ಬೆಂಗಳೂರು: ರಾಜ್ಯದಲ್ಲಿ ಶ್ರೀ ರಾಮ ನವಮಿ ರಾಜಕೀಯ ಪಕ್ಷಗಳ ಕಿತ್ತಾಟಕ್ಕೆ ವೇದಿಕೆ ಒದಗಿಸಿದೆ. ರಾಮನವಮಿ ಶುಭಕೋರಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ, “ಪ್ರಭು ಶ್ರೀ ರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸುವ… ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರದ ವಿರುದ್ಧವೇ ಸಮರ ಸಾರಿದ… ಪ್ರಭು ಶ್ರೀ ರಾಮಚಂದ್ರನ ರಾಮರಾಜ್ಯವನ್ನು ಟೀಕಿಸುವ… ಅಲ್ಪರ ಗುಂಪಿನ ‘Poster Boy’ ಮಾನ್ಯ ಸಿದ್ದರಾಮಯ್ಯನವರು ಇಂದು ‘ರಾಮಭಕ್ತನ’ ವೇಷ ತೊಟ್ಟು, ‘ಚುನಾವಣಾ ನಿಮಿತ್ತ ಬಹುಕೃತವೇಷ’ವೆಂಬ ನುಡಿಯ ಗೌರವ ಹೆಚ್ಚಿಸಿದ್ದಾರೆ” ಎಂದು ಸುಳ್ಳು ಹೊರಡಲು ಯತ್ನಿಸಿದೆ.
ಈ ಅಪಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲೇ ತಿರುಗೇಟು ನೀಡಿದ ಸಿದ್ದರಾಮಯ್ಯ, “ಮಹಾತ್ಮ ಗಾಂಧಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ, ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು. ರಾಮನ ಹೆಸರಿನಲ್ಲಿ ದ್ವೇಷಬಿತ್ತಿ, ಮನಸುಗಳನ್ನು ಒಡೆದು ಚುನಾವಣೆಯಲ್ಲಿ ಲಾಭ ಪಡೆಯುವವರು ನೀವು. ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣಾ ಸರಕು. ಶ್ರೀರಾಮನೇ ನಿಮಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, 40% ಕಮಿಷನ್ ಪಡೆದು, ಯುವ ಜನರಿಂದ 1 ಸರ್ಕಾರೀ ಹುದ್ದೆಗೆ 80 ಲಕ್ಷ ಕೇಳುವ ಬಿಜೆಪಿ ಪಕ್ಷದವರೇನಾದರೂ ತನಗೆ ದೇವಸ್ಥಾನವನ್ನು ಕಟ್ಟುತ್ತಿದ್ದಾರೆ ಎಂದು ತಿಳಿದರೆ ಆ ಶ್ರೀರಾಮನೇ ಬಿಜೆಪಿಗರ ಮೇಲೆ ಖಂಡಿತವಾಗಿ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದ. ಇಂದಿನ ಪೆಟ್ರೋಲ್, ಡೀಸೆಲ್ , ಅಡುಗೆ ಅನಿಲದ ಬೆಲೆ ಏರಿಕೆಯನ್ನು ನೋಡಿದ್ದರೆ ಇದು ರಾಮ ರಾಜ್ಯ ಖಂಡಿತಾ ಅಲ್ಲ ಎಂದು ರಾಮನೇ ಇವರಿಗೆ ಹೇಳುತ್ತಿದ್ದ ಎಂದು ತಿರುಗೇಟು ನೀಡಿದ್ದಾರೆ.




