ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಪಾತ್ರವನ್ನು ದೃಢಪಡಿಸಿ 17 ಮಂದಿ ಆರೋಪಿಗಳ ವಿರುದ್ಧ ಬರೋಬ್ಬರಿ 3,991 ಪುಟಗಳ ದೋಷಾರೋಪಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕೊಲೆಯಾದ ರೇಣುಕಾಸ್ವಾಮಿ ತನ್ನ ನಗ್ನ ಫೋಟೊ ಹಾಗೂ ಅಶ್ಲೀಲ ಸಂದೇಶಗಳನ್ನು ಪವಿತ್ರಾಗೌಡ ಅವರಿಗೆ ಕಳುಹಿಸಿರುವುದನ್ನು ಉಲ್ಲೇಖಿಸಿ ನಟ ದರ್ಶನ್ ಎ1ಆಗುವ ಊಹಾಪೋಹಗಳಿಗೆ ತೆರೆ ಎಳೆದು ಎ2 ಆಗಿಯೇ ಮುಂದುವರೆಸಿ ಕೊಲೆಯಲ್ಲಿ 17 ಆರೋಪಿಗಳ ಪಾತ್ರವನ್ನು ವಿವರಿಸಿರುವ ಚಾರ್ಜ್ ಶೀಟ್ ಅನ್ನು ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಸೆಲಿಬ್ರಿಟಿ ಬಂಧನವಾಗಿದ್ದರೂ ಯಾವ ಪ್ರಭಾವ, ಒತ್ತಡಕ್ಕೂ ಒಳಗಾಗದೇ 17 ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹ ಮಾಡಿ ಕೊಲೆಯಾದ 88 ದಿನಕ್ಕೆ ಯಶಸ್ವಿಯಾಗಿ 231 ಸಾಕ್ಷಿದಾರರನ್ನು ಒಳಗೊಂಡ 3,991 ಪುಟಗಳ 7 ಸಂಪುಟಗಳ 10 ಕಡತಗಳನ್ನು ಹೊಂದಿದ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಲಾಗಿದೆ.
ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಎ1 ಹಾಗೂ ಪವಿತ್ರಾ ಎ2 ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಇವೆಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಎಸಿಪಿ ಚಂದನ್ ಕುಮಾರ್ ಮತ್ತು ತನಿಖಾ ತಂಡ ದರ್ಶನ್ ಅವರನ್ನು ಎರಡನೇ ಆರೋಪಿ ಆಗಿ ಉಲ್ಲೇಖಿಸಿದೆ.
ಇದು ನಟ ದರ್ಶನ್ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರ ಭವಿಷ್ಯ ಏನಾಗಲಿದೆ ಎನ್ನುವುದು ಈ ಆರೋಪಟ್ಟಿಯನ್ನು ಅವಲಂಬಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಲ್ಲಿಯವರೆಗಿನ ತನಿಖೆಯಲ್ಲಿ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಧರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳಿಂದ 17 ಆರೋಪಿಗಳ ವಿರುದ್ಧ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸುದ್ದಿಗಾರರಿಗೆ ತಿಳಿಸಿದರು.
ಒಟ್ಟ 231 ಸಾಂದರ್ಭಿಕ ಸಾಕ್ಷಿ: ಪ್ರಕರಣದಲ್ಲಿ ಮೂರು ಪ್ರತ್ಯಕ್ಷ ಸಾಕ್ಷಿದಾರರು, ನಗರದ ಎಫ್ ಎಸ್ಎಲ್, ಹೈದರಾಬಾದ್ ನ ಸಿಎಫ್ಎಸ್ಎಲ್ 8 ವರದಿಗಳು, 161ಹಾಗೂ 164 ರಲ್ಲಿ 27, 164 ಸಿಆರ್‌ಪಿಸಿ ಅಡಿಯಲ್ಲಿನ ಸಾಕ್ಷಿದಾರರು ಸೇರಿ ಹೇಳಿಕೆ 59 ಪಂಚನಾಮೆಗಳು ದೋಷಾರೋಪ ಪಟ್ಟಿಯಲ್ಲಿವೆ.
ತಹಶಿಲ್ದಾರ್, ವೈದ್ಯರು, ಆರ್‌ಟಿಓ, ಅಭಿಯಂತರರು, ಇತರೆ ಸರ್ಕಾರಿ ಅಧಿಕಾರಿಗಳು ಸೇರಿ 8 ಹಾಗೂ 56 ಪೊಲೀಸರು ಸೇರಿ 231 ಸಾಂದರ್ಭಿಕ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸಿದ್ದಪಡಿಸಿರುವ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದರು.
ಇನ್ನು ಹೆಚ್ಚಿನ ತನಿಖೆಯನ್ನು ಕೈಗೊಂಡು ಸಂಗ್ರಹವಾಗುವ ಸಾಕ್ಷ್ಯಾಧಾರಗಳನ್ನು ಕಲಂ- 173(8) ಸಿಆರ್ಯ ಪಿಸಿ ಅಡಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ರಕ್ತ ಪತ್ತೆ: ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಸಿ ಹಲ್ಲೆ ಮಾಡಿದ್ದು, ಕೊಲೆ ಬಳಿಕ ಕೃತ್ಯ ಮುಚ್ಚಿಹಾಕಲು ದರ್ಶನ್ ಹಣ ನೀಡಿರುವುದು, ಆತನ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ಅವರ ರಕ್ತ ಇರುವುದು ಪತ್ತೆ ಆಗಿರುವುದರಿಂದ ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ ಬಗ್ಗೆ ಖಚಿತ ಮಾಹಿತಿ ದೊರೆತಂತಾಗಿದೆ.
