ಆತ್ಮೀಯ ಗುರುಗಳಾದ ಡಾ.ಬೇಲೂರು ರಘುನಂದನ್ ಅವರು ಸಿಕ್ಕಾಗಲೆಲ್ಲ ಹೇಳುತ್ತಿದ್ದರು ವೆಂಕಟೇಶ್ ಒಮ್ಮೆ #ಚಿಟ್ಟೆ ನಾಟಕ ನೋಡಿ ಅಂತ. ಬೆಂಗಳೂರಿನಲ್ಲಿ #ಚಿಟ್ಟೆ ನಾಟಕ ಬಹಳಷ್ಟು ಪ್ರದರ್ಶನ ಕಂಡಿದ್ದರೂ ಸಹ ಹೋಗಲು ಸಮಯ ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಚಿಟ್ಟೆ ನಾಟಕದ ಪ್ರದರ್ಶನದ ವಿಚಾರ ತಿಳಿದು ಬಿಡುವುಮಾಡಿಕೊಂಡು ಹೋಗಿದ್ದೆ.
ನಾಟಕವೋ ಶುರುವಾಯ್ತು ಆದರೆ, ಒಂದು ಗಂಟೆ ಐದು ನಿಮಿಷಗಳ ಏಕವ್ಯಕ್ತಿ ಪ್ರದರ್ಶನ ಸಮಯ ಕಳೆದದ್ದೇ ತಿಳಿಯಲಿಲ್ಲ. ಒಬ್ಬ ಸಣ್ಣ ವಯಸ್ಸಿನ ಬಾಲಕ ಒಂದು ಗಂಟೆಗಳ ಕಾಲ ಇಡೀ ಪ್ರೇಕ್ಷಕವೃಂದವನ್ನು ಅಲುಗಾಡದಂತೆ ಹಿಡಿದುಕೊಂಡುಬಿಡುತ್ತಾನೆ. ಇತ್ತೀಚಿನ ದಿನಗಳ ಮಕ್ಕಳಿಗೆ ಬಹುಷಃ ಚಿಟ್ಟೆ ನಾಟಕದ ಸನ್ನಿವೇಶಗಳ ಅನುಭವ ಕೊಂಚ ಕಡಿಮೆ ಎನ್ನಿಸಬಹುದು. ಆದರೆ ಒಂದು ಕಾಲಘಟ್ಟದ ಅದೆಷ್ಟೋ ಮಕ್ಕಳ ಜೀವನಗಾಥೆಯೊಂದನ್ನು ಬಹಳ ಅದ್ಭುತವಾಗಿ ಪ್ರಸ್ತುತಪಡಿಸುತ್ತಾ ಹೋಗುವ ಆ ಪುಟ್ಟ ಬಾಲಕ ನಮ್ಮ ಬಾಲ್ಯಗಳನ್ನು ಕಣ್ಮುಂದೆ ತಂದಿರಿಸಿಬಿಡುತ್ತಾನೆ.
ಪ್ರತೀ ಮಗುವಿನ ಭಾವನೆಗಳ ಜೊತೆ ಶುರುವಾಗುವ ಚಿಟ್ಟೆ ನಾಟಕ ಒಬ್ಬ ನೊಂದ ಬಾಲಕ ಮತ್ತು ಒಂದು ಕೊಳದ ಅಲೆಗಳನ್ನೇ, ಸಂಚಲನವನ್ನೇ ತನ್ನೊಟ್ಟಿಗಿನ ಸಂಭಾಷಣೆ ಎನ್ನುವಂತೆ ಮಾತನಾಡುತ್ತಾ ಬಣ್ಣಬಣ್ಣದ ಚಿಟ್ಟೆಗಳ ಜೊತೆಗಿನ ಮಾತುಕತೆಯಲ್ಲಿ ತನ್ನನ್ನು ತಾನು ಕಂಡುಕೊಳ್ಳುತ್ತಾ ತನ್ನ ಜೀವನದ ಸನ್ನಿವೇಶಗಳನ್ನು ಅಪ್ಪನ ಕ್ರೌರ್ಯಗಳನ್ನು, ಅಮ್ಮನ ಮಮತೆಯನ್ನು, ತಂಗಿಯ ಮುಗ್ಧತೆಯನ್ನು, ಗುರುಗಳ ಬೆಂಬಲವನ್ನು, ತನ್ನ ಕಲೆಯನ್ನು, ತನ್ನ ನೋವುಗಳನ್ನು ಹಂಚಿಕೊಳ್ಳುವ ಪ್ರತೀ ಸನ್ನಿವೇಶಗಳೂ ಸಹ ಪ್ರೇಕ್ಷಕನನ್ನು ಮಂತ್ರಮುಗ್ದನನ್ನಾಗಿಸಿಬಿಡುತ್ತವೆ.
