ಚೆನೈ-ಬೆಂಗಳೂರು, ಬೆಂಗಳೂರು-ಮೈಸೂರು ದಶಪಥಗಳ ಹೆದ್ದಾರಿ ಲೋಕಾರ್ಪಣೆಗೆ ಸಜ್ಜು: ಗಡ್ಕರಿ

3 years ago

ಬೆಂಗಳೂರು: ಮಹತ್ವಾಕಾಂಕ್ಷೆಯ ಚೆನೈ-ಬೆಂಗಳೂರು ಮತ್ತು ಬೆಂಗಳೂರು-ಮೈಸೂರು ನಡುವಿ‌ನ ದಶಪಥಗಳ ಹೆದ್ದಾರಿಯನ್ನು  ಲೋಕಾರ್ಪಣೆಗೆ ಸಜ್ಜುಗೊಂಡಿವೆ‌. ಎರಡೂ ರಸ್ತೆಗಳಲ್ಲಿ ಸಂಚರಿಸಿ ಕಾಮಗಾರಿ ಪರಿಶೀಲಿಸಿದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಎರಡೂ ರಸ್ತೆಗಳ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಬೆಳಿಗ್ಗೆ ಬೆಂಗಳೂರಿಗೆ‌ ಆಗಮಿಸಿದ ಅವರು ಹೊಸಕೋಟೆ ಬಳಿ ನಡೆಯುತ್ತಿರುವ ಚೆನ್ನೈ- ಬೆಂಗಳೂರು ಹೆದ್ದಾರಿ ಕಾಮಗಾರಿ ವೈಮಾನಿಕ ಸಮೀಕ್ಷೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿ ಪೂರ್ಣಗೊಳಿಸಲು 2024ರ ಮಾರ್ಚ್‌ ತನಕ ಗಡುವಿದೆ. ಆದರೆ, ಅತ್ಯಂತ ವೇಗವಾಗಿ ಕಾಮಗಾರಿ ನಡೆಯುತ್ತಿದ್ದು, ಜನವರಿಯಲ್ಲೇ ಸಾರ್ವಜನಿಕರಿಗೆ ಸಮರ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಹೊಸ ಹೆದ್ದಾರಿಯು ಹೊಸಕೋಟೆ ಬಳಿಯ ರಿಂಗ್ ರಸ್ತೆಯಿಂದ ಆರಂಭವಾಗಿ ಚೆನ್ನೈ ಹೊರ ವರ್ತುಲ ರಸ್ತೆ ತನಕ 262 ಕಿಲೋ ಮೀಟರ್ ಇರಲಿದೆ. 8 ಪಥದ ಈ ರಸ್ತೆಯಲ್ಲಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸಲು ಸಾಧ್ಯವಿದೆ. 262 ಕಿಲೋ ಮೀಟರ್ ಅನ್ನು 2 ಗಂಟೆ 15 ನಿಮಿಷಗಳಲ್ಲೇ ಕ್ರಮಿಸಲು ಸಾಧ್ಯವಿದೆ‌ ಎಂದರು.

ಈ ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶದ, ತಮಿಳುನಾಡು ರಾಜ್ಯಗಳಲ್ಲಿ ಹಾದು ಹೋಗುತ್ತಿದೆ. ಒಟ್ಟಾರೆ ₹17 ಸಾವಿಯ ಕೋಟಿ ಮೊತ್ತದ ಯೋಜನೆ ಇದಾಗಿದೆ. ಕರ್ನಾಟಕದಲ್ಲೇ 71 ಕಿಲೋ ಮೀಟರ್ ಇರಲಿದ್ದು, ₹5069 ಕೋಟಿ ಕರ್ನಾಟಕ ಭಾಗದ ರಸ್ತೆಗೆ ವೆಚ್ಚವಾಗುತ್ತಿದೆ ಎಂದು ವಿವರಿಸಿದರು

ನಂತರ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದರು.

ಮೊದಲಿಗೆ ರಸ್ತೆಯನ್ನು ಹೆಲಿಕಾಪ್ಟರ್ ಮೂಲಕ ವೈಮಾನಿಕ ಪರಿಶೀಲನೆ ನಡೆಸಿದ ಅವರು ನಂತರ ರಸ್ತೆಯ ಮಧ್ಯದಲ್ಲಿ ಹೆಲಿಕಾಪ್ಟರ್ ನಿಲ್ಲಿಸಿ, ಅಲ್ಲಿಂದ ಕಾರಿನಲ್ಲಿ ಸಂಚರಿಸಿದರು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರೊಂದಿಗೆ ತಾವೇ ಕಾರು ಚಲಾಯಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ರಸ್ತೆಯನ್ನು ಫೆಬ್ರವರಿ ಅಂತ್ಯದಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು

ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಇಲ್ಲವೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು  ಆಹ್ವಾನಿಸಲಾಗುವುದು ಈ  ಹೊಸ ಹೆದ್ದಾರಿಯು ಕರ್ನಾಟಕದ ಆರ್ಥಿಕ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ. ಕೈಗಾರಿಕೆಗಳ ಪ್ರಗತಿಗೆ ಅನುಕೂಲ ಆಗಲಿದೆ ಎಂದರು.

ಬೆಂಗಳೂರು- ಮೈಸೂರು ನಡುವಿನ ಈ ಹೆದ್ದಾರಿಯಲ್ಲಿ ಕೇವಲ 1 ಗಂಟೆ 10 ನಿಮಿಷದಲ್ಲಿ ಸಂಚಾರ ಮಾಡಬಹುದು. ಇದರಿಂದ ಸಮಯ ಮತ್ತು ಮಾನವ ಶಕ್ತಿ ಉಳಿತಾಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಬೆಂಗಳೂರು ಸಂಚಾರ ದಟ್ಟಣೆ ನಿಭಾಯಿಸಲು ಸಬ್‍ಅರ್ಬನ್ ರಸ್ತೆ ನಿರ್ಮಿಸಿ ನಗರ ಹೊರ ವಲಯದ ಹೊಸಕೋಟೆ, ರಾಮನಗರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಆನೇಕಲ್‍ಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.

Leave a Reply