ಕೊಲೆ ಮಾಡಲು ಮೂಲ ಕಾರಣ ಪವಿತ್ರಾ ಗೌಡ ಅವರಾಗಿರುವುದರಿಂದ ಆಕೆ ಎ1 ಆಗಿದ್ದಾರೆ. ಹಲ್ಲೆ ನಡೆಯುವ ಸ್ಥಳದಲ್ಲಿ ಅವರು ಹಾಜರಿದ್ದರು. ಚಪ್ಪಲಿಯಲ್ಲಿ ಅವರು ಹೊಡೆದಿದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಪವಿತ್ರ ಗೌಡ ಅಲ್ಲೇ ಇರುವುದಕ್ಕೆ ಸಾಕ್ಷಿ ಸಿಕ್ಕಿದೆ. ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟೀವ್ ಆಗಿರುವುದು ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 231ಕ್ಕೂ ಅಧಿಕ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ನಟ ದರ್ಶನ್ ಮತ್ತು ಇತರೆ ಆರೋಪಿಗಳ ಬಟ್ಟೆಗಳಲ್ಲಿನ ರಕ್ತದ ಕಲೆಗಳನ್ನು ಪರೀಕ್ಷೆಗೆ ಒಳಪಡಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಒಳಗೊಂಡಿವೆ.
ಹಲ್ಲೆ ವೇಳೆ ಅಂಗಲಾಚಿದ ಸ್ವಾಮಿ: ಆರೋಪಿ ಪ್ರದೂಶ್‌ನ ಮೊಬೈಲ್ ಫೋನ್‌ನಿಂದ ಫೋಟೋವೊಂದನ್ನು ಪೊಲೀಸರು ಹೊರತೆಗೆದಿದ್ದಾರೆ. ಇದರಲ್ಲಿ ಹತ್ಯೆಯಾದ ರೇಣುಕಾಸ್ವಾಮಿ, ತನ್ನನ್ನು ಥಳಿಸದಂತೆ ಆರೋಪಿಗಳ ಎದುರು ಅಂಗಲಾಚುತ್ತಿರುವ ದೃಶ್ಯ ಕಂಡುಬಂದಿದೆ. ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಇದ್ದ ಸಿಸಿಟಿವಿ ವಿಡಿಯೋ ದೃಶ್ಯ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಲು ನಟಿ ಪವಿತ್ರಾ ಗೌಡ ಬಳಿಸಿದ್ದರು ಎನ್ನಲಾದ ಚಪ್ಪಲಿಯಲ್ಲಿ ಇದ್ದ ರಕ್ತದ ಕಲೆಗಳನ್ನು ಸಾಕ್ಷಿಗಳನ್ನಾಗಿ ಪೊಲೀಸರು ಉಲ್ಲೇಖಿಸಿದ್ದಾರೆ.
ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತರಲಾಗಿದೆ ಎಂದು ಮಾಹಿತಿ ಸ್ವೀಕರಿಸಿದ ಸಂದೇಶವನ್ನು ದರ್ಶನ್ ಫೋನ್‌ನಿಂದ ಪಡೆದುಕೊಳ್ಳಲಾಗಿದೆ. ಪಬ್‌ನಲ್ಲಿದ್ದ ದರ್ಶನ್, ಶೆಡ್‌ಗೆ ಹೋದ ಮತ್ತು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಬಳಿಕ ಮರಳಿ ಬಂದಿರುವುದು ಎನ್ನಲಾದ ಸಿಸಿಟಿವಿ ವಿಡಿಯೋಗಳನ್ನು ಸಹ ಪಡೆಯಲಾಗಿದೆ.
ಕೇಸ್ ಕುರಿತು ಪ್ರಾಸಿಕ್ಯೂಟರ್ ಪರಿಶೀಲನೆ: ಈ ನಡುವೆ ದರ್ಶನ್ ಅವರು ಬಟ್ಟೆ ಬದಲಿಸಲು ತಮ್ಮ ಮನೆಗೆ ಹೋಗಿದ್ದು, ಇದರ ವಿಡಿಯೋ ಕೂಡ ಪೊಲೀಸರು ಪಡೆದಿದ್ದಾರೆ. ಮುಖ್ಯವಾಗಿ ತನಿಖಾಧಿಕಾರಿಗಳು 24 ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಧೀಶರ ಮುಂದೆ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಅಪ್ರೂವರ್ ಆಗಲು ಒಪ್ಪಿಕೊಂಡಿರುವ ಆರೋಪಿಯ ಹೇಳಿಕೆಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಚಾರ್ಜ್ ಶೀಟ್ ಅನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಂದ ಪರಿಶೀಲನೆ ಕೂಡ ನಡೆದಿದೆ. ಅವರು ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಅದನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದರು.
ಈ ಪ್ರಕರಣದ ತನಿಖೆಯು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಗಿರೀಶ್.ಎಸ್ ನೇತೃತ್ವದ ಎಸಿಪಿ ಚಂದನ್ ಕುಮಾರ್.ಎನ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತನಿಖಾ ತಂಡ ಕೈಗೊಂಡಿತ್ತು. ನಿರಂತವಾಗಿ ಶ್ರಮವಹಿಸಿ ವೈಜ್ಞಾನಿಕ ತಾಂತ್ರಿಕ ಸೇರಿದಂತೆ ಎಲ್ಲಾ ಅಯಾಮಗಳಲ್ಲಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆರೋಪಪಟ್ಟಿ ಸಿದ್ಧಪಡಿಸಿ ಸಲ್ಲಿಸಲಾಗಿದೆ.




