ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಸದರ ಕಚೇರಿ ಚಲೋ

2 years ago

ಮಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು, ಜನಪರ ಪರ್ಯಾಯ ನೀತಿಗಳನ್ನು ಜಾರಿಗೊಳಿಸಬೇಕು, ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಜನವರಿ 23, 24, 25ರಂದು ಮೂರು ದಿನಗಳ ಕಾಲ ಸಂಸದರ ಕಚೇರಿ ಚಲೋ ಚಳುವಳಿ ನಡೆಯಲಿದೆ ಎಂದು CITU ದ.ಕ.ಜಿಲ್ಲಾ ಸಮಿತಿ ತಿಳಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಐಟಿಯು, “ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ” ಎಂಬ ಘೋಷಣೆಯೊಂದಿಗೆ ಕಾರ್ಮಿಕ ವರ್ಗದ ನೇತ್ರತ್ವದಲ್ಲಿ ಜನವರಿ 12ರಿಂದ ಫೆಬ್ರವರಿ 16ರವರೆಗೆ ದೇಶಾದ್ಯಂತ ಪ್ರಚಾರಾಂದೋಲನ ನಡೆಯಲಿದ್ದು, ಅದರ ಭಾಗವಾಗಿ ಸಹಿಸಂಗ್ರಹ ಚಳುವಳಿ ವ್ಯಾಪಕವಾಗಿ ನಡೆಯಲಿದೆ ಎಂದು ಹೇಳಿದೆ.

ಕಳೆದ 10 ವರ್ಷಗಳಿಂದ ದೇಶದ ಕಾರ್ಮಿಕ ವರ್ಗ ತೀವ್ರ ಸಂಕಷ್ಟದಲ್ಲಿದ್ದು, ಬದುಕು ಸಾಗಿಸಲು ಹರಸಾಹಸಪಡುವಂತಾಗಿದೆ. ದೇಶವನ್ನಾಳುವ ನರೇಂದ್ರ ಮೋದಿ ಸರಕಾರ ನಿರಂತರವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಿದೆ. ದೇಶದ ಪ್ರಮುಖ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಲು ಹೊರಟಿದ್ದು, ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಸುವ ಷಡ್ಯಂತ್ರ ಅಡಗಿದೆ ಎಂದಿದೆ.

ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಇಲ್ಲದೆ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅತ್ಯಂತ ನಿಕ್ರಷ್ಠವಾಗಿ ಬದುಕುವಂತಾಗಿದೆ. ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ದುಡಿಯುವ ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುವಂತಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಕೈಗೊಪ್ಪಿಸಿ ದೇಶದ ಆರ್ಥಿಕತೆಯನ್ನೇ ದಿವಾಳಿಯೆಬ್ಬಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ಇಂತಹ ಸಂದರ್ಭದಲ್ಲಿ ದೇಶದ ಜನತೆಯ ಬದುಕನ್ನು ಸಂರಕ್ಷಿಸಲು ಕಾರ್ಮಿಕ ವರ್ಗ ಒಂದಾಗಿ ಸಮರಧೀರ ಹೋರಾಟದತ್ತ ಮುನ್ನಡೆಯಲು ಜನವರಿ ಫೆಬ್ರವರಿ ತಿಂಗಳಾದ್ಯಂತ ಪ್ರಚಾರಾಂದೋಲನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದೆ.

ಜನವರಿ 23ರಂದು ಬೆಳಿಗ್ಗೆ 10.30ಕ್ಕೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಸ್ಕೀಂ ನೌಕರರಾದ ಬಿಸಿಯೂಟ ಆಶಾ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನಾ ಪ್ರದರ್ಶನ ಜರುಗಲಿದ್ದು, ಜನವರಿ 25ರಂದು ಬೆಳಿಗ್ಗೆ 10.30ಕ್ಕೆ ಬೀಡಿ, ಕಟ್ಟಡ, ಬೀದಿಬದಿ, ಹಮಾಲಿ, ಆಟೋರಿಕ್ಷಾ ಮುಂತಾದ ಕಾರ್ಮಿಕರಿಂದ ಪ್ರತಿಭಟನೆ ನಡೆಯಲಿದೆ. ಆದ್ದರಿಂದ ಜಿಲ್ಲೆಯ ವಿವಿಧ ವಿಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು CITU ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮನವಿ ಮಾಡಿದ್ದಾರೆ.

Leave a Reply