ಮೈಸೂರು ಅನಂತಸ್ವಾಮಿ ರಾಗ‌ ಸಂಯೋಜಿಸಿದ ಧಾಟಿಯ ಜಯ ಭಾರತ ಜನನಿಯ ತನುಜಾತೆಗೆ ಮಾನ್ಯತೆ 

3 months ago

ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ಮೈಸೂರು ಅನಂತಸ್ವಾಮಿ ಅವರು ರಾಗ‌ ಸಂಯೋಜಿಸಿದ ಧಾಟಿಯಲ್ಲಿ  ನಾಡಗೀತೆ ಹಾಡಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ  ಆದೇಶವನ್ನು ಮಾನ್ಯ ಮಾಡಿದೆ. ರಾಜ್ಯ ಸರ್ಕಾರದ
ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ಅದರ ಪೂ‌ರ್ಣಪಾಠ ಬಳಸಬೇಕು ಹಾಗೂ ಆಲಾಪವಿಲ್ಲದೇ, ಪುನರಾವರ್ತನೆ ಇಲ್ಲದೆ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಮಾನ್ಯ ಮಾಡಿದೆ
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಹೈಕೋರ್ಟಿಗೆ ರಿಟ್ ಸಲ್ಲಿಸಿದ್ದರು. ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರದ ಆದೇಶ ಎತ್ತಿ ಹಿಡಿದಿತ್ತು.

ಈ ತೀರ್ಪು ಪ್ರಶ್ನೆಸಿ ಕಿಕ್ಕೇರಿ ಕೃಷ್ಣಮೂರ್ತಿಯವರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕ್ರಮವನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು, ಎರಡು ಚರಣಗಳಿಗೆ ಮಾತ್ರ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿದ್ದಾರೆ. ಇಡೀ ನಾಡಗೀತೆಗೆ ಸಂಯೋಜನೆ ಮಾಡಿಲ್ಲ. ಈ ಸಂಬಂಧ 2013 & 2014ರಲ್ಲಿ ಸರ್ಕಾರವು ಎರಡು ಸಮಿತಿ ರಚಿಸಿತ್ತು.ಈ ಸಮಿತಿಗಳ ಯಾವುದೇ ಸಲಹೆಯನ್ನು ಪರಿಗಣಿಸಿಲ್ಲ. ಆದರೆ ಅಂತಿಮ ಆದೇಶದಲ್ಲಿ 18 ಸದಸ್ಯರ ಸಮಿತಿಯ ಅಭಿಪ್ರಾಯ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶಿಸಿದೆ.ಆದರೆ ವಾಸ್ತವವಾಗಿ ಸಾರ್ವಜನಿಕರು ಅಥವಾ ಸಂಬಂಧಿತರ ಆಕ್ಷೇಪಣೆಯನ್ನು ಪರಿಗಣಿಸಲಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ರಾಷ್ಟ್ರಗೀತೆಯನ್ನು ಇಂಥದ್ದೇ ರಾಗದಲ್ಲಿ ಹಾಡಬೇಕು ಎಂಬ ನಿಯಮವಿಲ್ಲ. ಹೀಗಾಗಿ, ನಾಡಗೀತೆಯನ್ನು ಇಂಥದ್ದೇ ರಾಗದಲ್ಲಿ ಹಾಡಬೇಕು ಎಂದು ನಿರ್ದೇಶಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಇಡೀ ನಾಡಗೀತೆಗೆ ಸಂಯೋಜಿಸುವ ರಾಗ ಸಂಯೋಜನೆಯನ್ನು ಪಾಲಿಸಬೇಕು ಎಂದು ಹಿಂದಿನ ಎರಡು ಸಮಿತಿಗಳು ಹೇಳಿವೆ ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ನ್ಯಾಯಪೀಠ, ಶಾಸನಬದ್ಧವಾಗಿ ಇಂಥದ್ದೇ ರಾಗದಲ್ಲಿ ಹಾಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಯಾವುದೇ ವಿವೇಚನಾಧಿಕಾರ ದುರ್ಬಳಕೆಯಾಗಿಲ್ಲ ಎಂದು ತಿಳಿಸಿತು.

ಅಲ್ಲದೆ, ನೀವಿ ಇಚ್ಛಿಸಿದಂತೆ ಹಾಡದಂತೆ ನಿಮ್ಮನ್ನು ತಡೆಯುತ್ತಿರುವವರು ಯಾರು? ನಿಮ್ಮ ಇಚ್ಛೆಯಂತೆ ಹಾಡಬಾರದು ಎಂದು ರಾಜ್ಯ ಸರ್ಕಾರ ಹೇಳಿಲ್ಲ. ಸಂವಿಧಾನಬದ್ಧವಾಗಿ 19(1)(ಎ)ನೇ ವಿಧಿಯಡಿ ನಿಮಗೆ ಹಕ್ಕಿದೆ. ಇದನ್ನು ಮಾಡದಂತೆ ನಿಮಗೆ ನಿಷೇಧ ವಿಧಿಸಿರುವ ಸರ್ಕಾರದ ಕ್ರಮ ತೋರಿಸಬೇಕು. ನಿರ್ದಿಷ್ಟ ರಾಗದಲ್ಲಿ ಹಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ, ಅದು ನಿಮ್ಮ ಸಂವಿಧಾನಬದ್ಧ ಹಕ್ಕಿಗೆ ಚ್ಯುತಿ ಉಂಟು ಮಾಡಿಲ್ಲ. ಆಕ್ಷೇಪಣೆ ಪರಿಗಣಿಸಿದೆಯೇ ಇಲ್ಲವೇ ಎಂಬುದರ ಹೊರತಾಗಿ ಅದು ನಿಮ್ಮ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡಿದೆಯೇ ಎಂದು ಪ್ರಶ್ನಿಸಿತು. ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.

Leave a Reply