ಮಾಧ್ಯಮದವರನ್ನು ನಾಯಿಗೆ ಹೋಲಿಕೆ ಮಾಡಿದ ಅನಂತಕುಮಾರ ಹೆಗಡೆ

2 years ago

ಬೆಂಗಳೂರು: ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನಿಜವಾದ ನಾಯಕತ್ವ. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಅಂಕೋಲಾ ತಾಲ್ಲೂಕಿನ ಹಿಲ್ಲೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಶಕ್ತ ನಾಯಕತ್ವ ಹೊಂದಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಬಿಜೆಪಿ ಗೆಲ್ಲುತ್ತಲೇ ಇರಬೇಕು. ವಿವಾದ ಸೃಷ್ಟಿಯಾಗಿದೆ ಎಂದು ಕಾರ್ಯಕರ್ತರು ವಿಚಲಿತರಾದರೆ ನಾಯಕತ್ವ ಅಲುಗಾಡುತ್ತದೆ. ಹೀಗಾಗಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಬಿಜೆಪಿ ಗೆಲ್ಲಿಸುವ ಚರ್ಚೆ ಆರಂಭಿಸಿ, ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಅವು ಬೊಗಳಿದರೆ ಮಾತ್ರ ಆನೆಗೆ ಗತ್ತು ಬರುತ್ತದೆ ಎಂದರು. ಈ ಮೂಲಕ ಮಾಧ್ಯಮದವರನ್ನು ನಾಯಿಗೆ ಹೋಲಿಕೆ ಮಾಡಿದರು.

ಅನಂತಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರರಾದ ಪಿ. ರಾಜೀವ್ ಮತ್ತು ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಅನಂತಕುಮಾರ್ ಹೆಗಡೆ ಅವರ ವೈಯಕ್ತಿಕ ಹೇಳಿಕೆ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಬಿಜೆಪಿ ಸಂವಿಧಾನದ ಪರವಾಗಿದೆ .ಯಾವುದೇ ಕಾರಣಕ್ಕೂ ಅದನ್ನು ಬದಲಾಯಿಸುವ ಅಥವಾ ಮಾರ್ಪಾಟು ಮಾಡುವ ಮನಸ್ಥಿತಿಯನ್ನು ಹೊಂದಿಲ್ಲ. ಈ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದರು.

ಅನಂತಕುಮಾರ್ ಹೆಗಡೆ ಅವರ ಹೇಳಿಕೆ ಅವರ ವೈಯಕ್ತಿಕ ವಿಚಾರವೇ ಹೊರತು ಪಕ್ಷದ ವಿಚಾರ ಅಲ್ಲ. ಬಿಜೆಪಿ ಯಾವತ್ತೂ ಕೂಡ ಬಾಬಾ ಸಾಹೇಬ ಅಂಬೇಡ್ಕರರ ತತ್ವ, ಸಿದ್ಧಾಂತಗಳ ಜೊತೆ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನಕ್ಕೆ ತಲೆಬಾಗಿ ನಮಿಸಿ ಸಂಸತ್ತನ್ನು ಪ್ರವೇಶ ಮಾಡಿದವರು. ಆದರೆ, ಸಂವಿಧಾನಕ್ಕೆ ಗೌರವಿಸಿ ಸಂಸತ್ ಪ್ರವೇಶಿಸಿದ ಪ್ರಧಾನಿಯವರ ಕುರಿತು ಕಾಂಗ್ರೆಸ್ ಕಾರ್ಯಕರ್ತ ಅವಹೇಳನಕಾರಿಯಾಗಿ ಮಾತನಾಡಿದಾಗ ಆತನಿಗೆ ತಿಳಿಹೇಳುವ ಮತ್ತು ಆತನ ಹೇಳಿಕೆಯನ್ನು ಖಂಡಿಸುವ ಕನಿಷ್ಠ ವರ್ತನೆಯನ್ನು ಕಾಂಗ್ರೆಸ್ಸಿನ ಯಾವ ನಾಯಕರೂ ಮಾಡಿಲ್ಲ ಎಂದರು.

ಸಂವಿಧಾನದ ಕುರಿತು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳು ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದರ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳುವುದಾಗಿ ತಿಳಿಸಿದೆ.

ವಿಪಕ್ಷಗಳು ಮತ್ತು ಸ್ವಪಕ್ಷೀಯರಿಂದಲೇ ತಮ್ಮ ಹೇಳಿಕೆ ಬಗ್ಗೆ ತೀವ್ರ ಖಂಡನೆ ವ್ಯಕ್ತವಾದರೂ ಜಗ್ಗದ ಅನಂತಕುಮಾರ್ ಹೆಗಡೆ ತಮ್ಮ ನಿಲುವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಅಷ್ಟೇ ಅಲ್ಲ, ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಅವು ಬೊಗಳಿದರೆ ಮಾತ್ರ ಆನೆಗೆ ಗತ್ತು ಬರುತ್ತದೆ ಎಂದಿದ್ದಾರೆ.

Leave a Reply