ಮೈಸೂರು: ಕೊರೊನಾ ಕಾರಣದಿಂದ ಪಿ.ಯು.ಸಿ ಪರೀಕ್ಷೆಯನ್ನೇ ಮುಂದೂಡಿರುವಾಗ ಹತ್ತನೇ ತರಗತಿಗೆ ಪರೀಕ್ಷೆ ನಡೆಸುವುದು ಅರ್ಥಹೀನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಲು ಹೊರಟಿದ್ದಾರೆ. ಆರೋಗ್ಯ ಇಲಾಖೆಯ ಅಭಿಪ್ರಾಯ ಪಡೆಯದೆ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಸುರೇಶ್ ಕುಮಾರ್ ತುದಿಗಾಲಲ್ಲಿ ನಿಂತಿರುವುದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಜನ ರೋಗಿಗಳು ಸಾವನ್ನಪ್ಪಿ ಒಂದೂವರೆ ತಿಂಗಳಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನೂ ಜಿಲ್ಲೆಗೆ ಭೇಟಿನೀಡಿಲ್ಲ. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಕುರ್ಚಿ ಹೋಗುತ್ತೆ ಎನ್ನುವ ಮೂಢನಂಬಿಕೆ ಅವರಿಗಿದೆ. ಹೀಗಾದರೆ ಮೃತರ ಕುಟುಂಬದ ನೋವು ಕೇಳೋರು ಯಾರು? ಎಂದಿದ್ದಾರೆ.
ನಾನು ಮುಖ್ಯಮಂತ್ರಿಯಾದ ಮೇಲೆ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೆ. ಪೂರ್ಣ 5 ವರ್ಷದ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿಲ್ಲವೆ? ಅಧಿಕಾರದ ಆಸೆಗೆ ಜನರ ಕಷ್ಟ ಕೇಳದೆ ದೂರ ಓಡಿದರೆ ಹೇಗೆ? ಮುಖ್ಯಮಂತ್ರಿಯಾದವರು ಮೊದಲು ಜನರ ನೋವಿಗೆ ಕಿವಿಯಾಗಬೇಕು. ಚಾಮರಾಜನಗರಕ್ಕೆ ಭೇಟಿನೀಡದ ಯಡಿಯೂರಪ್ಪ ಅವರ ನಡೆಗೆ ನನ್ನ ತೀವ್ರ ವಿರೋಧವಿದೆ ಎಂದಿದ್ದಾರೆ.
ಕೊರೊನಾ ಎರಡನೇ ಅಲೆಯಿಂದಾಗಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ, ಕಷ್ಟ ನಷ್ಟ ಅನುಭವಿಸುತ್ತಿದ್ದಾರೆ. ಇಂಥಾ ಸಂದಿಗ್ಧ ಸಮಯದಲ್ಲಿ ಅಧಿವೇಶನ ಕರೆದು ವಿರೋಧ ಪಕ್ಷಗಳೊಂದಿಗೆ ಚರ್ಚಿಸಿ, ಯಾವೆಲ್ಲಾ ವಿಧದಲ್ಲಿ ಜನರಿಗೆ ನೆರವಾಗಬಹುದು ಎಂದು ಸರ್ಕಾರ ನಮ್ಮ ಸಲಹೆ ಪಡೆಯಬೇಕಿತ್ತು. ಆದರೆ ಈ ಸರ್ಕಾರಕ್ಕೆ ಇದ್ಯಾವುದೂ ಬೇಡ ಎಂದು ಕಿಡಿಕಾರಿದ್ದಾರೆ.




