ಯಶವಂತಪುರ: ವಲಸಿಗರು ಮತ್ತು ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರ ವಿಸ್ತೀರ್ಣದಲ್ಲಿ ಬೆಂಗಳೂರಿನಲ್ಲೇ ಅತ್ಯಂತ ದೊಡ್ಡ ಕ್ಷೇತ್ರವಾಗಿದೆ. ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೊದಲ ಬಾರಿಗೆ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದರು. ಆನಂತರ ಎರಡು ಬಾರಿ ಕಾಂಗ್ರೆಸ್ ನಿಂದ ಎಸ್.ಟಿ.ಸೋಮಶೇಖರ್ ಆಯ್ಕೆಯಾಗಿದ್ದು ಇದೀಗ ಬಿಜೆಪಿ ಸೇರಿ ಅವರು ಕಮಲ ಪಾಳಯದ ಸಿಪಾಯಿ ಆಗಿದ್ದಾರೆ. ಈ ಬಾರಿ ಅವರು ಜೆಡಿಎಸ್ ನ ಜವರಾಯಿಗೌಡ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.
ಮೂರು ಬಾರಿ ಸೋಮಶೇಖರ್ ವಿರುದ್ಧ ಸ್ಪರ್ಧಿಸಿ ಸೋತಿರುವ ಜವರಾಯಿಗೌಡ ಅದೇ ಅನುಕಂಪವನ್ನು ಮತದಾರರ ಮುಂದೆ ಇಟ್ಟು ತನ್ನನ್ನು ದಡ ಸೇರಿಸಿ ಎಂದು ಮೊರೆ ಇಡುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಇಲ್ಲಿ ಬಾಲರಾಜ ಗೌಡ ಸ್ಪರ್ಧಿಸಿದ್ದರೂ ಈ ಇಬ್ಬರ ಪೈಪೋಟಿಯ ಮುಂದೆ ಅವರೇನೂ ಅಲ್ಲ ಎಂಬಂತೆ ಆಗಿದೆ. ಚುನಾವಣೆಗೂ ಮುನ್ನ ನನ್ನ ಗೆಲುವು ನಿಶ್ಚಿತ ಎಂದು ಬೀಗುತ್ತಿದ್ದ ಎಸ್ ಟಿ ಸೋಮಶೇಖರ್ ಅವರಿಗೆ ಜವರಾಯಿ ಗೌಡ ನೀಡಿರುವ ಸವಾಲು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.



