ಆರ್ಥಿಕ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವೈಫಲ್ಯ: ಸಿದ್ದರಾಮಯ್ಯ

5 years ago

ಬೆಂಗಳೂರು: ಕೊವಿಡ್ ಎರಡನೆಯ ಅಲೆ ಬರುತ್ತದೆ ಎಂದು ತಜ್ಞರು ವರದಿ ಕೊಟ್ಟರೂ ಸರ್ಕಾರದ ನಿರ್ಲಕ್ಷ್ಯದಿಂದ ಹಲವಾರು ಸಾವು, ನೋವು ಸಂಭವಿಸಿದವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರ, ರಾಜಾಜಿನಗರ ವಾರ್ಡ್ ನಲ್ಲಿ ಬಡವರು, ಕೂಲಿ ಕಾರ್ಮಿಕರು ಮತ್ತು ಆಟೋ ಚಾಲಕರು, ಸವಿತಾ ಸಮಾಜ, ಅರ್ಚಕರು, ಮಡಿವಾಳ ಸಮಾಜದವರಿಗೆ 5000 ದಿನಸಿ ಸಾಮಾಗ್ರಿಗಳ ಕಿಟ್ ವಿತರಣಾ ಸಮಾರಂಭದಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಧಾನಿ ಮನಮೋಹನ್ ಸಿಂಗ್ ರವರ ಆಡಳಿತದಲ್ಲಿ ಆರ್ಥಿಕ ಸುಧಾರಣೆಯಾಯಿತು. ಆರ್.ಟಿ.ಐ.ಮತ್ತು ಆರ್.ಟಿ.ಇ. ಹಾಗೂ ಆಹಾರ ಭದ್ರತೆ ಕಾಯಿದೆ ಜಾರಿಗೆ ಬಂತು. ಬಿ.ಜೆ.ಪಿ. ಕೇಂದ್ರ ಸರ್ಕಾರದ 7 ವರ್ಷದ ಆಡಳಿತದಲ್ಲಿ ಆರ್ಥಿಕ ಪರಿಸ್ಥಿತಿ ಆಧೋಗತಿಗೆ ಇಳಿದಿದೆ ಎಂದರು.

ಪೆಟ್ರೋಲ್ ಒಂದು ಲೀಟರ್ 100 ರೂಪಾಯಿ ಮತ್ತು ಡೀಸಲ್ ಒಂದು ಲೀಟರ್ 94 ರೂಪಾಯಿ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೆಸ್ ಕಡಿಮೆ ಮಾಡಬೇಕು. ರಾಜ್ಯ ಸರ್ಕಾರಕ್ಕೆ 15ನೇ ವೇತನ ಆಯೋಗದಿಂದ 5,495ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರ ಕೊಟ್ಟಿಲ್ಲ  ಎಂದರು.

ಕಾಂಗ್ರೆಸ್ ಸರ್ಕಾರ ಆಡಳಿತ ಅವಧಿಯಲ್ಲಿ ಪ್ರತಿಯೊಬ್ಬರಿಗೂ ತಲಾ 7 ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು. ಬಿ.ಜೆ.ಪಿ. ಸರ್ಕಾರ ಕಡಿತ ಮಾಡಿ ತಲಾ 2 ಕೆ.ಜಿ. ನೀಡುತ್ತಿದೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷದ ಸರ್ಕಾರ ಬರುವುದು ಖಚಿತ ತಲಾ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುವುದು  ಎಂದು ಭರವಸೆ ನೀಡಿದರು.

ಉದ್ಯೋಗ ಕಳೆದುಕೊಂಡಿರುವವರು ಹಾಗೂ  ಕೊವಿಡ್-19 ಸೋಂಕಿತರು ಮತ್ತು ಮೃತಪಟ್ಟವರಿಗೆ ಪರಿಹಾರ ನೀಡುವ ತನಕ ವಿಧಾನಸಭೆಯಲ್ಲಿ ಸತತ ಹೋರಾಟ ನಡೆಸೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.

ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಸತತ ಹೋರಾಟ ಮಾಡಿ ಕಾರ್ಮಿಕ ವರ್ಗ, ಅಸಂಘಟಿತ ಕಾರ್ಮಿಕರಿಗೆ 5 ಸಾವಿರ ರೂಪಾಯಿ ಮತ್ತು ಈ ವರ್ಷ 2 ಸಾವಿರ ರೂಪಾಯಿ ಪರಿಹಾರ ಕೊಡಿಸುವ ಸಲುವಾಗಿ ಹೋರಾಟ ಮಾಡಬೇಕಾಯಿತು. ಆದರೆ ಪರಿಹಾರ ಧನ ಇನ್ನು ಸಮರ್ಪಕವಾಗಿ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಬಡವರ ಪರ ಇರುವ ಪಕ್ಷ. ಕೊವಿಡ್ ನಿಂದ 18 ತಿಂಗಳ ಸಂಕಷ್ಟ ಸಮಯದಲ್ಲಿ ಬಡವರಿಗೆ ಸಹಾಯ ಮಾಡಬೇಕು ಎಂದು 223 ವಿಧಾನಸಭಾ ಕ್ಷೇತ್ರದಲ್ಲಿ ಆಹಾರ ಕಿಟ್ ಗಳನ್ನು ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ವಿತರಿಸಿದರು ಎಂದರು.

ಪ್ರತಿ ಜಿಲ್ಲೆ ಮತ್ತು ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಸರ್ವೆಯಲ್ಲಿ ಉದ್ಯೋಗ ಕಳೆದುಕೊಂಡವರು ಮತ್ತು ಕೊವಿಡ್ ಸೋಂಕಿತರು ಮತ್ತು ಮೃತಪಟ್ಟರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದರಲ್ಲಿ ಹೋರಾಟ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಮ್ ಅಹಮ್ಮದ್, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ರಿಜ್ವಾನ್ ಹರ್ಷದ್, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಮಾಜಿ ಮಹಾಪೌರರಾದ ಜಿ.ಪದ್ಮಾವತಿ, ರಾಮಚಂದ್ರಪ್ಪ, ಜೆ.ಹುಚ್ಚಪ್ಪ ಮತ್ತು ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಜಿ.ಕೃಷ್ಣಮೂರ್ತಿ ದಿನಸಿ ಸಾಮಗ್ರಿಗಳ ಆಹಾರ ಕಿಟ್ ವಿತರಿಸಿದರು.

Leave a Reply