ಚುನಾವಣೆ ಹತ್ತಿರಾಗುತ್ತಿದ್ದಂತೆ ಸಿಬಿಐ, ಇಡಿ ಬಳಸಿ ನನ್ನ ಕಟ್ಟಿ ಹಾಕಲು ಸಂಚು: ಡಿ.ಕೆ.ಶಿವಕುಮಾರ್

3 years ago

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಸಿಬಿಐ ಮತ್ತು ಇಡಿ ಅಧಿಕಾರಿಗಳನ್ನು ಬಳಸಿಕೊಂಡು ತಮ್ಮನ್ನು ಕಟ್ಟಿ ಹಾಕಲು ಸಂಚು ರೂಪಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ‌ ಶಿವಕುಮಾರ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳಿಗೆ ಸಿಬಿಐಯವರು ನೋಟಿಸ್ ಕಳಿಸಿದ್ದಾರೆ. ಕಾಲೇಜು ಫೀಸ್ ಕಟ್ಟಿದ್ದೆಲ್ಲ ಕೇಳುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.

ಫೆಬ್ರವರಿ 24ಕ್ಕೆ ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳುಕರೆದಿದ್ದಾರೆ. ನಾನು ಪ್ರಜಾಧ್ವನಿ ಯಾತ್ರೆ ಮಾಡೋದಾ? ಅಥವಾ ಇಡಿಯವರ ಬಳಿ ಹೋಗೋದಾ? ಎಂದರು.

ಪ್ರತಿಪಕ್ಷ ಮುಖಂಡರಾದ ನಮಗೆ ಮಾತ್ರ ಇಡಿಯವರು ಇರೋದು. ಆಡಳಿತ ಪಕ್ಷದವರಿಗೆ ಇಡಿ, ಸಿಬಿಐನವರು ಯಾರೂ ಇಲ್ಲ. ಇರಲಿ ನೋಡೋಣ ಏನಾಗುತ್ತೋ ಅಂತಾ ಎಂದರು.

ಮತ್ತೊಂದೆಡೆ ತೆರಿಗೆ ವಂಚನೆ ಮತ್ತು ಹವಾಲಾ ವಹಿವಾಟಿನ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆನ್ನು ಹತ್ತಿರುವ ಇಡಿ ಅಧಿಕಾರಿಗಳು ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.

ಶಿವಕುಮಾರ್ ಅವರ ಎಲ್ಲಾ ವ್ಯವಹಾರಗಳ ಮೇಲೆ ತೀವ್ರ ನಿಗಾ ಇಟ್ಟಿರುವ ಇಡಿ ತಂಡ ಅವರ ಎಲ್ಲಾ ಹಣಕಾಸಿನ ವಹಿವಾಟುಗಳ ವಿವರ ಸಂಗ್ರಹಿಸತೊಡಗಿದೆ. ಅಕ್ರಮ ಆಸ್ತಿ ಸಂಬಂಧ ಚಾರ್ಜ್ಶೀಟ್ ಸಲ್ಲಿಸಲು ಸಿಬಿಐ ತಯಾರು ಮಾಡಿಕೊಂಡಿದ್ದು, ಮಾರ್ಚ್ ತಿಂಗಳಲ್ಲಿ ಸಲ್ಲಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

Leave a Reply