ಅಭಿವೃದ್ದಿಯಾಗಬೇಕಾದರೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು: ಭಾಗ್ಯವತಿ ಅಮರೇಶ್

2 years ago

ಬೆಂಗಳೂರು: ನಗರದ ಹೊಂಬೇಗೌಡನಗರ ವಾರ್ಡ್ ನಲ್ಲಿ ಸ್ಲಂ ಸಂಸ್ಥೆ ಸೇವಾ ಸಂಘಟನೆ ವತಿಯಿಂದ ಸ್ಲಂ ಪ್ರದೇಶದಲ್ಲಿ ವಾಸಿಸುತ್ತಿರುವ ಸರ್ಕಾರಿ ಶಾಲೆಯ ನೂರಾರು ಮಕ್ಕಳಿಗೆ ಶೂಗಳನ್ನು ಸ್ಲಂ ಸಂಸ್ಥೆ ಸಂಸ್ಥಾಪಕಿ ಭಾಗ್ಯವತಿ ಅಮರೇಶ್ ಮತ್ತು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಅಮರೇಶ್ (ಅಂಬರೀಶ್) ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತಾಡಿದ ಭಾಗ್ಯವತಿ ಅಮರೇಶ್, ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು. ಆರ್ಥಿಕವಾಗಿ ಹಿಂದುಳಿದ ಮತ್ತು ಸ್ಲಂ ಪ್ರದೇಶದಲ್ಲಿ ಉತ್ತಮ ಪ್ರತಿಭಾವಂತ ಮಕ್ಕಳು ಇದ್ದಾರೆ. ಶ್ರೀಮಂತ ಕುಟುಂಬದ ಮಕ್ಕಳಿಗೆ ಸಿಗುವ ಹೈಟೆಕ್ ಶಿಕ್ಷಣ ಸೌಲಭ್ಯಗಳು, ಬಡ ಮಕ್ಕಳಿಗೂ ಸಿಗಬೇಕು ಎಂಬ ಉದ್ದೇಶದಿಂದ ಸ್ಲಂ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ತಂತ್ರಜ್ಞಾನ ಶಿಕ್ಷಣ ಪಡೆಯಲು ಉಚಿತವಾಗಿ ಕಂಪ್ಯೂಟರ್ ತರಬೇತಿ ಕೇಂದ್ರ ನಡೆಸಲಾಗುತ್ತಿದೆ. ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಹಕಾರವಾಗಲಿ ಎಂಬ ಕಾರಣಕ್ಕೆ ಶಿಕ್ಷಣ ತಜ್ಞರಿಂದ ಉಚಿತ ಟ್ಯೂಶನ್ ಪ್ರತಿ ವರ್ಷ ಮೂರು ತಿಂಗಳು ಕಾಲ ನಡೆಯುತ್ತದೆ ಎಂದರು.

ಪ್ರತಿಭಾವಂತ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿ 30ಕ್ಕೂ ಹೆಚ್ಚು ಲ್ಯಾಪ್ ಟಾಪ್ ವಿತರಿಸಲಾಗಿದೆ. ಸಮಾಸಮಾಜ, ಅಭಿವೃದ್ದಿ ಮತ್ತು ವಿದ್ಯಾವಂತ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಲಭಿಸಬೇಕು ಎಂದರು.

ಬಿಜೆಪಿ ಮುಖಂಡ ರಾಜು, ಹೊಂಬೇಗೌಡನಗರ ವಾರ್ಡ್ ಬಿಜೆಪಿ ಅಧ್ಯಕ್ಷ ಅಜಿತ್ ರಾಜಣ್ಣ, ಹರೀಶ್, ಯುವಧ್ವನಿ ಸಂಸ್ಥೆಯ ಅಧ್ಯಕ್ಷ ಶ್ರವಣ್ ಸೂರಜ್, ಶ್ರೀನಾಥ್, ಪ್ರಭಾಕರ್ ರೆಡ್ಡಿ ಮೊದಲಾದವರು ಇದ್ದರು.

Leave a Reply