ಧಾರವಾಡ: ಅವೈಜ್ಞಾನಿಕ ಮತ್ತು ನಿಯಮ ಬಾಹಿರವಾಗಿ ಅಧಿಸೂಚಿತ ನಕ್ಷೆ ಮತ್ತು ಪ್ರದೇಶದ ಮತದಾರರನ್ನು ಬೇರೆ ವಾರ್ಡುಗಳಿಗೆ ಸೇರ್ಪಡೆ ಮಾಡುತ್ತಿರುವ ಕುರಿತು ಎ. ಐ. ಸಿ. ಸಿ ಸದಸ್ಯ ಶಾಕೀರ್ ಸನದಿ ಅಸಮಾಧಾನ ವ್ಯಕ್ತಪಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗಳು ಬಹಳ ದಿನಗಳಿಂದ ಹಲವಾರು ಕಾರಣಗಳಿಂದಾಗಿ ನಡೆಯದೇ ಇರುವುದು ತಮಗೂ ಗೊತ್ತಿರುವ ವಿಚಾರ ವಾಗಿದೆ. ಮಹಾನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಜನಸಂಖ್ಯೆ ಮತದಾರರ ಸಂಖ್ಯೆಯೂ ಸಹಜವಾಗಿ ಹೆಚ್ಚಳವಾಗಿದೆ ಎಂದಿದ್ದಾರೆ.
ಸರ್ಕಾರವು ಮತದಾರರ ಹಿತದೃಷ್ಟಿಯಿಂದ ಮತ್ತು ಮಹಾನಗರದ ಸರ್ವತೋಮುಖ ಪ್ರಗತಿಯ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯ ಕ್ಷೇತ್ರಗಳನ್ನು ಮರು ವಿಂಗಡನೆ ಮಾಡಿದ್ದು ಸಮಯೋಚಿತವೂ ಮತ್ತು ಸ್ವಾಗತಾರ್ಗವೂ ಆಗಿದೆ. ಇದೇ ಪ್ರಕಿಯೆಯ ಅಂಗವಾಗಿ ಕ್ಷೇತ್ರಗಳ ವಿಳಾಸ ಮತ್ತು ಚಕಬಂದಿಯ ವಿವರಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಮತ್ತು ಸಂಬಂಧಿಸಿದ ವಾರ್ಡ ನಕ್ಷೆಗಳನ್ನೂ ಸಹ ಪ್ರಕಟಿಸಲಾಗಿದೆ ಎಂದಿದ್ದಾರೆ.
ಸರ್ಕಾರದ ಮತ್ತು ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕಟಿತ ಹಾಗೂ ಅಧಿಸೂಚಿತ ದಾಖಲೆಗಳ ಪ್ರಕಾರ ಆಯಾ ಮತದಾರರ ಯಾದಿಗಳನ್ನು ತಯಾರಿಸಬೇಕಿದೆ. ಆದರೆ ಈ ಪ್ರಕಿಯೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳು ಜನಪ್ರತಿನಿಧಿಗಳ ಮನೆಯಲ್ಲಿ ಕುಳಿತು ಅವರ ಅಣತಿಯಂತೆ ಅವೈಜ್ಞಾನಿಕ ಮತ್ತು ನಿಯಮವಬಾಹಿರವಾಗಿ ಬೇರೆ ಅಧಿಸೂಚಿತ ಪ್ರದೇಶದಲ್ಲಿ ವಾಸಿಸುತ್ತಿರುವ ಮತದಾರರನ್ನು ಜನಪ್ರತಿನಿಧಿಗಳು ಹೇಳಿದ ವಾರ್ಡುಗಳಿಗೆ ಸೇರ್ಪಡೆ ಮಾಡುತ್ತಿದ್ದಾರೆ. ಇದರಿಂದಾಗಿ ಒಂದೇ ಪ್ರದೇಶದಲ್ಲಿಯ ಆಜೂ ಬಾಜೂ ಮನೆಗಳು ಬೇರೆ ಬೇರೆ ವಾರ್ಡಿಗೆ ಬರುವುದು. ಒಂದೇ ಮನೆಯ ಸದಸ್ಯರೇ ಎರಡು ಮೂರು ವಾರ್ಡುಗಳಲ್ಲಿ ಹಂಚಿ ಹೋಗುವುದು. ನೆರೆ ಹೊರೆಯವರೇ ಹಲವಾರು ವಾರ್ಡುಗಳಲ್ಲಿ ಚದುರಿ ಹೋಗುತ್ತದೆ. ಮತ್ತು ಆ ಪ್ರದೇಶ ಯಾವ ವಾರ್ಡಿಗೆ ಬರುತ್ತದೆ ಎನ್ನುವ ಸ್ಪಷ್ಟ ವಿವರ ಇರದೇ ಆ ಪ್ರದೇಶದ ಪ್ರಗತಿಗೇ ಹಿನ್ನಡೆ ಆಗುತ್ತವೆ. ಇದು ಸರ್ಕಾರದ ಉದ್ದೇಶ ಮತ್ತು ಜನಹಿತವನ್ನೇ ಹಾಳು ಮಾಡುವ ಪ್ರಕಿಯೆ ಆಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.
ಈ ರೀತಿಯಾಗಿ ಕೆಲವೇ ಮತ್ತು ಒಂದು ಪಕ್ಷದ ಜನಪ್ರನಿಧಿಗಳ ದುರಾಸೆಗೆ ಇಡೀ ವ್ಯವಸ್ಥೆಯನ್ನೇ ಬಲಿ ಕೊಡುವುದು ಎಷ್ಟು ಸರಿ. ಹಾಗೂ ಈ ಮೂಲಕ ಪುನಃ ತಕರಾರುಗಳು ಉದ್ಬವಿಸಿ ಚುನಾವಣೆ ಪ್ರಕಿಯೆಯನ್ನು ಇನ್ನೂ ಬಹಳ ದೂರ ಮುಂದೂಡುವ ವ್ಯವಸ್ಥಿತ ಹುನ್ನಾರ ಇರುತ್ತದೆ. ಇದು ಪ್ರಜಾ ಪ್ರತಿನಿಧಿ ಕಾಯ್ದೆ ಮತ್ತು ಪ್ರಜಾಪ್ರಭುತ್ವದ ಸ್ಪಷ್ಟ ಉಲ್ಲಂಘನೆ ಇರುತ್ತದೆ ಕಾರಣ ದಯವಿಟ್ಟು ತಾವು ಕೂಡಲೇ ಈ ಕುರಿತಾಗಿ ಕ್ರಮ ಜರುಗಿಸಲು ವಿನಂತಿಸಿದ್ದಾರೆ.