ಚಿಟ್ಟೆ ನಾಟಕದ ಪ್ರತೀ ಸನ್ನಿವೇಶಗಳೂ ಸಹ ಪ್ರತೀ ಮನುಷ್ಯನ ನಿತ್ಯ ಜೀವನದ ಕಥೆ, ವ್ಯಥೆಯನ್ನೇ ಒಳಗೊಂಡಿದೆ. ಮಧ್ಯದಲ್ಲೊಂದಷ್ಟು ಸಂತಸದ ಸನ್ನಿವೇಶಗಳು ಚಿಟ್ಟೆಗೆ ಬಹಳ ಮೆರುಗು ನೀಡುತ್ತವೆ. ಒಂದಷ್ಟು ಸನ್ನಿವೇಶಗಳಲ್ಲಿ ನಾ ಭಾವುಕನಾಗಿ ಕಣ್ಣು ಒದ್ದೆಯಾದದ್ದು ಉಂಟು.
ಇನ್ನು ಚಿಟ್ಟೆ ನಾಟಕದ ನಾಯಕನ ಪಾತ್ರದ ಬಗ್ಗೆ ಒಂದಷ್ಟು ಹೇಳಲೇಬೇಕು. ಬೇಲೂರು ರಘನಂದನ್ ರವರ ಹಿರಿಯ ಮಗನಾದ ಗೋಕುಲ್ ಸಹೃದಯ ಅದೆಷ್ಟು ಮೃದು ಸ್ವಭಾವದ ಆ ಹುಡುಗ ಒಂದು ಗಂಟೆಗಳ ನಾಟಕವನ್ನು ಎಷ್ಟು ಸರಾಗವಾಗಿ ಪ್ರಸ್ತುತಪಡಿಸಿದ್ದನೆಂದರೆ ತಬ್ಬಿ ಮುತ್ತಿಡಬೇಕು ಎನಿಸಿದ್ದು ಸುಳ್ಳಲ್ಲ. ಇಡೀ ನಾಟಕದ ಜೀವಾಳ ಗೋಕುಲ್ ಸಹೃದಯ. ಬಹುಷಃ ಇಷ್ಟು ಸಣ್ಣ ವಯಸ್ಸಿಗೇ ನವರಸಗಳನ್ನೂ ಸಹ ಅರೆದು ಕುಡಿದುಬಿಟ್ಟಿದ್ದಾನೆ ಆ ಬಾಲಕ. ಇಡೀ ನಾಟಕದ ತುಂಬ ಸಂಪೂರ್ಣ ನವರಸಗಳ ಸನ್ನಿವೇಶಗಳಿಗೆ ಜೀವ ನೀಡಿದ್ದಾನೆ. ಇನ್ನು ನಾಟಕದ ಸೃಷ್ಠಿಕರ್ತರು ಖ್ಯಾತ ಕವಿಗಳು, ಪ್ರಾಧ್ಯಾಪಕರು ನಾಟಕ ರಚನೆಕಾರರಾದ ಶ್ರೀಯುತ ಬೇಲೂರು ರಘುನಂದನ್ ಅವರ ಪ್ರತೀ ನಾಟಕಗಳೂ ಸಹ ನನಗೆ ಇಷ್ಟವೇ. ಅವರ ನಾಟಕಗಳನ್ನು ವಿಮರ್ಶಿಸುವಷ್ಟು ಹಿರಿಯನಲ್ಲದಿದ್ದರೂ ಅವರ ಅಭಿಮಾನಿಯಾಗಿ ಈ ಬರಹವನ್ನು ಬರೆದಿದ್ದೇನೆ. ಇನ್ನು ಕೃಷ್ಣಮೂರ್ತಿ ಕವತ್ತಾರ್ ಅವರ ನಿರ್ದೇಶನದ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ರಂಗಭೂಮಿಯ ಸದ್ಯದ ಸ್ಟಾರ್ ಕವತ್ತಾರ್ ರವರು.
ಒಟ್ಟಿನಲ್ಲಿ ಚಿಟ್ಟೆ ನಾಟಕವು ಒಂದು ಅದ್ಭುತ ಸೃಷ್ಠಿ. ಪ್ರತಿಯೊಬ್ಬರೂ ನೋಡಬೇಕಾದ ನಾಟಕ. ಇಂದು ಸಂಜೆ ೬:೩೦ಕ್ಕೆ ಶಿವಮೊಗ್ಗದ ರಂಗಾಯಣದಲ್ಲಿ ಚಿಟ್ಟೆ ನಾಟಕದ ಪ್ರದರ್ಶನವಿದೆ ಸಾಧ್ಯವಾದವರು ಶಿವಮೊಗ್ಗದ ಸ್ನೇಹಿತರು ಹೋಗಿಬನ್ನಿ. ನಿಮಗೆ ಒಂದು ಅದ್ಭುತ ಅನುಭವವಾಗುವುದರಲ್ಲಿ ಎರಡು ಮಾತಿಲ್ಲ. ಅರಳುತ್ತಿರುವ ಪ್ರತಿಭೆ ಗೋಕುಲ್ ಸಹೃದಯನಿಗೆ ಬೆಂಬಲಿಸಿ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸುವಂತೆ ಆಶೀರ್ವದಿಸಿ.
-ವೆಂಕಟೇಶ್ ಆರ್ ಶೆಟ್ಟಿ




