ಕಾಂಗ್ರೆಸ್ ಪಕ್ಷದ ಭಂಡ ಸಮರ್ಥನೆ ಖಂಡನೀಯ

2 years ago

ಅಕಾಡೆಮಿ ಅಧ್ಯಕ್ಷರುಗಳ ಸಭೆಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಕರೆದು, ನೇಮಕಗೊಂಡ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು  ಪಕ್ಷದ ಹಿಂದೆ ಮುಂದೆ ಸುತ್ತುವ ಪಕ್ಷದ ಕಾರ್ಯಕರ್ತರೆಂದು ಹೀಯಾಳಿಸಿದ್ದ  ಕಾಂಗ್ರೆಸ್ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರ ನಡೆಯ ಬಗ್ಗೆ ನಾಡಿನ ಪ್ರಜ್ಞಾವಂತರು  ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ನಡೆ  ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ತಮ್ಮ ತಪ್ಪನ್ನು ತಿದ್ದುಕೊಳ್ಳುವ ಅವಕಾಶವನ್ನು ಕೊಟ್ಟಿತ್ತು. ಆದರೆ ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಶದಶ್ಟೇ ಭಂಡತನ ಮತ್ತು ಉದ್ಧಟತನವನ್ನು ತೋರಿಸಿ ತಾನು ಮಾಡಿದ್ದೆ ಸರಿ ಎಂದು ಸಮರ್ಥಿಸಿಕೊಂಡಿದೆ. ಮತ್ತು  ಬಿಜೆಪಿಯಂತೆಯೇ ಪ್ರಶ್ನೆ ಕೇಳಿದವರ ಮೇಲೆ ದೂರು ಹೊರಿಸಿದೆ. ಈ ಭಂಡತನ ಅತ್ಯಂತ ಖಂಡನೀಯ.

ಈ ಬಗ್ಗೆ ಕಾಂಗ್ರೆಸ್ಸಿನ ಅಧಿಕೃತ ಹೇಳಿಕೆಯು ಪ್ರಜಾತಾಂತ್ರಿಕ ಸಂಸ್ಕೃತಿಯನ್ನು ಉಳಿಸುವ ಕಾಳಜಿಯಿಂದ ನಾಡಿನ ಪ್ರಜ್ಞಾವಂತರು ಎತ್ತಿದ ಎಲ್ಲಾ ಪ್ರಶ್ನೆಗಳನ್ನು ತಿರಸ್ಕರಿಸಿದೆ. ಅಥವಾ ಈ ಪ್ರಶ್ನೆಗಳನ್ನು ಎತ್ತಿದವರು ಸ್ಥಾನ ಸಿಗದ ಅವಕಾಶವಾದಿಗಳು ಎಂದು ಆರೋಪಿಸಿದೆ. ಆದರೆ ಅದರ ಮುಸುಕಿನಲ್ಲಿ ಪ್ರಜ್ಞಾವಂತರು ಎತ್ತಿದ ಯಾವ ಪ್ರಶ್ನೆಗಳಿಗೂ ಉತ್ತರ ಕೊಡದೆ ನುಣುಚಿಕೊಂಡಿದೆ. ಇದು ಪಕ್ಕಾ ಬಿಜೆಪಿ ಸಂಸ್ಕೃತಿ.

ಹೀಗಾಗಿ ಕಾಂಗ್ರೆಸ್ ಪಕ್ಷ  ಈಗಲಾದರೂ ಈ ಪ್ರಶ್ನೆಗಳಿಗೆ ನೇರವಾದ ಉತ್ತರ ಕೊಡುವ ಜವಾಬ್ದಾರಿಯನ್ನು ಹೊಂದಿದೆ.

1. ಸ್ವಾಯತ್ತ ಸಂಸ್ಥೆಗಳಾದ ಅಕಾಡೆಮಿಗಳ ಸಭೆಯನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆದ ಔಚಿತ್ಯವೇನು?

2. ನಾಳೆ ಬಿಜೆಪಿ ಸರ್ಕಾರ ಇದೆ ರೀತಿಯಲ್ಲಿ ಅಕಾಡೆಮಿ ಅಧ್ಯಕ್ಷರುಗಳ ಸಭೆಯನ್ನು ಬಿಜೆಪಿ ಕಚೇರಿಯಲ್ಲೋ ಅಥವಾ ಕೇಶವ ಕೃಪದಲ್ಲೋ ನಡೆಸಿದರೆ ನೀವು ವಿರೋಧಿಸುವುದಿಲ್ಲವೇ?

3. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಈ ಸಭೆಯ ವೇದಿಕೆಯಲ್ಲಿ ಇದ್ದವರು ಯಾರು?

ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್,  ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ನಾಯಕಿ ರುಖ್ಸಾನ, ಕಾಂಗ್ರೆಸ್ ಮುಖಂಡರುಗಳಾದ  ನಲಪಾಡ್ ,  ನಾರಾಯಣಪ್ಪ  ಮತ್ತು ಹಾಲಪ್ಪ.

ಹೀಗಾಗಿ ಅದು ಕಾಂಗ್ರೆಸ್ ಕಚೇರಿಯಲ್ಲಿ, ಕಾಂಗ್ರೆಸ್ ಪದಾಧಿಕಾರಿಗಳು ನಡೆಸಿದ ಸಭೆ. ಇದು  ತಪ್ಪಲ್ಲವೇ?

4. ಪತ್ರಿಕಾ ವರದಿಯ ಪ್ರಕಾರ ಸಭೆಯಲ್ಲಿ ಕಾಂಗ್ರೆಸ್ಸಿನ ಭವಿಷ್ಯ ಹಾಗೂ ಅದರಲ್ಲಿ ನೇಮಕಗೊಂಡ ಅಕಾಡಮಿ ಸದಸ್ಯರುಗಳ ಹೊಣೆಗಾರಿಕೆಯ ಬಗ್ಗೆ ಚರ್ಚೆ ನಡೆದಿದೆ. ಸ್ವಾಯತ್ತ ಅಕಾಡೆಮಿಗಳ  ಸಭೆಯಲ್ಲಿ ಒಂದು ಪಕ್ಷದ ಭವಿಷ್ಯದ ಬಗ್ಗೆ ಚರ್ಚಿಸುವುದು ಸರಿಯೇ?

5. ಅಕಾಡೆಮಿಗಳು ಸ್ವಾಯತ್ತ ಸಂಸ್ಥೆಗಳಲ್ಲ ಎಂದು ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಅದರ ಬಗ್ಗೆ ಕಾಂಗ್ರೆಸ್ಸಿನ ಅಧಿಕೃತ ನಿಲುವು ಏನು?

ಈ ಮೇಲಿನ ಪ್ರಶ್ನೆಗಳು ಪ್ರಜಾತಂತ್ರದ ಬಗ್ಗೆ ಪ್ರಜ್ಞಾವಂತರ ಆತಂಕದಿಂದ ಹುಟ್ಟಿರುವ ಪ್ರಶ್ನೆಗಳು.

ಇಂಥಾ ಪ್ರಶ್ನೆಗಳನ್ನು ಬಿಜೆಪಿ ಹೇಗೆ ಅಸಾಂಸ್ಕೃತಿಕವಾಗಿ ಹಾಗೂ ಫ್ಯೂಡಲ್ ದುರಹಂಕಾರದಿಂದ  ಹತ್ತಿಕ್ಕುತ್ತಾ ಬಂದಿದೆ  ಎಂಬುದನ್ನು ನಾವೆಲ್ಲಾ ಅನುಭವಿಸಿದ್ದೇವೆ. ತಾನು ಅದಕ್ಕಿಂತ ಭಿನ್ನ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಕೂಡ ಫ್ಯೂಡಲ್ ಧೋರಣೆಯನ್ನು ಅನುಸರಿಸಿದೆ.

ಲಾಬಿ, ವಶೀಲಿ ಮಾಡುವ ಮೂಲಕ ಅಧಿಕಾರ, ಪದವಿ, ಪ್ರಶಸ್ತಿ ಪಡೆಯುವ ಒಂದು ಅಸಂಸ್ಕೃತಿ ನಾಡಿನಲ್ಲಿರುವುದು ಸುಳ್ಳೆನಲ್ಲ.

ಪ್ರಜ್ಞಾವಂತರು ಎತ್ತಿದ ಆಕ್ಷೇಪಣೆಗಳಲ್ಲಿ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಹೆಚ್ಚಾಗುತ್ತಿರುವ ಈ ಧೋರಣೆಯು ಹೇಗೆ ನಾಡಿನ ಪ್ರಜಾತಾಂತ್ರಿಕ ಸಂಸ್ಕೃತಿಗೆ ಹಾಗೂ ನೈತಿಕತೆಗೆ ಸವಾಲಾಗುತ್ತಿದೆ ಎಂಬ ಅಂಶವೂ ಇದ್ದೆ ಇದೆ.

ಸಾಂಸ್ಕೃತಿಕ ಲೋಕದಲ್ಲಿ ಇರುವ ಇಂಥಾ ಧೋರಣೆಯೇ ಪ್ರಭುತ್ವವನ್ನು ಪ್ರಜಾತಾಂತ್ರಿಕಗೊಳಿಸದೆ ಫ್ಯೂಡಲ್ ಗೊಳಿಸುತ್ತಿದೆ ಎಂಬುದು ಪ್ರಜ್ಞಾವಂತರ ಆಕ್ಷೇಪಣೆ ಮತ್ತು ಆತಂಕದ ಭಾಗವಾಗಿದೆ.

ಆದರೆ  ಒಂದು ಪ್ರಜಾತಾಂತ್ರಿಕ ಸರ್ಕಾರ ಇಂಥ ವಶೀಲಿ ಬಾಜಿ ಸಂಸ್ಕೃತಿಯನ್ನು ಪುರಸ್ಕರಿಸದ ವ್ಯವಸ್ಥೆಯನ್ನು ಹುಟ್ಟುಹಾಕುವುದು ಹೇಗೆ ಎಂದು  ಚಿಂತಿಸಬೇಕೇ  ವಿನಾ ಅದನ್ನು  ತನ್ನ ಅಪ್ರಜಾತಾಂತ್ರಿಕ ನಡೆಗಳನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳಬಾರದು.

ಇದೂ ಕೂಡ ಮತ್ತೆ ಅಸಭ್ಯ ಬಿಜೆಪಿ ಸಂಸ್ಕೃತಿಯ ಭಾಗ. 

ಈ ಕಾರಣದಿಂದಲೂ ನೇಮಿತಗೊಂಡ ಅಕಾಡೆಮಿ ಅಧ್ಯಕ್ಷ ಸದಸ್ಯರುಗಳು ಕಾಂಗ್ರೆಸ್ ಸರ್ಕಾರದ ಈ ಅಪ್ರಜಾತಾಂತ್ರಿಕ ನಡೆಗಳ ಬಗ್ಗೆ ತಮ್ಮ ಬಹಿರಂಗ ಖಂಡನೆಯನ್ನು ವ್ಯಕ್ತಪಡಿಸಿ ತಮ್ಮ ವ್ಯಕ್ತಿಗತ ಹಾಗೂ ಸಾಂಸ್ಥಿಕ ಸ್ವಾಯತ್ತತೆಯನ್ನು ತೋರಿಸುವ ತುರ್ತು  ಉಂಟಾಗಿದೆ.

ಹೀಗಾಗಿ ಒಂದು ಪ್ರಜಾತಾಂತ್ರಿಕ ಕಾಳಜಿಯಿಂದ ವ್ಯಕ್ತವಾದ ಆಕ್ಷೇಪಣೆಗಳನ್ನು ಗಮನಿಸಿ ತಪ್ಪು ತಿದ್ದುಕೊಳ್ಳದೆ ಅದನ್ನು ಭಂಡವಾಗಿ ಸಮರ್ಥಿಸಿಕೊಂಡಿರುವ ಕಾಂಗ್ರೆಸ್ಸಿನ ಧೋರಣೆಯನ್ನು.

ಅದರ ಒಳಗಿರಬಹುದಾದ ಮತ್ತು ಹೊರಗಿರುವ ಹಾಗೂ ನಾಡಿನ ಎಲ್ಲಾ ಪ್ರಜಾತಂತ್ರವಾದಿಗಳು ಒಕ್ಕೊರಲಿಂದ ಖಂಡಿಸಬೇಕಿದೆ.

ಕಾಂಗ್ರೆಸ್ಸಿನ ಮುಸುಕಿನಲ್ಲಿ ಬಿಜೆಪಿ ಸಂಸ್ಕೃತಿ ಮತ್ತು ಧೋರಣೆ ಬೆಳೆಯುವುದನ್ನು ತಡೆಗಟ್ಟಬೇಕಿದೆ.

ಕಾಂಗ್ರೆಸ್ ಪಕ್ಷ ಮೇಲಿನ ಪ್ರಶ್ನೆಗಳಿಗೆ ಈಗಲಾದರೂ ನೇರವಾಗಿ ಉತ್ತರಿಸಬೇಕಿದೆ.

ಅಲ್ಲವೇ?

– ಶಿವಸುಂದರ್, ಸಾಮಾಜಿಕ ಹೋರಾಟಗಾರರು

Leave a Reply