ಬೆಂಗಳೂರು: ಬಿಜೆಪಿ ಈಗ ಒಡೆದ ಮನೆಯಾಗಿದೆ. ಅದರಲ್ಲೂ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕವಂತೂ ಪಕ್ಷದ ನಾಯಕರ ವಿರುದ್ಧವೇ ಕಾರ್ಯಕರ್ತರು ತಿರುಗಿಬಿದ್ದರು, ಬಿಜೆಪಿ ಬಾಡಿಗೆ ಭಾಷಣಕಾರರೇ ಪಕ್ಷದ ವಿರುದ್ಧ ಮಾತನಾಡಿದರು ಎಂದು ಕೆಪಿಸಿಸಿ ಹೇಳಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಡೀರ್ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ, ಬಿಜೆಪಿ ಯುವ ಮೋರ್ಚಾದಲ್ಲಿ ರಾಜೀನಾಮೆ ಪರ್ವ ನಡೆಯಿತು, ಬಿಜೆಪಿ ಕಾರ್ಯಕರ್ತರೇ ತಮ್ಮ ಪಕ್ಷದ ವಿರುದ್ಧ ಪ್ರತಿಭಟನೆ ಮಾಡಿದರು. ಇಷ್ಟೆಲ್ಲಾ ಆದರೂ ಡ್ಯಾಮೇಜ್ ಕಂಟ್ರೋಲ್ ಮಾಡುವ ಬದಲಿಗೆ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ನಾಯಕ, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಮೇಶ್ ಜಿಗಜಿಣಗಿ ಅವರು ಕಾರ್ಯಕರ್ತರ ಬಗ್ಗೆ ಉಡಾಫೆಯಿಂದ ಮಾತನಾಡಿದರು. ಬಿಜೆಪಿ ಪಕ್ಷ, ಬೊಮ್ಮಾಯಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದರು ಎಂದಿದೆ.
ಇದೆಲ್ಲ ಕಾರಣಕ್ಕೆ ಮುಖ್ಯಮಂತ್ರಿಗಳಿಗೂ ಸಮರ್ಪಕ ಮಾಹಿತಿಯೇ ಇಲ್ಲದೆ ಬಿಜೆಪಿ ಕಾರ್ಯಕರ್ತರ ಆಕ್ರೋಶ ತಣಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಿಡೀರ್ ಭೇಟಿ ನೀಡಿದ್ದಾರೆ. ಇದು ಬಿಜೆಪಿಯಲ್ಲಿ ಆತಂಕೋತ್ಸವ, ಅಂತ್ಯೋತ್ಸವ, ಆಕ್ರೋಶೋತ್ಸವಗಳು ನಡೆಯುತ್ತಿರುವುದಕ್ಕೆ ನಿದರ್ಶನವಾಗಿದೆ! ಭೇಟಿಯ ಕಾರಣಕ್ಕೆ ಮುಖ್ಯಮಂತ್ರಿಗಳು ಸಪ್ಪೆ ಮುಖ ಹಾಕಿರುವುದರ ಹಿಂದಿನ ರಹಸ್ಯವೇನು ಎಂದು ಪ್ರಶ್ನಿಸಿದೆ.




