ಸಂವಿಧಾನ ಓದು ಇಂದು ಮನೆಮಾತಾಗಿವೆ: ಜಸ್ಟೀಸ್ ನಾಗಮೋಹನ್ ದಾಸ್

5 years ago

ಬೆಂಗಳೂರು: ಮೂರು ವರ್ಷಗಳ ಹಿಂದೆ ಆರಂಭಗೊಂಡ ‘ಸಂವಿಧಾನ ಓದು’ ಅಭಿಯಾನ ಅದೊಂದು ಆಂದೋಲನದ ಸ್ವರೂಪದಿಂದಾಗಿ ಇಂದು ರಾಜ್ಯದ ಮನೆಮಾತಾಗಿವೆ  ಎಂದು ಸಂವಿಧಾನ ಓದು ಪುಸ್ತಕದ ಕರ್ತೃ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದರು.

ಸಮುದಾಯ-ಸಹಯಾನ-ಚಿಂತನ ಸಹಯೋಗದಲ್ಲಿ ಆಯೋಜಿಸಲಾದ ಸಂವಿಧಾನ ಓದು ಹಿನ್ನೋಟ ಮತ್ತು ಮುನ್ನೋಟ ಮೂರು ವರ್ಷದ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆರಂಭದಲ್ಲಿ ಕೇವಲ 2000 ಪ್ರತಿಗಳ ಮಾರಾಟದೊಂದಿಗೆ ಆರಂಭಗೊಂಡ ಈ ಅಭಿಯಾನ ಇಂದು 50 ಬಾರಿ ಮುದ್ರಣದೊಂದಿಗೆ 2 ಲಕ್ಷ ಪ್ರತಿಗಳ ದಾಖಲೆ ಮಾರಾಟವಾಗಿದೆ. ಅಲ್ಲದೆ ಹಿಂದಿ ಇಂಗ್ಲಿಷ್ ಭಾಷೆಗೂ ತರ್ಜುಮೆಗೊಂಡಿದೆ. ಮಾತ್ರವಲ್ಲ ಇದೀಗ ಮಲೆಯಾಳಿಗೂ  ಅನುವಾದಗೊಂಡಿದೆ. ಇದಕ್ಕೆ ರಾಜ್ಯ ಜನಪರ ಮನಸ್ಸುಗಳು ನೀಡಿದ ಸಹಾಯ ಕಾರಣವಾಗಿದೆ ಹೀಗಾಗಿ ಈ ಆಂದೋಲನದಲ್ಲಿ ನಾನೊಬ್ಬ ಸಹಯಾನಿ ಮಾತ್ರ ಎಂದರು.

ಚಿಂತನದ ಪರವಾಗಿ  ಡಾ.ಎಂ.ಜಿ. ಹೆಗಡೆ ಮಾತನಾಡಿ ಈ ಸಂವಿಧಾನ ಓದು ಒಂದು ಆಂದೋಲನ ಸ್ವರೂಪ ತಾಳಲು ಕಾರಣವಾಗಿದ್ದು ಡಾ. ವಿಠ್ಠಲ ಭಂಡಾರಿ ಶ್ರಮ. ಸ್ವತಃ ಒಬ್ಬ ಅಧ್ಯಾಪಕನಾಗಿ, ಸಾಂಸ್ಕೃತಿಕ ಚಳವಳಿಯ ಒಬ್ಬ ಕಾರ್ಯಕರ್ತನಾಗಿ ಅವನು ಮಾಡಿದ ಅಪರಿಮಿತ ಶ್ರಮದಿಂದಾಗಿ ಈ ಸಂವಿಧಾನ ಓದು ರಾಜ್ಯದ ಎಲ್ಲ ವಿಭಾಗಗಳ ಜನರನ್ನು ತಲುಪುವಲ್ಲಿ ಸಫಲವಾಗಿದೆ ಎಂದರು

ಅಭಿಯಾನದಲ್ಲಿ ಪಾಲ್ಗೊಂಡ ಹಾಸನದ ಡಾ‌. ಭಾರತಿ ದೇವಿ ಮಾತನಾಡಿ, ಈ ಓದು ಆರಂಭಗೊಂಡಾಗ ನನಗದು ಅದ್ಬುತ ಮತ್ತು ರೋಮಾಂಚನಗೊಳಿಸಿತ್ತು. ಇವತ್ತಿನ ಸಂಕಟದ ಸಮಯದಲ್ಲಿ ನನ್ನ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಲು ಒಂದು ಸಾಧನವಾಯಿತು ಎಂದರು.

ದಾವಣಗೆರೆಯ ವಕೀಲ ಅನೀಸ್  ಪಾಷಾ ಮಾತನಾಡಿ, ಸಂವಿಧಾನ ಓದು ಈ ಪುಸ್ತಕ ಅದೊಂದು ಕಾನೂನಾತ್ಮಕ ದಾಟಿಯನ್ನು ಮೀರಿ ಸರಳ ಬರವಣಿಗೆಯನ್ನು ಅಳವಡಿಸಿಕೊಂಡಿದೆ ಹೀಗಾಗಿ ಪ್ರತಿಯೊಬ್ಬರು ಓದಿ ಅರ್ಥ ಮಾಡಿಕೊಡಲು ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ವರಮಹಾಲಕ್ಮೀ  ಸಂವಿಧಾನ ಓದು‌ವನ್ನು ‘ಹರಿಕಥೆ’ ಹಾಗೂ ಜನಪದ ಪ್ರಕಾರವಾಗಿ ಅಳವಡಿಸಿಕೊಂಡು ಪ್ರಸ್ತುತಪಡಿಸಿದರು. ನಾಡಿನಾದ್ಯಂತ ಈ ಆಂದೋಲನಲ್ಲಿ ಸಹಯಾನಿಗಳಾಗಿದ್ದ ನೂರಾರು ಕಾರ್ಯಕರ್ತರು ಆನ್ ಲೈನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಭಿಯಾನದಲ್ಲಿ ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ, ನರಸಿಂಹಮೂರ್ತಿ ಜಾಗೃತಿ ಗೀತೆಗಳನ್ನು ಹಾಡಿದರು.ಕೆ.ಎಸ್ ವಿಮಲ, ಸಮುದಾಯದ ಅಚ್ಯುತ್, ಸಹಯಾನದ ಯಮುನಾ ಗಾಂವ್ಕರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply