ವಿಬಿಜಿ ರಾಮ್ ಜಿ  ಯೋಜನೆ ಬಗ್ಗೆ ಕಾಂಗ್ರೆಸ್ ಸುಳ್ಳಿನ ಸಂಕಥನ ಸೃಷ್ಟಿ ಮಾಡುತ್ತಿದೆ: ಎಚ್ ಡಿ ಕುಮಾರಸ್ವಾಮಿ

3 months ago

ಬೆಂಗಳೂರು: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯಿಂದ ಯೋಜಿತ ರೂಪದಲ್ಲಿ ಜಾರಿಗೊಳಿಸಿರುವ ವಿಬಿಜಿ ರಾಮ್ ಜಿ  ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳಿನ ಸಂಕಥನ ಸೃಷ್ಟಿ ಮಾಡುತ್ತಿದೆ ಎಂದು ಕೇಂದ್ರ ಕೈಗಾರಿಕೆ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಆ ಸುಳ್ಳನ್ನು ಎದುರಿಸಲು ನಾವು ದಾಖಲೆ ಸಮೇತ ಬಹಿರಂಗ ಚರ್ಚೆಗೆ ತಯಾರಿದ್ದೇವೆ ಎಂದು ಸವಾಲೆಸೆದರು.

ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಂತೆ ಜಾರಿ ಗೊಂಡಿರುವ ವಿಬಿಜಿ ರಾಮ್ ಜಿಯೋಜನೆ ಬಗ್ಗೆ ಕಾಂಗ್ರೆಸ್ ಹರಡುತ್ತಿರುವ ಸುಳ್ಳುಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ಸುಳ್ಳುಗಳನ್ನು ಜನರು ನಂಬುವ ಕಾಲ ಹೋಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದೆ. ಯಾವುದಾದರೂ ಪ್ರಮುಖ ಯೋಜನೆಗಳಿಗೆ ಮಹಾತ್ಮ ಗಾಂಧಿ ಅವರ ಹೆಸರನ್ನಿಟ್ಟಿದ್ದಾರೆಯೇ? ಎಲ್ಲಾ ಯೋಜನೆಗಳಿಗೆ ನೆಹರು ಕುಟುಂಬದ ಸದಸ್ಯರ ಹೆಸರುಗಳನ್ನು ಇಟ್ಟು ಗಾಂಧೀಜಿಗೆ ದ್ರೋಹ ಬಗೆದಿದ್ದಾರೆ. ಇವರಿಗೆ ಗಾಂಧೀಜಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.

ಈಗ ಹೊರಗೆ ಅಪಪ್ರಚಾರ ಮಾಡುತ್ತಿರುವುದು ಸಾಲದು ಎಂಬಂತೆ ವಿಧಾನಸಭೆ ಅಧಿವೇಶನವನ್ನು ಬೇರೆ ಕರೆಯುತ್ತಿದ್ದಾರೆ. ಪಾದಯಾತ್ರೆಯನ್ನು ಕೂಡ ನಡೆಸುತ್ತಾರಂತೆ! ಯಾವ ಪುರುಷಾರ್ಥಕ್ಕೆ ಇದೆಲ್ಲವನ್ನೂ ಮಾಡುತ್ತಾರೆ? ನರೇಗಾ ಹೆಸರಿನಲ್ಲಿ ನಕಲಿ ಬಿಲ್’ಗಳನ್ನು ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ? ಕಾಂಗ್ರೆಸ್’ನವರಿಂದ ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ಸಿಕ್ಕುತ್ತದೆಯೇ? ಕಾರ್ಮಿಕರಿಗೆ ನ್ಯಾಯ ಮಾಡದೆ ಇವರು ಏನು ಮಾಡುತ್ತಿದ್ದರು? ನಕಲಿ ಬಿಲ್ಲುಗಳನ್ನು ತಡೆಯಲು, ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಲು ಇವರು ವಿಫಲವಾಗಿದ್ದು ಯಾಕೆ? ಎಂದು  ಪ್ರಶ್ನಿಸಿದರು.

ಮನರೇಗಾ ಯೋಜನೆ ಸ್ಥಗಿತವಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಯೋಜನೆಯಲ್ಲಿ ನಡೆದಿದ್ದ ಅಕ್ರಮಗಳನ್ನು ನರೇಂದ್ರ ಮೋದಿ ಅವರ ಸರಕಾರ ಸರಿಪಡಿಸಿ ಅದರಲ್ಲಿ ಅನೇಕ ಮಹತ್ವದ ಸುಧಾರಣೆಗಳನ್ನು ತಂದಿದೆ. ಲೋಪಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡುವುದು ತಪ್ಪು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಸರಿಯಲ್ಲ. ಈ ಯೋಜನೆಯಿಂದ ಗ್ರಾಮ ಪಂಚಾಯ್ತಿಗಳ ಅಧಿಕಾರ ಅಥವಾ ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದರು.

ಈ ಯೋಜನೆಗೆ ಪೂರ್ಣ ಅನುದಾನ ನೀಡುತಿರುವುದು ಕೇಂದ್ರ ಸರ್ಕಾರ. ಕೇಂದ್ರ ನೀಡಿರುವ ಅನುದಾನವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಅದರಲ್ಲಿ ಪಾರದರ್ಶಕತೆ ಇಲ್ಲ. ಈ ಯೋಜನೆ ಹೆಸರಲ್ಲಿ ಕಳ್ಳಬಿಲ್ಲುಗಳನ್ನು ಮಾಡಿಕೊಂಡು ಲೂಟಿ ಮಾಡಲಾಗಿದೆ. ಇದು ಶುರು ಆದಾಗಿನಿಂದ ಆಗಿರುವ ಲೋಪಗಳನ್ನು ಸರಿಪಡಿಸಿ ಹೊಸ ಯೋಜನೆ ರೂಪಿಸಲಾಗಿದೆ. ಮನರೇಗಾದಲ್ಲಿ ಇದ್ದ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಶಕ್ತಿ, ಅಧಿಕಾರ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳೇ ತಮಗೆ ಬೇಕಾದ ಯೋಜನೆಗಳನ್ನು ರೂಪಿಸಲಿವೆ ಹಾಗೂ ಗ್ರಾಮ ಸಭೆಗಳು ಕೆಲಸದ ಆದ್ಯತೆ ಗುರುತಿಸಿ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸುವ ಮೂಲಕ ಪಾರದರ್ಶಕತೆ ತರಲಾಗಿದೆ ಎಂದರು.

ರಾಮರಾಜ್ಯ ಸ್ಥಾಪನೆ ಮಾಡಲು ನಾವು ರಾಮನ ಹೆಸರು ಬಳಸಿದ್ದೇವೆ. ರಾಜ್ಯ ಸರ್ಕಾರವೂ ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ಯೋಜನೆಗೆ 40% ಅನುದಾನ ಕೊಡಲೇಬೇಕು. ಸಿದ್ದರಾಮಯ್ಯ ರಾಜ್ಯದಲ್ಲಿ ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

Leave a Reply