಿರಿ. ಇವೆಲ್ಲವೂ ಇಂಗ್ಲೀಷ್ ಭಾಷೆಯಲ್ಲಿದ್ದು ಪೆಂಗ್ವಿನ್ ಮತ್ತು ಆಕ್ಸ್ ಫರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನದಿಂದ ಪ್ರಕಟವಾಗಿವೆ. ನೀವು ಮಾನಸಿಕವಾಗಿ ಪ್ರಭುದ್ಧರಾದಾಗ ಮಾತ್ರ ಜಗತ್ತನ್ನು ಎದುರಿಸಬಲ್ಲಿರಿ.

ಕೊನೆಯ ಮಾತು  ಆದಾಯ ತೆರಿಗೆ ಇಲಾಖೆಯು ಕಾಂಗ್ರೇಸ್ ಪಕ್ಷಕ್ಕೆ 1800 ಕೋಟಿ ಹಾಗೂ ಕಮ್ಯೂನಿಸ್ಟ್ ಪಕ್ಷಕ್ಕೆ 11 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ. ದೇಶದಲ್ಲಿ ಅತ್ಯಧಿಕ ದೇಣಿಗೆ ಪಡೆದಿರುವ ಬಿ.ಜೆ.ಪಿ. ಎಷ್ಟು ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸಿದೆ? ಎಂಬ ಮಾಹಿತಿಯನ್ನು ಮಾಹಿತಿ ಹಕ್ಕು ಯೋಜನೆ ಅಡಿಯಲ್ಲಿ ನಿಮಗೆ ಅಥವಾ ನಿಮ್ಮ ಕಾನೂನು ಘಟಕಕ್ಕೆ  ಆದಾಯ ತೆರಿಗೆ ಇಲಾಖೆಯಿಂದ ಹೊರಗೆ ತರಲು ಸಾಧ್ಯವೆ? ಹೆಗಲ ಮೇಲಿನ ಪಲ್ಲಕ್ಕಿಯನ್ನು ಕೆಳಗಿಳಿಸಿ, ರಸ್ತೆಯ ಬದಿಗಿಟ್ಟು ಈ ಕುರಿತಾಗಿ ಗಂಭೀರವಾಗಿ ಯೋಚಿಸಿರಿ.

-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply