ಮುಖ್ಯಮಂತ್ರಿಗಳು, ಗೃಹ ಸಚಿವರು ರಾಜೀನಾಮೆ ನೀಡಲಿ: ವಿಜಯೇಂದ್ರ

2 years ago

ಬೆಂಗಳೂರು: ಮಾನ್ಯ Siddaramaiah ನವರೇ, ಇನ್ನೂ ಎಷ್ಟು ಹೆಣ್ಣು ಮಕ್ಕಳ ಬಲಿಯಾಗಬೇಕೆಂದು ನಿಮ್ಮ ಸರ್ಕಾರ ಕಾಯುತ್ತಿದೆ ಎಂದು ರಾಜ್ಯದ ಜನ ನಿಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ವ್ಯವಸ್ಥೆ ನಿಷ್ಕ್ರಿಯಗೊಳಿಸಿರುವ ನಿಮ್ಮ ಸರ್ಕಾರದ ನೆರಳಲ್ಲಿ ಅಮಾಯಕ ಹೆಣ್ಣುಮಕ್ಕಳು ರಕ್ಷಣೆಗಾಗಿ ಪರಿತಪಿಸಿ ಪ್ರಾಣ ಭೀತಿಯಿಂದ ತತ್ತರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ರಾಜ್ಯದಲ್ಲಿ ವೈಯಕ್ತಿಕ ಕಾರಣಕ್ಕಾಗಿ ಹೆಣ್ಣು ಮಕ್ಕಳ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಧರ್ಮದ ಲೇಪ ಕೊಡುವ ಯತ್ನ ಮಾಧ್ಯಮಗಳು ಮತ್ತು ಸಂಘ ಪರಿವಾರದಿಂದ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆಯ ಬೆನ್ನಲ್ಲೇ ಕೊಡಗಿನಲ್ಲಿ ಅಪ್ರಾಪ್ತೆ ಮೀನಾಳ ರುಂಡ ಕಡಿದು ರಾಕ್ಷಸನೊಬ್ಬ ಅಟ್ಟಹಾಸ ಮೆರೆದು, ಆಕೆಯ ರಕ್ತ ಆರುವ ಮುನ್ನವೇ ಅಂಜಲಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ದಾರುಣ ಘಟನೆ ಮತ್ತದೇ ಹುಬ್ಬಳಿಯಲ್ಲಿ ಘಟಿಸಿರುವುದು ಅತ್ಯಂತ ಅಮಾನುಷವಾದುದು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಹಳಿತಪ್ಪಿರುವ ಕಾನೂನು ಸುವ್ಯವಸ್ಥೆಯ ಪರಿಣಾಮ ‘ಕರ್ನಾಟಕ ಸ್ತ್ರೀ ಹಂತಕ ರಾಜ್ಯ’ ಎಂಬ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ನೇಹಾ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ತೋರಿದ ನಿರ್ಲಕ್ಷ್ಯದಿಂದಾಗಿ ಅಪರಾಧ ಕೃತ್ಯಗಳು ಸರಣಿ ರೂಪದಲ್ಲಿ ಘಟಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಈ ಕೂಡಲೇ ಅಂಜಲಿ ಹಂತಕನ ಸೆರೆಹಿಡಿದು ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೇ ಕಾನೂನು ಸುವ್ಯವಸ್ಥೆ ಸುಭದ್ರಗೊಳಿಸಲಿ, ಇಲ್ಲವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ವೈಫಲ್ಯತೆಯನ್ನು ಒಪ್ಪಿಕೊಂಡು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

Leave a Reply