ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ

2 years ago

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲೀಸರ ಅತಿಥಿಯಾಗಿದ್ದಾರೆ.

ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾದ ತಕ್ಷಣ ಕಾರ್ಯಾಚರಣೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನ ಕೆಂಪಯ್ಯನಹುಂಡಿ ಗ್ರಾಮದ ಬಳಿಯ ಫಾರ್ಮ್ ಹೌಸ್ ನಲ್ಲಿದ್ದ ದರ್ಶನ್ ರನ್ನು ಬಂಧಿಸಿದ್ದಾರೆ.

ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆ ನಿವಾಸಿ ರೇಣುಕಾಸ್ವಾಮಿ ಅಪೊಲೋ ಮೆಡಿಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ನಟ ದರ್ಶನ್ ಗೆ ಆತ್ಮೀಯವಾಗಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮಾಡುತ್ತಿದ್ದರು, ಅಲ್ಲದೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದರು ಎಂಬ ಆರೋಪವಿದೆ.

ಈ ಕುರಿತು ಪವಿತ್ರಾ ಗೌಡ ದರ್ಶನ್ ಅವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೆರಳಿದ ದರ್ಶನ್ ತಮ್ಮ ಆಪ್ತರಿಗೆ ಈ ಬಗ್ಗೆ ಗಮನ ಹರಿಸಲು ಹೇಳಿದ್ದಾರೆ. ಅದರಂತೆ ಅವರು ಜೂನ್ 8ರಂದು ರೇಣುಕಾಸ್ವಾಮಿಯನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ರಾತ್ರಿ ಕಾಮಾಕ್ಷಿಪಾಳ್ಯದ ವಿನಯ್ ಅವರ ಶೆಡ್ ನಲ್ಲಿ ಇರಿಸಿದ್ದಾರೆ.

ಇಲ್ಲಿ ರೇಣುಕಾಸ್ವಾಮಿಯನ್ನು ಅಶ್ಲೀಲವಾಗಿ ಮೆಸೇಜ್ ಯಾಕೆ ಮಾಡಿದಿಯಾ ಎಂದು ವಿಚಾರಿಸಿದ್ದಾರೆ. ಈ ವೇಳೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಕೂಡ ಇದ್ದರೂ ಎನ್ನಲಾಗಿದೆ. ದರ್ಶನ್ ಆಪ್ತರು ರೇಣುಕಾಸ್ವಾಮಿಯನ್ನು ಹೆದರಿಸಲು ಬಲವಾಗಿ ಹೊಡೆದಿದ್ದಾರೆ. ಈ ಹೊಡೆತದಿಂದ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಇದರಿಂದ ಆತಂಕಗೊಂಡ ದರ್ಶನ್ ಆಪ್ತರು ನಂತರ ಮೃತ ದೇಹವನ್ನು ಸುಮನಹಳ್ಳಿಯ ರಾಜಕಾಲುವೆ ಸಮೀಪದ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದರು. ಜೂನ್ 9ರಂದು ಸುಮ್ಮನಹಳ್ಳಿಯ ರಾಜಕಾಲುವೆ ಬಳಿಯ ಮೋರಿಯಲ್ಲಿ ಬೀದಿ ನಾಯಿಗಳು ಮೃತದೇಹವನ್ನು ಎಳೆಯುತ್ತಿದ್ದುದನ್ನು ನೋಡಿ, ಪಕ್ಕದಲ್ಲಿದ್ದ ಅಪಾರ್ಟ್ ಮೆಂಟ್ ಭದ್ರತಾ ಸಿಬ್ಬಂದಿ ರಾಮ್ ದೋರ್ ಎನ್ನುವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ದೇಹದ ಮೇಲಿನ ಗಾಯಗಳನ್ನು ಗುರುತಿಸಿ ನಡೆಸಿದ ತನಿಖೆಯಲ್ಲಿ ಅದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರೇಣುಕಾಸ್ವಾಮಿ ಕುಟುಂಬದ ಸದಸ್ಯರು ಮೃತದೇಹವನ್ನು ಗುರುತಿಸಿದ್ದರು.

ಈ ಬಗ್ಗೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸಮೀಪದ ಸಿಸಿ ಟಿವಿಗಳ ದೃಶ್ಯಾವಳಿಗಳು ಮತ್ತು ಮೃತ ದೇಹದಲ್ಲಿನ ಮೊಬೈಲ್ ನೆಟ್ವರ್ಕ್ ಗಳ ವಿವರ ಕಲೆ ಹಾಕಿ ತನಿಖೆ ಆರಂಭಿಸಿದರು. ಇದರ ನಡುವೆ ಕೊಲೆ ಸಂಬಂಧ ಗಿರಿನಗರ ಮೂಲದ ಮೂವರು ಆರೋಪಿಗಳು ಶರಣಾಗಿ, ಹಣಕಾಸು ವಿಚಾರವಾಗಿ ಕೊಲೆ ಮಾಡಿದ್ದಾಗಿ ಹೇಳಿದ್ದರು. ಪೊಲೀಸರಿಗೆ ಅನುಮಾನ ಬಂದು ತೀವ್ರ ವಿಚಾರಣೆ ನಡೆಸಿದ ವೇಳೆ ದರ್ಶನ್ ಹೆಸರು ಬಾಯಿ ಬಿಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಬಂಧನ: ಬಳಿಕ ವಿಚಾರಣೆ ತೀವ್ರಗೊಳಿಸಿದ ಪೊಲೀಸರು, ದರ್ಶನ್ ಸ್ನೇಹಿತ ವಿ.ವಿನಯ್, ದರ್ಶನ್ ಮ್ಯಾನೇಜರ್ ಆರ್.ನಾಗರಾಜು, ಎಂ.ಲಕ್ಷ್ಮಣ್, ಎಸ್.ಪ್ರದೋಶ್, ಕೆ.ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್ ರಾಘು ಎಂಬುವರನ್ನು ಬಂಧಿಸಿದ್ದಾರೆ.

ಇವರು ನೀಡಿದ ಮಾಹಿತಿ ಆಧರಿಸಿ ನಟ ದರ್ಶನ್ ಮತ್ತು ಪವಿತ್ರ ಗೌಡ ಅವರನ್ನು ಕೂಡ ಬಂಧಿಸಲಾಗಿದೆ. ಬಂಧನಕ್ಕೊಳಗಾಗಿರುವ ನಟ ದರ್ಶನ್, ಅವರ ಆಪ್ತೆ ಪವಿತ್ರಾಗೌಡ ಸೇರಿದಂತೆ 13 ಆರೋಪಿಗಳಿಗೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಬೌರಿಂಗ್ ಆಸ್ಪತ್ರೆಗೆ ಆರೋಪಿಗಳನ್ನು ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ಭದ್ರತೆ ದೃಷ್ಟಿಯಿಂದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ವೈದ್ಯರನ್ನು ಕರೆಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

Leave a Reply