ದೆಹಲಿ: ಕೊರೊನಾ ತಡೆ ನಿರ್ವಹಣೆಯಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳು ನಿರ್ಣಾಯಕ. ಇವು ಹಬ್ಬಗಳ ತಿಂಗಳುಗಳಾಗಿರುವುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಜನರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ರೂಪದ ಸಲಹೆ ನೀಡಿದೆ.
ಈ ವಿಷಯ ಪ್ರಸ್ತಾಪಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ ಇನ್ನೂ ಎರಡನೇ ಅಲೆ ಮುಕ್ತಾಯವಾಗಿಲ್ಲ. ಆದ್ದರಿಂದ ಹಬ್ಬಗಳನ್ನು ಎಚ್ಚರದಿಂದ ಕೊರೊನಾ ನಿಯಮಗಳಿಗೆ ಅನುಗುಣವಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.
ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಪ್ರತಿಕ್ರಿಯೆ ನೀಡಿ, ಲಸಿಕೆಗಳು ರೋಗದ ತೀವ್ರತೆ ಕಡಿಮೆ ಮಾಡುತ್ತವೆಯೇ ಹೊರತು ರೋಗ ಬಾರದಂತೆ ತಡೆಯುವುದಿಲ್ಲ. ಆದ್ದರಿಂದ ಲಸಿಕೆಗಳನ್ನು ಪಡೆದ ನಂತರ ಕೂಡ ಮಾಸ್ಕ್ ಧರಿಸಿ ಕೊರೊನಾ ನಿಯಂತ್ರಣದ ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕೇರಳ ಒಂದರಲ್ಲೇ 1 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 4 ರಾಜ್ಯಗಳಲ್ಲಿ 10,000 ದಿಂದ 1 ಲಕ್ಷ ಸಕ್ರಿಯ ಪ್ರಕರಣಗಳಿವೆ. 31 ರಾಜ್ಯಗಳಲ್ಲಿ 10,000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಅಫ್ಘಾನಿಸ್ತಾನದಿಂದ ಬಂದವರ ಪೈಕಿ 400 ಕ್ಕೂ ಹೆಚ್ಚು ಜನರಿಗೆ ಕೊರೊನಾ ಪತ್ತೆ ಪರೀಕ್ಷೆ ನಡೆದಿದೆ. ಕೆಲವರಿಗೆ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.



